ಸಾರಾಂಶ
ತಿಪಟೂರು: ಗ್ರಾಮ ಆಡಳಿತ ಅಧಿಕಾರಿಗಳಿಗೆ ಗುಣಮಟ್ಟದ ಸಲಕರಣೆ ವಿತರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಆಡಳಿತ ಸೌಧದ ಮುಂದೆ ಗುರುವಾರ ಮುಷ್ಕರ ನಡೆಸಿದ ಕಂದಾಯ ಇಲಾಖೆ ನೌಕರರು ತಹಸೀಲ್ದಾರ್ ಪವನ್‌ಕುಮಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಮಾತನಾಡಿದ ಸಂಘದ ತಾ. ಅಧ್ಯಕ್ಷ ರವಿಕುಮಾರ್, ರಾಜ್ಯದಾದ್ಯಂತ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮ ಆಡಳಿತ ಅಧಿಕಾರಿಗಳು ಕೈಗೆ ಕಪ್ಪುಪಟ್ಟಿ ಧರಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದೇವೆ. ಇಲಾಖೆಯಿಂದ ಅಭಿವೃದ್ದಿಪಡಿಸಿರುವ ತಂತ್ರಾಂಶಗಳ ನಿರ್ವಹಣೆಗೆ ಅವಶ್ಯಕವಾಗಿರುವ ಮೊಬೈಲ್, ಲ್ಯಾಪ್‌ಟಾಪ್, ಇಂಟರ್‌ನೆಟ್ ಹಾಗೂ ಸ್ಕ್ಯಾನರ್‌ಗಳನ್ನು ಒದಗಿಸದೆ ಕರ್ತವ್ಯ ನಿರ್ವಹಿಸಲು ಒತ್ತಡ ಹೇರಲಾಗುತ್ತಿದೆ. ಯಾವುದೇ ಸೌಲಭ್ಯ ಕೊಡದೆ ಕೆಲಸ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು. ಇದರಿಂದಾಗಿ ಗ್ರಾಮ ಆಡಳಿತ ಅಧಿಕಾರಿಗಳಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗಿ ಸಾವು ನೋವುಗಳು ಸಂಭವಿಸುತ್ತಿವೆ. ಕೆಲವರು ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ. ಪರಿಕರಗಳನ್ನು ನೀಡದೆ ಕೆಲಸ ಮಾಡುವುದು ಅಸಾಧ್ಯ ಇದರಿಂದ ಕೆಲಸಗಳು ವಿಳಂಬವಾಗುಗುತ್ತಿವೆ. ಕೆಲವು ಕಡೆ ಫಲಾನುಭವಿಗಳಿಗೆ ಸೂಕ್ತ ದಾಖಲಾತಿಗಳನ್ನು ನೀಡಲು ವಿಳಂಬವಾಗಿ ಹಲ್ಲೆಗಳು ಸಹ ನಡೆದಿವೆ.ಆದರೂ ಸಹ ಸರ್ಕಾರ ಈ ಬಗ್ಗೆ ಗಮನ ಹರಿಸಿಲ್ಲ ಎಂದು ದೂರಿದರು. ನಮ್ಮ ಬೇಡಿಕೆಗಳು ಸರ್ಕಾರ ಈಡೇರಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸುತ್ತೇವೆ. ಇದಕ್ಕೂ ಸರ್ಕಾರ ಬಗ್ಗದಿದ್ದರೆ ಸರ್ಕಾರದ ಗಮನಸೆಳೆಯಲು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ರಾಜ್ಯದ ಎಲ್ಲಾ ತಾಲೂಕುಗಳ ಗ್ರಾಮ ಆಡಳಿತ ಅಧಿಕಾರಿಗಳು ಒಗ್ಗಟ್ಟಾಗಿ ಮುಷ್ಕರ ಕೈಗೊಳ್ಳುತ್ತೇವೆ ಎಂದರು.
ಮುಷ್ಕರದಲ್ಲಿ ತಾಲೂಕು ಘಟಕದ ಉಪಾಧ್ಯಕ್ಷ ರವಿಶಂಕರ್, ಪ್ರಧಾನ ಕಾರ್ಯದರ್ಶಿ ಯಮುನಾ, ಗೌರವಾಧ್ಯಕ್ಷ ದೀಪಕ್ ಬೂದಿಹಾಳ್, ಶಿವರಾಂ, ಮಧುನಾಯಕ್, ಮಧುಸೂಧನ್, ಶ್ರೀಹರ್ಷ, ರಾಜಶೇಖರ್, ಶಾಲಿನಿ, ಬಿಂಧು ಸೇರಿದಂತೆ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಭಾಗವಹಿಸಿದ್ದರು.