ಸೊಗಡು ಶಿವಣ್ಣರಿಗೆ ಪರಿಷತ್ ಸ್ಥಾನ ನೀಡಲು ಮನವಿ

| Published : May 25 2024, 12:45 AM IST

ಸಾರಾಂಶ

ಸೊಗಡು ಶಿವಣ್ಣನವರು ಶಾಸಕರಾಗಿದ್ದ ಅವಧಿಯಲ್ಲಿ ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದಾರೆ, ಜಾತಿ ಬೇಧ ಮಾಡದೇ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಜನಸಾಮಾನ್ಯರ ನಾಯಕರಾಗಿ ಹೆಸರಾಗಿದ್ದಾರೆ. ಇವರಿಗೆ ಬಿಜೆಪಿ ಸೂಕ್ತವಾದ ಸ್ಥಾನಮಾನ ನೀಡಿ ಅವರ ಕೊಡುಗೆ, ಹಿರಿತನವನ್ನು ಗೌರವಿಸಬೇಕು.

ಕನ್ನಡಪ್ರಭ ವಾರ್ತೆ ತುಮಕೂರುಮಾಜಿ ಸಚಿವ ಸೊಗಡು ಶಿವಣ್ಣ ಅವರು ಜಿಲ್ಲೆಗೆ ಹಾಗೂ ಪಕ್ಷಕ್ಕೆ ನೀಡಿದ ಕೊಡುಗೆ ಪರಿಗಣಿಸಿ, ಇವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಬೇಕು ಎಂದು ಬಿಜೆಪಿಯ ವಿವಿಧ ಮುಖಂಡರು, ಹಲವು ಸಮಾಜದ ಪ್ರಮುಖರು ಬಿಜೆಪಿ ವರಿಷ್ಠರಿಗೆ ಮನವಿ ಮಾಡಿದ್ದಾರೆ.ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ರಾಜ್ಯದಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬಾರದಿದ್ದ ಕಾಲದಿಂದಲೂ ತುಮಕೂರಿನಲ್ಲಿ ಬಿಜೆಪಿಯಿಂದ ಶಾಸಕರಾಗಿ ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದ ಸೊಗಡು ಶಿವಣ್ಣನವರು, ಎರಡು ಬಾರಿ ಸಚಿವರಾಗಿದ್ದರು. ಜನಪರ ಹೋರಾಟಗಳ ಮೂಲಕ ಜನಾನುರಾಗಿ ನಾಯಕರಾಗಿ ಎಲ್ಲಾ ವರ್ಗದ ಜನರ ವಿಶ್ವಾಸದೊಂದಿಗೆ ಇಂದಿಗೂ ಜನಪರ ಕೆಲಸ ಮಾಡುತ್ತಿದ್ದಾರೆ. ಇವರಿಗೆ ವಿಧಾನ ಪರಿಷತ್ ಸ್ಥಾನ ನೀಡಬೇಕು ಎಂದು ಕೋರಿದರು.ವೀರಶೈವ ಸಮಾಜ ಸೇವಾ ಸಮಿತಿ ಉಪಾಧ್ಯಕ್ಷ ಎಸ್.ಜಿ. ಚಂದ್ರಮೌಳಿ ಮಾತನಾಡಿ, ಸೊಗಡು ಶಿವಣ್ಣನವರು ಶಾಸಕರಾಗಿದ್ದ ಅವಧಿಯಲ್ಲಿ ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದಾರೆ, ಜಾತಿ ಬೇಧ ಮಾಡದೇ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಜನಸಾಮಾನ್ಯರ ನಾಯಕರಾಗಿ ಹೆಸರಾಗಿದ್ದಾರೆ. ಇವರಿಗೆ ಬಿಜೆಪಿ ಸೂಕ್ತವಾದ ಸ್ಥಾನಮಾನ ನೀಡಿ ಅವರ ಕೊಡುಗೆ, ಹಿರಿತನವನ್ನು ಗೌರವಿಸಬೇಕು ಎಂದು ಹೇಳಿದರು.ಸತತ ನಾಲ್ಕು ಬಾರಿ ತುಮಕೂರು ಕ್ಷೇತ್ರದಿಂದ ಗೆದ್ದು ಶಾಸಕರಾಗುವ ಜೊತೆಗೆ ಜಿಲ್ಲೆಯಲ್ಲಿ ಬಿಜೆಪಿಯ ಸಂಘಟನೆಯಲ್ಲೂ ಸೊಗಡು ಶಿವಣ್ಣನವರ ಕೊಡುಗೆ ಅಪಾರವಾಗಿದೆ. ಪಕ್ಷದ ಬೆಳವಣಿಗೆಗೆ ನೆರವಾದ ಇವರಿಗೆ ಪಕ್ಷವೂ ಸೂಕ್ತ ಸ್ಥಾನ ಕೊಟ್ಟು ಇವರ ಸೇವೆಯನ್ನು ಸ್ಮರಿಸಬೇಕು ಎಂದರು.ವೀರಶೈವ ಸಮಾಜದ ಮುಖಂಡ ಹೆಬ್ಬಾಕ ಮಲ್ಲಿಕಾರ್ಜುನ್ ಮಾತನಾಡಿ, ಬಿಜೆಪಿ ಬೆಳವಣಿಗೆಗೆ ಸಾಮಾನ್ಯ ಕಾರ್ಯಕರ್ತರಾಗಿ ದುಡಿದ ಸೊಗಡು ಶಿವಣ್ಣನವರು ಪಕ್ಷವನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ದು ಸಂಘಟನೆ ಮಾಡಿದವರು, ಇಂತಹವರು ಪಕ್ಷದಲ್ಲಿ ಜವಾಬ್ದಾರಿ ಸ್ಥಾನದಲ್ಲಿದ್ದರೆ ಪಕ್ಷದ ಬಲವರ್ಧನೆಗೆ ಅನುಕೂಲವಾಗುತ್ತದೆ. ಇದೆಲ್ಲವನ್ನೂ ಪರಿಗಣಿಸಿ ಸೊಗಡು ಶಿವಣ್ಣನವರಿಗೆ ಈ ಬಾರಿ ವಿಧಾನ ಪರಿಷತ್ ಪದವಿ ನೀಡಲು ಬಿಜೆಪಿ ನಾಯಕರು ಸಹಕರಿಸಬೇಕು ಎಂದು ಕೋರಿದರು.ಎಪಿಎಂಸಿ ಮಾಜಿ ಅಧ್ಯಕ್ಷ ಪಂಚಾಕ್ಷರಯ್ಯ ಮಾತನಾಡಿ, ಪಕ್ಷ ಹಾಗೂ ಜನ ಸಂಕಷ್ಟದಲ್ಲಿದ್ದಾಗ ಎಂದೂ ಕೈ ಬಿಡದೇ ಬೆಂಬಲವಾಗಿ ನಿಲ್ಲುವ ಸಾಮರ್ಥ್ಯವಿರುವ ಸೊಗಡು ಶಿವಣ್ಣನವರು, ಈ ಜಿಲ್ಲೆಯ ಬಿಜೆಪಿಯ ಸಮರ್ಥ ನಾಯಕ. ಇವರಿಗೆ ಸರಿಯಾದ ಸ್ಥಾನಮಾನ ನೀಡಿದರೆ ಪಕ್ಷಕ್ಕೂ ದೊಡ್ಡ ಶಕ್ತಿ ಬರುತ್ತದೆ. ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಗೆಲುವಿಗೆ ಸಹಾಯವಾಗುತ್ತದೆ ಎಂದು ಹೇಳಿದರು.

