ಹಳಿಯಾಳ ಪಟ್ಟಣದ ವೃತ್ತಗಳಿಗೆ ನಾಮಫಲಕ ಅಳವಡಿಸಲು ಮನವಿ

| Published : Jul 06 2025, 11:48 PM IST

ಹಳಿಯಾಳ ಪಟ್ಟಣದ ವೃತ್ತಗಳಿಗೆ ನಾಮಫಲಕ ಅಳವಡಿಸಲು ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಹಳಿಯಾಳ ಪುರಸಭೆಯಲ್ಲಿ ತೆರಿಗೆ ವಿಭಾಗಕ್ಕೆ ವಿಶಾಲವಾದ ಕೊಠಡಿ ಒದಗಿಸಬೇಕು ಹಾಗೂ ಪಟ್ಟಣದಲ್ಲಿನ ವಿವಿಧ ವೃತ್ತಗಳಿಗೆ ನಾಮಫಲಕ ಅಳವಡಿಸಬೇಕು ಎಂದು ಹಳಿಯಾಳ ತಾಲೂಕ ಕರವೇ ಘಟಕದಿಂದ ಶಾಸಕ ಆರ್‌.ವಿ. ದೇಶಪಾಂಡೆ ಹಾಗೂ ಪುರಸಭೆ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ ಅವರಿಗೆ ಮನವಿ ಸಲ್ಲಿಸಲಾಯಿತು.

ಹಳಿಯಾಳ: ಪುರಸಭೆಯಲ್ಲಿ ತೆರಿಗೆ ವಿಭಾಗಕ್ಕೆ ವಿಶಾಲವಾದ ಕೊಠಡಿ ಒದಗಿಸಬೇಕು ಹಾಗೂ ಪಟ್ಟಣದಲ್ಲಿನ ವಿವಿಧ ವೃತ್ತಗಳಿಗೆ ನಾಮಫಲಕ ಅಳವಡಿಸಬೇಕು ಎಂದು ಹಳಿಯಾಳ ತಾಲೂಕ ಕರವೇ ಘಟಕ ಆಗ್ರಹಿಸಿದೆ.

ಹಳಿಯಾಳ ತಾಲೂಕು ಕರವೇ ಘಟಕದ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ ಅಧ್ಯಕ್ಷತೆಯಲ್ಲಿ ಕರವೇ ಪದಾಧಿಕಾರಿಗಳ ನಿಯೋಗವು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರನ್ನು ಹಾಗೂ ಪುರಸಭೆಯ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ ಅವರನ್ನು ಭೇಟಿಯಾಗಿ ಸಾರ್ವಜನಿಕರ ಪರವಾಗಿ ಮನವಿ ಸಲ್ಲಿಸಿತು.

ಹಳಿಯಾಳ ಪುರಸಭೆಯ ನೂತನ ಕಟ್ಟಡದಲ್ಲಿ ಎಲ್ಲ ವಿಭಾಗಗಳಿಗೆ ಸುಸಜ್ಜಿತವಾದ ಕೊಠಡಿಗಳನ್ನು ಒದಗಿಸಲಾಗಿದೆ. ಆದರೆ ಅವಶ್ಯಕವಾದ ತೆರಿಗೆ ವಿಭಾಗವು ಅತಿ ಸಣ್ಣದಾಗಿದೆ. ಇದರಿಂದ ಪ್ರತಿನಿತ್ಯ ತೆರಿಗೆ ಸೇರಿದಂತೆ ಖಾತಾ ಬದಲಾವಣೆ, ಆಸ್ತಿಯ ಉತಾರ ಸೇರಿದಂತೆ ಇತರ ಕೆಲಸ ಕಾರ್ಯಗಳಿಗೆ ಬರುವ ಜನರಿಗೆ ನಿಲ್ಲಲು ಹಾಗೂ ಕುಳಿತುಕೊಳ್ಳಲು ಸೂಕ್ತ ಸ್ಥಳಾವಕಾಶವಿಲ್ಲದೇ ಸಾರ್ವಜನಿಕರಿಗೆ ಅದರಲ್ಲೂ ಹಿರಿಯ ನಾಗರಿಕರಿಗೆ ಸಮಸ್ಯೆಯಾಗುತ್ತದೆ. ಅದಕ್ಕಾಗಿ ಸದ್ಯ ಇರುವ ತೆರಿಗೆ ವಿಭಾಗಕ್ಕೆ ವಿಶಾಲವಾದ ಸ್ಥಳವಿರುವ ಕೊಠಡಿಗೆ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ನಾಮಫಲಕ ಅಳವಡಿಸಿ: ಪಟ್ಟಣದಲ್ಲಿನ ಪ್ರಮುಖ ವೃತ್ತಗಳಿಗೆ ನಾಮಫಲಕಗಳನ್ನು ಅಳವಡಿಸಬೇಕು. ವನಶ್ರೀ ವೃತ್ತದಲ್ಲಿ (ರಾಣಿ ಚೆನ್ನಮ್ಮ ವೃತ್ತ), ತಾಲೂಕು ಆಸ್ಪತ್ರೆ ವೃತ್ತಕ್ಕೆ (ಬಸವೇಶ್ವರ ವೃತ್ತ), ಅರ್ಬನ್ ಬ್ಯಾಂಕ್ ವೃತ್ತಕ್ಕೆ (ಸಂಗೊಳ್ಳಿ ರಾಯಣ್ಣ ವೃತ್ತ), ಪೊಲೀಸ್‌ ಠಾಣೆ ಎದುರು (ಶಿವಾಜಿ ವೃತ್ತ) ಹಾಗೂ ಯಲ್ಲಾಪುರ ನಾಕಾ ಬಳಿ (ಅಂಬೇಡ್ಕರ್ ವೃತ್ತ) ಎಂಬ ನಾಮಫಲಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ತಾಲೂಕು ಕರವೇ ಘಟಕ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಗೌರವ ಅಧ್ಯಕ್ಷ ವಿಜಯ ಪಡ್ನೀಸ್, ಪದಾಧಿಕಾರಿಗಳಾದ ಚಂದ್ರಕಾಂತ ದುರ್ವೆ, ಸುರೇಶ ಕೋಕಿತಕರ, ಸುಧಾಕರ ಕುಂಬಾರ, ಅಶೋಕ ಪಾಟೀಲ, ಶಿವು ಡಮ್ಮಣಗಿಮಠ, ಆನಂದ ಮಠಪತಿ, ವಿನೋದ ಗಿಂಡೆ, ಲಕ್ಷ್ಮಣ ಪೆಡ್ನೇಕರ, ತಿಪ್ಪಣ್ಣ ಕಲಗುಡಿ, ಸಂತೋಷ ದಂಡಿ, ಅರ್ಜುನ ಗರಗ ಇದ್ದರು..