ಹೆದ್ದಾರಿ ಜೋಡಿಸುವ ಸ್ಪರ್ ರಸ್ತೆ ನಿರ್ಮಾಣಕ್ಕೆ ಸಚಿವ ಗಡ್ಕರಿಗೆ ಮನವಿ

| Published : Mar 29 2025, 12:35 AM IST

ಹೆದ್ದಾರಿ ಜೋಡಿಸುವ ಸ್ಪರ್ ರಸ್ತೆ ನಿರ್ಮಾಣಕ್ಕೆ ಸಚಿವ ಗಡ್ಕರಿಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಕೊಲ್ಲೂರು ದೇವಸ್ಥಾನಗಳಿಗೆ ಯಾತ್ರಾರ್ಥಿಗಳಿಗೆ ಬಂದು ಹೋಗುವುದಕ್ಕೆ ಅನುಕೂಲವಾಗುವಂತೆ ಪೆರಿಯಶಾಂತಿ-ಪೈಚಾರ್ ಹಾಗೂ ಗುರುವಾಯನಕೆರೆ-ಬಜಗೋಳಿ ನಡುವೆ ಸ್ಪರ್ ರಸ್ತೆ ನಿರ್ಮಿಸುವಂತೆ ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಕೊಲ್ಲೂರು ದೇವಸ್ಥಾನಗಳಿಗೆ ಯಾತ್ರಾರ್ಥಿಗಳಿಗೆ ಬಂದು ಹೋಗುವುದಕ್ಕೆ ಅನುಕೂಲವಾಗುವಂತೆ ಪೆರಿಯಶಾಂತಿ-ಪೈಚಾರ್ ಹಾಗೂ ಗುರುವಾಯನಕೆರೆ-ಬಜಗೋಳಿ ನಡುವೆ ಸ್ಪರ್ ರಸ್ತೆ ನಿರ್ಮಿಸುವಂತೆ ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಅವರ ಜತೆಗೆ ಗುರುವಾರ ದೆಹಲಿಯಲ್ಲಿ ಗಡ್ಕರಿ ಅವರನ್ನು ಭೇಟಿ ಮಾಡಿರುವ ಕ್ಯಾ. ಚೌಟ ಅವರು, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯಲ್ಲಿರುವ ಪ್ರಮುಖ ದೇವಸ್ಥಾನಗಳನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಗಳನ್ನು ಸಂಪರ್ಕಿಸುವ ಈ ಎರಡು ಸ್ಪರ್‌ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಇಲ್ಲಿಗೆ ಬರುವ ಯಾತ್ರಾರ್ಥಿಗಳಿಗೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ವಿನಂತಿಸಿದ್ದಾರೆ.

ರಾ.ಹೆ -75 ಹಾಗೂ ರಾ.ಹೆ 275ನ್ನು ಸಂಪರ್ಕಿಸುವ ಪೆರಿಯಶಾಂತಿ-ಪೈಚಾರು ರಸ್ತೆಯನ್ನು ಸ್ಪರ್‌ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಬೇಕು. ಸದ್ಯ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬರುವಾಗ ಬೆಂಗಳೂರು ಕಡೆಯ ಯಾತ್ರಾರ್ಥಿಗಳು ಶಿರಾಡಿ ಘಾಟಿ ಮೂಲಕ ರಾ.ಹೆ-75 ಹಾಗೂ ಕೇರಳ ಕಡೆಯಿಂದ ಬರುವವರು ರಾ.ಹೆ- 275 ಹೆದ್ದಾರಿಯನ್ನು ದಾಟಿ ಬರಬೇಕು. ಹೀಗಿರುವಾಗ ರಾ.ಹೆ-75 ಮತ್ತು ರಾ.ಹೆ 275 ಸಂಪರ್ಕಿಸುವ ಪೆರಿಯಶಾಂತಿ-ಪೈಚಾರು ರಸ್ತೆಯನ್ನು ಸ್ಪರ್‌ ರಸ್ತೆಯಾಗಿ ಮೇಲ್ದರ್ಜೆಗೇರಿಸುವುದರಿಂದ ಭಕ್ತರು-ಪ್ರವಾಸಿಗರಿಗೆ ಕುಕ್ಕೆ-ಧರ್ಮಸ್ಥಳಕ್ಕೆ ಬರುವುದಕ್ಕೆ ನೇರ ಸಂಪರ್ಕ ರಸ್ತೆಯಾಗಲಿದೆ ಎಂದು ಕ್ಯಾ. ಚೌಟ ಸಚಿವ ಗಡ್ಕರಿಗೆ ಮನವರಿಕೆ ಮಾಡಿದ್ದಾರೆ.

ಇನ್ನೊಂದೆಡೆ ರಾ.ಹೆ-73 ಹಾಗೂ ರಾ.ಹೆ 169 ಹೆದ್ದಾರಿಯನ್ನು ಸಂಪರ್ಕಿಸುವಲ್ಲಿ ಬೆಳ್ತಂಗಡಿಯ ಗುರುವಾಯನಕೆರೆ-ಬಜಗೋಳಿ ರಸ್ತೆಯನ್ನು ಸ್ಪರ್‌ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಬೇಕು. ಈ ಹೊಸ ರಸ್ತೆ ನಿರ್ಮಿಸುವುದರಿಂದ ಧರ್ಮಸ್ಥಳ ಕ್ಷೇತ್ರ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರಕ್ಕೆ ಬಂದು ಹೋಗುವ ಯಾತ್ರಾರ್ಥಿಗಳಿಗೆ ಪ್ರಯಾಣ ಅವಧಿ ಕಡಿಮೆಗೊಳಿಸುವ ಜತೆಗೆ ಪ್ರವಾಸೋದ್ಯಮದ ಅಭಿವೃದ್ಧಿಗೂ ಹೆಚ್ಚಿನ ಉತ್ತೇಜನ ದೊರೆಯಲಿದೆ. ಜತೆಗೆ ಈ ಮಾರ್ಗದಲ್ಲಿ ಹಾಲಿ ಇರುವ ಹೆದ್ದಾರಿಗಳಲ್ಲಿನ ವಾಹನಗಳ ದಟ್ಟಣೆ ಕಡಿಮೆ ಮಾಡುವುದಕ್ಕೂ ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಗುರುವಾಯನಕೆರೆ-ಬಜಗೋಳಿ ಸ್ಪರ್‌ ರಸ್ತೆ ನಿರ್ಮಾಣ ಯೋಜನೆಯ ಬಗ್ಗೆಯೂ ಪರಿಶೀಲನೆ ನಡೆಸಿ ಮಂಜೂರಾತಿ ನೀಡುವಂತೆ ಕ್ಯಾ. ಚೌಟ ಅವರು ಇದೇ ವೇಳೆ ಸಚಿವ ಗಡ್ಕರಿ ಅವರಲ್ಲಿ ಕೋರಿದ್ದಾರೆ.