ಕೊರೋನಾ ಸಂದರ್ಭದಲ್ಲಿ ಹಲವು ನಾಯಕರು ಮನೆಯಲ್ಲಿ ಉಳಿದಿದ್ದರು. ಆದರೆ ಸೊಗಡು ಶಿವಣ್ಣನವರು ಜೀವದ ಹಂಗು ತೊರೆದು ಸಂಕಷ್ಟದಲ್ಲಿರುವವರಿಗೆ ನೆರವಾದರು. ಹಸಿದವರಿಗೆ ಅನ್ನದ ವ್ಯವಸ್ಥೆ ಮಾಡಿದರು. ಕೊರೋನಾ ಸೋಂಕಿನಿಂದ ಮೃತರಾದವನ್ನು ಅವರ ಕುಟುಂಬದವರೇ ಮುಟ್ಟಲಾಗದ ಪರಿಸ್ಥಿತಿಯಲ್ಲಿ ಸೊಗಡು ಶಿವಣ್ಣನವರು ಸ್ಮಶಾನದಲ್ಲಿ ಮುಂದೆ ನಿಂತು ಶವಸಂಸ್ಕಾರಕ್ಕೆ ನೆರವಾದರು. ಇಂದು ಇಂತಹ ನಾಯಕರ ಅಗತ್ಯವಿದೆ. ಇವರ ಜನಸೇವೆ, ಪಕ್ಷ ಸಂಘಟನೆ ಪರಿಗಣಿಸಿ ವಿಧಾನ ಪರಿಷತ್ ಸ್ಥಾನ ಕೊಡಬೇಕು ಎಂದು ಬಿಜೆಪಿ ನಾಯಕರಲ್ಲಿ ಮನವಿ ಮಾಡಿದರು.ಸ್ನೇಹಸಂಗಮ ಸಹಕಾರ ಸಂಘದ ಅಧ್ಯಕ್ಷ ಬಾವಿಕಟ್ಟೆ ಮಂಜುನಾಥ್, ಮುಖಂಡರಾದ ನಂಜುಂಡಪ್ಪ, ಪುರವರ ಮೂರ್ತಿ, ಡೆಲ್ಟಾ ರವಿ, ಪ್ರಭಾಕರ್, ಯಶಸ್, ಏಕಾಂತ್, ಮಹದೇವಯ್ಯ, ರವಿಕುಮಾರ್, ಮಂಜುನಾಥ್ ಮೊದಲಾದವರು ಹಾಜರಿದ್ದರು.

