ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುತುಮಕೂರು ನಗರದಲ್ಲಿ ಕುಡಿಯುವ ನೀರು ಹಾಗೂ ಒಳಚರಂಡಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು 500 ಕೋಟಿ ರು ಅನುದಾನದ ಅಗತ್ಯವಿದ್ದು, ರಾಜ್ಯ ಸರ್ಕಾರ ನೀಡಬೇಕೆಂದು ಸದನದಲ್ಲಿ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ರವರು ಮನವಿ ಮಾಡಿದರು. ತುಮಕೂರು ನಗರಕ್ಕೆ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸಲು 15 ಹೊಸ ಓವರ್‌ಹೆಡ್ ಟ್ಯಾಂಕ್‌ಗಳ ಅವಶ್ಯಕತೆಯಿದ್ದು, ಜಲಸಂಗ್ರಹಾರ ಹಾಗೂ ಪೈಪ್‌ಲೈನ್‌ಗಳ ಪುನರ್ ನಿರ್ಮಾಣ ಕಾಮಗಾರಿಗೆ ನೀರು ಸರಬರಾಜು ಸುವ್ಯವಸ್ಥಿತಗೊಳಿಸಲು 200 ಕೋಟಿಗೂ ಅಧಿಕ ಹಣದ ಅಗತ್ಯವಿದೆ ಎಂದರು.ಎರಡನೇ ಹಂತದ ಒಳಚರಂಡಿಯನ್ನು ವ್ಯವಸ್ಥಿತವಾಗಿ ಕಾರ್ಯಗತಗೊಳಿಸಲು 51 ಬ್ಲಾಕ್ ಸ್ಪಾಟ್‌ಗಳು ಅಡ್ಡವಿದ್ದು, ಇಂತಹ ಸ್ಥಳಗಳನ್ನು ಭೂಸ್ವಾಧೀನಗೊಳಿಸಿಕೊಳ್ಳಬೇಕಾಗಿದೆ. ಇದರಿಂದಾಗಿ ಮಳೆ ಬಂದಂತಹ ಸಂದರ್ಭದಲ್ಲಿ ನಗರದಲ್ಲಿ ಒಳಚರಂಡಿಗಳ ಮ್ಯಾನ್‌ಹೋಲ್‌ಗಳಲ್ಲಿ ಚರಂಡಿ ನೀರು ಉಕ್ಕುತ್ತಿದ್ದು, ಇದರಿಂದಾಗಿ ಸಾರ್ವಜನಿಕರು ಅತಿ ಹೆಚ್ಚು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಹಾಗೂ ಮಳೆ ಬಂದಂತಹ ಸಂದರ್ಭದಲ್ಲಿ ತಗ್ಗು ಪ್ರದೇಶದಲ್ಲಿ ಇರುವಂತಹ ಮನೆಗಳಿಗೆ ಚರಂಡಿ ನೀರು ನುಗ್ಗಿ ಸಮಸ್ಯೆ ಉಂಟಾಗುತ್ತಿದೆ. ರಾಜ್ಯ ಸರ್ಕಾರ ಅನುದಾನವನ್ನು ನೀಡದರೆ ಈ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ಸದನಕ್ಕೆ ಶಾಸಕರು ತಿಳಿಸಿದರು.
ಇ-ಆಸ್ತಿಯು ದಿನದಿಂದ ದಿನಕ್ಕೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಎಷ್ಟೆ ಬಾರಿ ಹೇಳಿದರೂ ಅಧಿಕಾರಿಗಳು ಜನರನ್ನು ಗೊಳಾಡಿಸುವುದು ಬಿಟ್ಟಿಲ್ಲ. ತುಮಕೂರು ಮಹಾನಗರಪಾಲಿಕೆಯಲ್ಲಿ ಬ್ರೋಕರ್‌ಗಳಿಗೆ ಆದ್ಯತೆ ನೀಡಲಾಗುತ್ತಿದೆ. ಸಾರ್ವಜನಿಕರು, ಹಿರಿಯ ನಾಗರೀಕರು ಇ-ಆಸ್ತಿಗಾಗಿ ಪರದಡುವಂತಾಗಿದೆ ಎಂದು ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.ಮರಳೂರು ಗ್ರಾಮದ ಸರ್ವೆ ನಂ.87/2ರ 2 ಎಕರೆ ಜಮೀನನ್ನು ಕಾಂಗ್ರೆಸ್ ಭವನಕ್ಕೆ ನೀಡಿರುವ ಬಗ್ಗೆ ಸದನದಲ್ಲಿ ತುಮಕೂರು ನಗರ ಶಾಸಕರು ಅಸಮಧಾನ ವ್ಯಕ್ತಪಡಿಸಿದರು. 50 ಕೋಟಿಗೂ ಹೆಚ್ಚು ಬೆಲೆ ಬಾಳುವ ತುಮಕೂರು ಮಹಾನಗರಪಾಲಿಕೆಯ ಆಸ್ತಿ ತುಮಕೂರು ಮಹಾನಗರಪಾಲಿಕೆಯ ಯೋಜನೆಗಳಿಗೆ ಉಪಯೋಗವಾಗಲಿ. ಕುಡಿಯುವ ನೀರಿನ ಶುದ್ಧೀಕರಣ ಘಟಕಕ್ಕೆ ಅಥವಾ ಪೌರಕಾರ್ಮಿಕರಿಗೆ ಮನೆ ಕಟ್ಟಿಕೊಡುವ ಉದ್ದೇಶಕ್ಕೆ ಉಪಯೋಗಿಸಲಿ. ನಗರದ ಹೃದಯ ಭಾಗದಲ್ಲಿರುವ ಈ ಆಸ್ತಿಯನ್ನು ಪಾಲಿಕೆಗೆ ಉಳಿಸಿ ಎಂದರು.ತುಮಕೂರು ಮಹಾನಗರಪಾಲಿಕೆ ಸ್ವತ್ತನ್ನು ಕಾಂಗ್ರೆಸ್ ಭವನಕ್ಕೆ ನೋಂದಣಿ ಮಾಡಲು ನೋಂದಣಿ ಕಚೇರಿಗೆ ಅಧಿಕಾರಿಗಳು ಹೋದ ವೇಳೆ ಬಿಜೆಪಿ ಕಾರ್ಯಕರ್ತರು ನೊಂದಣಿ ಮಾಡಿಕೊಡುವುದು ಬೇಡ ಎಂದು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಬಂದಂತಹ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿರುವುದು ಖಂಡನೀಯ. ಈ ಕೂಡಲೇ ಘಟನೆಗೆ ಕಾರಣವಾದ ಪೊಲೀಸರು ಬಿಜೆಪಿ ಕಾರ್ಯಕರ್ತರ ಕ್ಷಮೆಯಾಚಿಸಬೇಕೆಂದು ಸದನದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಆಗ್ರಹಿಸಿದರು.