ಹೊನ್ನಾವರ: ತಾಲೂಕಿನ ಗೇರುಸೊಪ್ಪಾ ವಲಯ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದ್ದು, ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಂಡು ಬಳಕೆದಾರರ ಹಿತರಕ್ಷಣೆ ಮಾಡುವಂತೆ ಹೆಸ್ಕಾಂ ಸೆಕ್ಷನ್ ಅಧಿಕಾರಿಗಳಿಗೆ ಶುಕ್ರವಾರ ಸಾರ್ವಜನಿಕರು ಮನವಿ ಸಲ್ಲಿಸಿದರು.
ಶರಾವತಿ ನದಿಪಾತ್ರದ ಎಡ, ಬಲ ದಂಡೆ ಪ್ರದೇಶವಾದ ಅಳ್ಳಂಕಿ, ಹರೆಂಗಡಿ, ಹೊಸ್ತೋಟ, ಕುಲ್ಲೆಗದ್ದೆ, ಕೆಂಬಾಲ, ಬೈಲಗದ್ದೆ, ಮೂಡ್ಕಣಿ ಮತ್ತಿತರ ಭಾಗಗಳಲ್ಲಿ ಕಳೆದ ಎರಡು ವಾರದಿಂದ ನಿರಂತರ ವಿದ್ಯುತ್ ವ್ಯತ್ಯಯದಿಂದ ಜನರು ತೀವ್ರ ತೊಂದರೆ ಪಡುತ್ತಿದ್ದಾರೆ.ಕುಡಿಯುವ ನೀರು, ನೆಟ್‌ವರ್ಕ್ ಸಮಸ್ಯೆ ಸೇರಿದಂತೆ ಅಗತ್ಯ ಸೇವೆಗಳು ಸ್ಥಗಿತಗೊಂಡು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹೆಸ್ಕಾಂ ಸಿಬ್ಬಂದಿ ತೀವ್ರ ನಿರ್ಲಕ್ಷ್ಯವೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಮಳೆಗಾಲದ ಪೂರ್ವ ವಿದ್ಯುತ್ ಲೈನ್ ಮೇಲೆ ಬೆಳೆದಿರುವ, ಬೀಳುವ ಗಿಡಮರಗಳ ಟೊಂಗೆಗಳನ್ನು ತೆರವುಗೊಳಿಸಿಲ್ಲ. ಸ್ಥಳೀಯರ ಬೇಡಿಕೆಯಾದ ಪಶ್ಚಿಮ ಘಟ್ಟದ ಅಂಚಿನಲ್ಲಿರುವ ಪ್ರದೇಶಗಳಲ್ಲಿ ಭೂಗತ ಕೇಬಲ್ ಅಳವಡಿಸಿ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಸುಗಮವಾಗಿಸುವ ಬೇಡಿಕೆ ಈಡೇರಿಲ್ಲ. 33 ಕೆವಿ ವಿದ್ಯುತ್ ಮಾರ್ಗಕ್ಕೆ ಹೊನ್ನಾವರದಿಂದ ಗೇರುಸೊಪ್ಪ ಪ್ರತ್ಯೇಕ ಗ್ಯಾಂಗ್‌ಮೆನ್‌ಗಳನ್ನು ನೇಮಕ ಮಾಡದೇ ಇರುವುದು ಸಮಸ್ಯೆ ಉಂಟಾಗಲು ಕಾರಣವಾಗಿದೆ. ಕೆಟ್ಟುಹೋದ ವಿದ್ಯುತ್ ಟ್ರಾನ್ಸ್‌ಫರ್ಮರ್ ಒಂದನ್ನು ಬದಲಿಸುವ ಸಂದರ್ಭಗಳಲ್ಲಿ ಇನ್ನುಳಿದ ಹಲವು ಟಿಸಿ ವ್ಯಾಪ್ತಿಯ ಸಾವಿರಾರು ಗ್ರಾಹಕರಿಗೂ ವಿದ್ಯುತ್ ನಿಲುಗಡೆ ಮಾಡುತ್ತಿರುವುದರಿಂದ ಜನರು ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಎಂದು ಜನರು ವಿವರಿಸಿದರು.
ಈ ಭಾಗದ ಬಹು ವರ್ಷದ ಸಾರ್ವಜನಿಕರ ಬೇಡಿಕೆ ಈಡೇರಿಸಿ, ವಿದ್ಯುತ್ ಬಳಕೆದಾರರ ಮತ್ತು ಸಾರ್ವಜನಿಕರ ಹಿತರಕ್ಷಣೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಹೆರಂಗಡಿ ಗ್ರಾಪಂ ಮಾಜಿ ಸದಸ್ಯ ವಿನಾಯಕ ನಾಯ್ಕ ಮೂಡ್ಕಣಿ, ಗಣೇಶ ಹಳ್ಳೇರ್ ಅಳ್ಳಂಕಿ, ಶ್ರೀಧರ್ ನಾಯ್ಕ ಗುಡ್ಡೆಕೇರಿ, ಅಪಾನ್ ಮುಕ್ತೆಸರ್, ಕರಾಮುದ್ದಿನ್ ಮುಕ್ತೆಸರ್, ತವಪ್ ಕಟ್ಟೆಮನೆ, ಪಜಲು ಅಪಕಾರ ಮತ್ತಿತರಿದ್ದರು.
