ಸಾರಾಂಶ
ಕುಡಿಯುವ ನೀರಿಗೋಸ್ಕರ ಉಜನಿ ಜಲಾಶಯದಿಂದ ತುರ್ತಾಗಿ 5 ಟಿಎಂಸಿ ನೀರು ಬಿಡುವಂತೆ ಕೋರಿ ಮಹಾರಾಷ್ಟ್ರದ ಸೊಲ್ಲಾಪುರ ಡಿಸಿಗೆ ಕಲಬುರಗಿ ಡಿಸಿ ಫೌಜಿಯಾ ತರನ್ನುಮ್ ಪತ್ರ ಬರೆದು ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಕುಡಿಯುವ ನೀರಿಗೋಸ್ಕರ ಉಜನಿ ಜಲಾಶಯದಿಂದ ತುರ್ತಾಗಿ 5 ಟಿಎಂಸಿ ನೀರು ಬಿಡುವಂತೆ ಕೋರಿ ಮಹಾರಾಷ್ಟ್ರದ ಸೊಲ್ಲಾಪುರ ಡಿಸಿಗೆ ಕಲಬುರಗಿ ಡಿಸಿ ಫೌಜಿಯಾ ತರನ್ನುಮ್ ಪತ್ರ ಬರೆದು ಆಗ್ರಹಿಸಿದ್ದಾರೆ.ಅಫಜಲ್ಪುರ ಪಟ್ಟಣದಲ್ಲಿ ಹೋರಾಟಗಾರ ಶಿವಕುಮಾರ್ ನಾಟೀಕಾರ್ ಭೀಮಾ ನದಿ ನೀರಿಗಾಗಿ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿ 5 ದಿನಗಳಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಮಾ.17ರಂದು ಈ ಪತ್ರ ಬರೆದು ನೀರಿಗಾಗಿ ಮೊರೆ ಇಟ್ಟಿದ್ದಾರೆ. ಮಾ.16ರಂದು ಅಫಲ್ಪುರ ತಾಲೂಕಿನ ಸೊನ್ನ ಬಾಂದಾರಲ್ಲಿ ನೀರಿನ ಸಂಗ್ರಹ ತಳ ಮುಟ್ಟಿದೆ, ಗ್ರಾಸ್ ಸ್ಟೋರೇಜ್ 0.411 ಟಿಎಂಸಿ ಮಾತ್ರ ನೀರಿನ ಸಂಗ್ರಹವಿದೆ. ಇನ್ನು ಡೆಡ್ ಸ್ಟೋರೇಜ್‌ನಲ್ಲಿ ಇದೇ ಜಲಾಶಯದಲ್ಲಿ 0.000 ನೀರಿನ ಸಂಗ್ರಹವಿದೆ. ನೀರಿನ ಸಂಗ್ರಹ ಶೆ.12.89 ಇದೆ. ಕಳೆದ ವರ್ಷ ಇದೇ ಸಮಯದಲ್ಲಿ ಹೋಲಿಕೆ ಮಾಡಿದರೆ ಸೊನ್ನ ಬಾಂದಾರಿನ ನೀರಿನ ಸಂಗ್ರಹ ತುಂಬ ತಗ್ಗಿದೆ. ಹೀಗಾಗಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಭೀಮಾ ನದಿ ತೀರದಲ್ಲಿ ತಲೆದೋರಿದೆ. ಒಂದು ವೇಳೆ ನೀರು ಬಿಡದೆ ಹೋದಲ್ಲಿ ಈ ಭಾಗದಲ್ಲಿ ಬರೋ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡು ಜನ- ಜಾನುವಾರು ತೀವ್ರ ತೊಂದರೆಗೀಡಾಗುವ ಆತಂಕವಿದೆ.
ಹೀಗಾಗಿ ಉಜನಿ ಜಲಾಶಯದಿಂದ 5 ಟಿಎಂಸಿ ನೀರನ್ನು ಜನ ಜಾನುವಾರುಗಳ ಕುಡಿಯುವ ನೀರಿನ ಉದ್ದೇಶಕ್ಕಾಗಿ ತಕ್ಷಣ ಬಿಡುವಂತೆ ತಾವು ಕ್ರಮ ಕೈಗೊಳ್ಳಬೇಕೆಂದು ಸೊಲ್ಲಾಪುರ ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಕಲಬುರಗಿ ಡಿಸಿ ಫೌಜಿಯಾ ತರನ್ನುಮ್ ಕೋರಿಕೊಂಡಿದ್ದಾರೆ.