ಸಮೀಕ್ಷೆಯಲ್ಲಿ ಲಿಂಗಾಯತ ರಡ್ಡಿ ನಮೂದಿಸಲು ಮನವಿ

| Published : Sep 25 2025, 01:00 AM IST

ಸಮೀಕ್ಷೆಯಲ್ಲಿ ಲಿಂಗಾಯತ ರಡ್ಡಿ ನಮೂದಿಸಲು ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಲಿಂಗಾಯತ ಸಮುದಾಯದ ಜನ ಗೊಂದಲಕ್ಕೆ ಒಳಗಾಗದೆ ವೀರಶೈವ ಲಿಂಗಾಯತ ಮಹಾಸಭಾ ಕೈಗೊಂಡ ನಿರ್ಣಯದಂತೆ ಸಮೀಕ್ಷೆಯಲ್ಲಿ ಮಾಹಿತಿ ನಮೂದಿಸಬೇಕು ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ವಿನಂತಿಸಿದರು.

ಗದಗ: ರಾಜ್ಯದ ರಡ್ಡಿ ಸಮುದಾಯದವರು ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ಅಧಿಕೃತ ಭಾವಚಿತ್ರವನ್ನೇ ಬಳಸಬೇಕು. ಸಾಮಾಜಿಕ,‌ ಶೈಕ್ಷಣಿಕ ಸಮೀಕ್ಷೆಯಲ್ಲಿ ಲಿಂಗಾಯತ ರಡ್ಡಿ ಎಂದೇ ನಮೂದಿಸಬೇಕು ಎಂದು ಕರ್ನಾಟಕ ರಾಜ್ಯ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ವೀರಶೈವ ಲಿಂಗಾಯತ ರಡ್ಡಿ ಸಮಾಜದ ಉಪಾಧ್ಯಕ್ಷ, ರೋಣ ಶಾಸಕ ಜಿ.ಎಸ್. ಪಾಟೀಲ ಮನವಿ ಮಾಡಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಡ್ಡಿ ಸಮಾಜದವರು ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ, ಜಾತಿ ಕಾಲಂನಲ್ಲಿ ರಡ್ಡಿ ಲಿಂಗಾಯತ, ಉಪಜಾತಿ ಕಾಲಂನಲ್ಲಿ ರಡ್ಡಿ ಲಿಂಗಾಯತ ಎಂದೇ ನಮೂದಿಸಬೇಕು ಎಂದು ಸ್ಪಷ್ಟಪಡಿಸಿದರು.ವೈಷ್ಣವ ಸಂಪ್ರದಾಯಕ್ಕೆ ಸೇರಿದ ಕೆಲ ರಾಜಕೀಯ ಮುಖಂಡರು ಮೀಸಲಾತಿ ಕಳೆದುಕೊಳ್ಳುತ್ತೇವೆ ಎನ್ನುವ ವದಂತಿ ಹರಿಬಿಟ್ಟು ಮತ್ತು ತಮ್ಮ ಸಂಖ್ಯೆಯನ್ನು ಹೆಚ್ಚು ತೋರಿಸಿಕೊಳ್ಳಲು ಹಿಂದೂ ರಡ್ಡಿ ಎಂದು ನಮೂದಿಸುವಂತೆ ಪ್ರಚಾರ ನಡೆಸುತ್ತಿದ್ದಾರೆ. ರಾಜ್ಯದ ಲಿಂಗಾಯತ ಸಮುದಾಯದ ಜನ ಗೊಂದಲಕ್ಕೆ ಒಳಗಾಗದೆ ವೀರಶೈವ ಲಿಂಗಾಯತ ಮಹಾಸಭಾ ಕೈಗೊಂಡ ನಿರ್ಣಯದಂತೆ ಸಮೀಕ್ಷೆಯಲ್ಲಿ ಮಾಹಿತಿ ನಮೂದಿಸಬೇಕು ಎಂದು ವಿನಂತಿಸಿದರು.ಅಧಿಕೃತ ಚಿತ್ರ: ಇಷ್ಟಲಿಂಗ ಪೂಜೆ ಮಾಡುತ್ತಿರುವ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ಭಾವಚಿತ್ರವನ್ನೆ ಅಧಿಕೃತವಾಗಿ ಬಳಕೆ ಮಾಡಬೇಕು ಎಂದು 2016ರಲ್ಲಿ ಸರ್ಕಾರ ಆದೇಶ ಮಾಡಿದೆ. ವೀರಶೈವ ಲಿಂಗಾಯತ ರಡ್ಡಿ ಸಮಾಜವೂ ಇದೇ ಚಿತ್ರವನ್ನು ಅಧಿಕೃತವಾಗಿ ಬಳಕೆ ಮಾಡುತ್ತಿದೆ. ಆದರೂ ಕೆಲ ವೈಷ್ಣವ ಪರಂಪರೆಯ ಮುಖಂಡರು, ಸ್ಥಾವರ ಲಿಂಗಕ್ಕೆ ಕೈ ಮುಗಿದು ನಮಸ್ಕರಿಸುವ ಚಿತ್ರವನ್ನು ಬಳಕೆ ಮಾಡುತ್ತಿರುವುದು ಸರಿಯಲ್ಲ ಎಂದರು.ಈ ಸಮೀಕ್ಷೆ ಕೇವಲ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆಗಿರುವುದರಿಂದ, ಈಗಾಗಲೇ ನಾವು ಪಡೆದುಕೊಳ್ಳುತ್ತಿರುವ ಮೀಸಲಾತಿಗೆ ಯಾವುದೇ ಧಕ್ಕೆ ಆಗುವುದಿಲ್ಲ. ನಾವೆಲ್ಲರೂ ಧೈರ್ಯವಾಗಿ ನಮ್ಮ ಸಮಾಜದ ಸಂಪ್ರದಾಯ, ಸಂಸ್ಕೃತಿಯನ್ನು ರಕ್ಷಣೆ ಮಾಡಿಕೊಂಡು ಮುಂದಿನ ಜನಾಂಗಕ್ಕೆ ನೀಡಬೇಕಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಸ್.ಎಸ್. ಪಾಟೀಲ, ವಿಶ್ವನಾಥ ಚಿಂಚಲಿ, ಕುಮಾರಣ್ಣ ಗಡಗಿ, ಸುರೇಶ ಯಳ್ಳುರ, ಮಂಜುನಾಥ ಭಗವತಿ, ಸಿದ್ದಣ್ಣ ಕವಲೂರ, ಭೀಮರಡ್ಡೆಪ್ಪ, ಮಹೇಶ ಗಡಗಿ, ಜಗದೀಶ ಅವರೆಡ್ಡಿ, ನಾಗರಾಜ ಚನ್ನಳ್ಳಿ ಇತರರು ಉಪಸ್ಥಿತರಿದ್ದರು.