ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಬುಗುಡನಹಳ್ಳಿ ಕೆರೆಯಲ್ಲಿ ತುಮಕೂರು ಮಹಾನಗರ ಪಾಲಿಕೆಯ ವಾರ್ಡ್‌ಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಪಂಪ್ ಸೆಟ್ ಹಾಳಾಗಿದ್ದು ಕೂಡಲೇ ಸರಿಪಡಿಸುವಂತೆ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಮನವಿ ಮಾಡಿದರು.ತುಮಕೂರು ಗ್ರಾಮಾಂತರದ ಬುಗುಡನಹಳ್ಳಿ ಜಲ ಸಂಗ್ರಹ ಕೆರೆ ಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆ ಹಾಗೂ ದುರಸ್ತಿಯಾಗಿರುವ ಪಂಪ್‌ಸೆಟ್‌ಗಳ ಬಗ್ಗೆ ಮಾಹಿತಿ ಪಡೆದ ನಂತರ ಅವರು ಮಾತನಾಡಿದರು.
ತುಮಕೂರು ಮಹಾನಗರ ಪಾಲಿಯ ಎಲ್ಲಾ ವಾರ್ಡ್‌ಗಳಿಗೆ ಬುಗುಡನಹಳ್ಳಿ ಕೆರೆಯಿಂದ ಹೇಮಾವತಿ ನೀರನ್ನು ಶುದ್ಧೀಕರಿಸಿ ಕುಡಿಯುವ ನೀರನ್ನಾಗಿ ಪರಿವರ್ತಿಸಿ ಸಾರ್ವಜನಿಕರಿಗೆ ಕುಡಿಯಲು ಸರಬರಾಜು ಮಾಡಲಾಗುತ್ತದೆ. ಆದರೆ ಎರಡು ಪಂಪ್ ಸೆಟ್ ಹಾಳಾದ ಕಾರಣ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜಾಗುತ್ತಿಲ್ಲ. ಇಲ್ಲಿನ ಸಮಸ್ಯೆಯನ್ನು ಅಧಿಕಾರಿಗಳು ಪರಿಶೀಲಿಸದಿದ್ದರೆ ಮುಂದಿನ ಎರಡು ದಿನದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವುದು ಎಂದರು.ಇಲ್ಲಿನ ಸಮಸ್ಯೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಸದ್ಯದಲ್ಲೇ ಸಮಸ್ಯೆ ಸರಿಪಡಿಸಿ ದುರಸ್ತಿಯಾಗಿರುವ ಪಂಪ್‌ಸೆಟ್ ಸರಿಪಡಿಸಿ ನೀರು ಸರಬರಾಜು ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ತುಮಕೂರು ವ್ಯಾಪ್ತಿಯಲ್ಲಿರುವ 26 ಕೆರೆಗಳಿಗೆ ಇಂಟರ್ ಲಿಂಕಿಂಗ್ ಆಗಬೇಕಿದೆ. ಹೇಮಾವತಿಯಿಂದ ಜಾರಿಯಾಗಿರುವ 1.32 ಟಿಎಂಸಿ ನೀರನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಂಡು ದಿನದ 24 ಗಂಟೆಯೂ ಪರಿಶುದ್ಧವಾದ ನೀರು ಸರಬರಾಜು ಮಾಡಿದರೇ 3 ಲಕ್ಷ ಜನಸಂಖ್ಯೆವುಳ್ಳ ತುಮಕೂರು ನಗರ ಸ್ಮಾರ್ಟ್ ಸಿಟಿ ಆಗುವುದಕ್ಕೆ ದಾಪುಗಾಲಿಡುತ್ತಿದೆ. ಹಾಗೆಯೇ ಕೈಗಾರಿಕಾ ಪ್ರದೇಶಗಳಾದ ವಸಂತನರಸಾಪುರ, ಅಂತರಸನಹಳ್ಳಿ, ಸತ್ಯಮಂಗಲ, ಹಿರೇಹಳ್ಳಿ ಕೈಗಾರಿಕಾ ಪ್ರದೇಶಗಳಿಗೆ ವ್ಯವಸ್ಥಿತವಾದ ನೀರಿನ ಅನುಕೂಲತೆ ಮಾಡಿಕೊಡಬೇಕು ಎಂದರು.ಇಲ್ಲಿನ ಕೈಗಾರಿಕಾ ಪ್ರದೇಶಗಳು ಅಭಿವೃದ್ಧಿಯಾದರೆ ಅಂತಾರಾಷ್ಟ್ರೀಯ ಮಟ್ಟದ ಕೈಗಾರಿಕೆಗಳು ಬಂದು, ಇಲ್ಲಿನ ಕಾರ್ಮಿಕರಿಗೆ ಕೆಲಸ ಸಿಗುತ್ತದೆ ಎಂದರು.ರಾಜ್ಯದಲ್ಲಿರುವ ಕಾಂಗ್ರೆಸ್ ಪಕ್ಷ ಜನರ ಪರವಾಗಿ ಕೆಲಸ ಮಾಡುತ್ತಿದೆ. ಹಾಗಾಗಿ ತುಮಕೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಸರಕಾರ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದು ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದರು.
ಟೂಡಾ ಮಾಜಿ ಅಧ್ಯಕ್ಷ ಸಿದ್ದಲಿಂಗೇಗೌಡ ಮಾತನಾಡಿ, ತುಮಕೂರು ಮಹಾನಗರ ಪಾಲಿಕೆಯ ಜನರು ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಬುಗುಡನಹಳ್ಳಿ ಕೆರೆಯ ಶುದ್ಧೀಕರಣ ಘಟಕದಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ದೂರಿದರು.ಕೆಪಿಸಿಸಿ ಒಬಿಸಿ ಘಟಕದ ರಾಜ್ಯಉಪಾಧ್ಯಕ್ಷ ರೇವಣಸಿದ್ದಯ್ಯ ಮಾತನಾಡಿ, ರಾಜಧಾನಿಗೆ ಹತ್ತಿರವಿರುವ ತುಮಕೂರು ಮಹಾನಗರ ಪಾಲಿಕೆ ವೇಗವಾಗಿ ಬೆಳೆಯುತ್ತಿದ್ದು, ಜನಸಂಖ್ಯೆಯೂ ವೇಗಮಿತಿಯಲ್ಲಿ ಬೆಳೆಯುತ್ತಿದೆ. ಅದ್ದರಿಂದ ಮಹಾನಗರ ಪಾಲಿಕೆಯ ಆಡಳಿತ ನಗರದ ಜನರಿಗೆ ಎದುರಾಗಿರುವ ನೀರಿನ ಭವಣೆಯನ್ನು ನಿವಾರಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ವಾಲೆ ಚಂದ್ರಯ್ಯ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹನುಮಂತಯ್ಯ, ಪಾಲಿಕೆ ಸದಸ್ಯ ಮಹಮದ್ ಪೀರ್, ಮಹೇಶ್, ಸಂಜೀವ್‌ಕುಮಾರ್, ತರುಣೇಶ್, ಆಧೀಲ್‌ಖಾನ್, ಜೈನ್‌ಖಾನ್, ಗಿರೀಶ್, ಜೈನ್‌ಷರೀಪ್, ಸುಕನ್ಯ, ಪ್ರೇಮಾ ಮುಂತಾದವರಿದ್ದರು.