ಶಿವಣ್ಣನವರ ಹೇಮಾವತಿ ಹೋರಾಟಕ್ಕೆ ಶಕ್ತಿ ತುಂಬಿ:

ಜಿಲ್ಲೆಯ ಜನರ ಕುಡಿಯುವ ನೀರಿಗೆ ಮಾರಕವಾಗಲಿರುವ ಮಾಗಡಿ, ಕನಕಪುರಕ್ಕೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ವಿರುದ್ಧ ಹೋರಾಟಕ್ಕಿಳಿದಿರುವ ಸೊಗಡು ಶಿವಣ್ಣನವರಿಗೆ ಜಿಲ್ಲೆಯ ಜನರೂ ಬೆಂಬಲ ನೀಡಿ ಅವರೊಂದಿಗೆ ಹೋರಾಟಕ್ಕಿಳಿಯಬೇಕು. ಬಿಜೆಪಿ ಪಕ್ಷವೂ ಶಿವಣ್ಣನವರಿಗೆ ಯೋಗ್ಯಸ್ಥಾನ ನೀಡಿ ಅವರ ಹೋರಾಟಕ್ಕೆ ಶಕ್ತಿ ತುಂಬಬೇಕು ಎಂದು ಹೇಳಿದರು.ಕನ್ನಡ ಸೇನೆಯ ಜಿಲ್ಲಾ ಅಧ್ಯಕ್ಷ ಧನಿಯಾ ಕುಮಾರ್ ಮಾತನಾಡಿ, ಜಿಲ್ಲೆಯ ಜನ ಇಂದು ಹೇಮಾವತಿ ನೀರು ಕುಡಿಯುತ್ತಿದ್ದಾರೆಂದರೆ ಅದರ ಹಿಂದೆ ದಿ.ವೈ.ಕೆ.ರಾಮಯ್ಯ ಹಾಗೂ ಸೊಗಡು ಶಿವಣ್ಣನವರ ಹೋರಾಟದ ಫಲ ಕಾರಣ. ಅಂದಿನ ರಾಜಕೀಯ ವ್ಯವಸ್ಥೆಯಲ್ಲಿ ಈ ಇಬ್ಬರು ನಾಯಕರು ತೊಡೆತಟ್ಟಿ ನಿಂತು ಜಿಲ್ಲೆಗೆ ಹೇಮಾವತಿ ನೀರು ಹರಿಯಲು ಕಾರಣರಾದರು. ಇವರ ಸೇವೆಯನ್ನು ಜಿಲ್ಲೆಯ ಜನ ಮರೆಯುವಂತಿಲ್ಲ, ಈಗ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರುದ್ಧ ಸೊಗಡು ಶಿವಣ್ಣನವರು ತೊಡೆತಟ್ಟಿ ಹೋರಾಟಕ್ಕೆ ನಿಂತಿದ್ದಾರೆ. ಇಂತಹ ಹೋರಾಟ ಮನೋಭಾವದ ಪ್ರಬಲ ನಾಯಕ ಸೊಗಡು ಶಿವಣ್ಣನವರಿಗೆ ಬಿಜೆಪಿಯು ಎಂಎಲ್‌ಸಿ ಸ್ಥಾನ ನೀಡಿ ಮತ್ತಷ್ಟು ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.