ಹೊನ್ನಾವರದಲ್ಲಿ ವಿದ್ಯುತ್ ಕಣ್ಣುಮುಚ್ಚಾಲೆ, ಜನ ಹೈರಾಣಶರಾವತಿ ನದಿಪಾತ್ರದ ಹೆಚ್ಚಿನ ಪ್ರದೇಶ ಮಳೆಗಾಲದಲ್ಲಿ ನಿರಂತರ ವಿದ್ಯುತ್ ವ್ಯತ್ಯಯ ಸಾಮಾನ್ಯವಾಗಿದೆ. ಎರಡು ವಾರಗಳಿಂದ ಕುಡಿಯುವ ನೀರು, ಅಂತರ್ಜಾಲ, ದೂರ ಸಂಪರ್ಕ ಮತ್ತಿತರ ಎಲ್ಲ ಅಗತ್ಯ ಸೇವೆಗಳು ಸ್ಥಗಿತಗೊಂಡು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ ಎಂದು ಸಾಮಾಜಿಕ ಹೋರಾಟಗಾರ ಚಂದ್ರಕಾಂತ ಕೊಚರೇಕರ ದೂರಿದ್ದಾರೆ.
ಈ ಸಂಬಂಧ ಹೆಸ್ಕಾಂ ಅಧಿಕಾರಿಗಳ ಗಮನ ಸೆಳೆದಿರುವ ಅವರು, ಹತ್ತಿರದ ಗೇರುಸೊಪ್ಪೆಯಲ್ಲಿ ವಿದ್ಯುತ್ ಉತ್ಪಾದಿಸಲಾಗುತ್ತಿದ್ದರೂ ಶರಾವತಿ ನದಿಪಾತ್ರದ ಜನರಿಗೆ ನೂರಾರು ಕಿಲೋಮೀಟರುಗಳ ದೂರದ ಹಳೆಯ ವಿದ್ಯುತ್ ಮಾರ್ಗದಿಂದಲೇ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಅರಣ್ಯ ಮತ್ತು ಖಾಸಗಿ ತೋಟಗಳ ಮೂಲಕ ವಿದ್ಯುತ್ ಲೈನ್ ಹಾದು ಹೋಗಿರುವುದರಿಂದ ಮಳೆಗಾಲದ ಪೂರ್ವ ಕೈಗೊಳ್ಳಬೇಕಾದ ಅಗತ್ಯ ಕಾಮಗಾರಿ ನಿರ್ವಹಿಸದೇ ಹೆಸ್ಕಾಂ ನಿರ್ಲಕ್ಷ್ಯ ಮಾಡಿದೆ. ಇದರಿಂದ ಶರಾವತಿ ನದಿಪಾತ್ರವೂ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ನಿರಂತರ ವಿದ್ಯುತ್ ವ್ಯತ್ಯಯದಿಂದ ಸಾರ್ವಜನಿಕರು ಬವಣೆ ಪಡುತ್ತಿದ್ದಾರೆ ಎಂದು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಅವರು ಪತ್ರ ಬರೆದಿದ್ದಾರೆ.ವಿದ್ಯುತ್ ನಿಗಮದ ಗೇರುಸೊಪ್ಪೆಯ ಗ್ರಿಡ್‌ನಿಂದಲೇ ನೇರವಾಗಿ ವಿದ್ಯುತ್ ಪಡೆದು ಶರಾವತಿ ನದಿ ಪಾತ್ರವೂ ಸೇರಿದಂತೆ ಹೊನ್ನಾವರ ತಾಲೂಕಿಗೆ ವಿದ್ಯುತ್ ಸರಬರಾಜು ಮಾಡಬೇಕೆನ್ನುವ ನಮ್ಮ ಈ ಮೊದಲಿನ ಬೇಡಿಕೆಯನ್ನು ಆದಷ್ಟು ಶೀಘ್ರ ಈಡೇರಿಸಬೇಕು ಹಾಗೂ ಅರಣ್ಯ ಮತ್ತಿತರ ಭಾಗಗಳಲ್ಲಿ ಭೂಗತ ಕೇಬಲ್ ಅಳವಡಿಸಿ ವಿದ್ಯುತ್ ಸರಬರಾಜು ವ್ಯವಸ್ಥೆ ಸುಗಮಗೊಳಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳನ್ನು ಅವರು ಆಗ್ರಹಿಸಿದ್ದಾರೆ.