ಗಜೇಂದ್ರಗಡ: ಪಟ್ಟಣದಲ್ಲಿ ಸ್ನಾತಕೋತ್ತರ ಪದವಿ ಕೇಂದ್ರ ಪ್ರಾರಂಭಿಸಲು ಒತ್ತಾಯಿಸಿ ಎಸ್‌ಎಫ್‌ಐ ಸಂಘಟನೆ ನೇತೃತ್ವದಲ್ಲಿ ಸರ್ಕಾರಿ ಪ್ರಥಮದರ್ಜೆ ಪದವಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟಿಸಿ ಕಂದಾಯ ನಿರೀಕ್ಷಕ ಪವಾಡಗೌಡ ಮಾಲಿಪಾಟೀಲ ಅವರ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ಗುರುವಾರ ಮನವಿ ನೀಡಿದರು.

ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳಿಂದ ಶಿಕ್ಷಣ ಅರಸಿ ಅಂದಾಜು ೨ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಗಮಿಸುತ್ತಾರೆ. ಪ್ರತಿವರ್ಷ ಸುಮಾರು ೧೦೦೦ ವಿದ್ಯಾರ್ಥಿಗಳು ಪದವಿ ಅಂತಿಮ ವರ್ಷ ಮುಗಿಸುತ್ತಿದ್ದಾರೆ. ಹೀಗಾಗಿ ಎಂಎ, ಎಂಕಾಂ ಹಾಗೂ ಎಂಸ್ಸಿ ಸ್ನಾತಕೋತ್ತರ ಪದವಿ ಕೇಂದ್ರ ಪ್ರಾರಂಭಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಜಿಲ್ಲೆಯ ದೊಡ್ಡ ಪಟ್ಟಣವಾಗಿರುವ ಗಜೇಂದ್ರಗಡದಲ್ಲಿ ಸ್ನಾತಕೋತ್ತರ ಪದವಿ ಕೇಂದ್ರವಿಲ್ಲದ ಪರಿಣಾಮ ದೂರದ ಊರುಗಳಿಗೆ ವಿದ್ಯಾರ್ಥಿಗಳಿಗೆ ತೆರಳಿ ಶಿಕ್ಷಣಾಭ್ಯಾಸ ಮಾಡುವ ಸ್ಥಿತಿಯಿದೆ. ಪರಿಣಾಮ ಆರ್ಥಿಕವಾಗಿ ಸದೃಢವಾಗಿರದ ನೂರಾರು ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಕನಸು ಕಮರುತ್ತಿದೆ. ಉನ್ನತ ಶಿಕ್ಷಣದಿಂದ ಸಮಾಜ ಹಾಗೂ ದೇಶ ಅಭಿವೃದ್ಧಿಯತ್ತ ಸಾಗಲು ಸಾಧ್ಯವಿದೆ. ಆದರೆ ಪಟ್ಟಣದಲ್ಲಿ ಸ್ನಾತಕೋತ್ತರ ಪದವಿ ಕೇಂದ್ರವಿಲ್ಲದ್ದನ್ನು ಸಂಘಟನೆಯು ಖಂಡಿಸುತ್ತಿದೆ. ಹೀಗಾಗಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಸ್ನಾತಕೋತ್ತರ ಪದವಿ ಕೇಂದ್ರ ಪ್ರಾರಂಭಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಚಂದ್ರು ರಾಠೋಡ, ರಾಜ್ಯ ಉಪಾಧ್ಯಕ್ಷ ಗಣೇಶ ರಾಠೋಡ, ಅನೀಲ್ ಆರ್., ಗುರುಕಿರಣ, ಶರಣು ಮಾಟರಂಗಿ, ಪ್ರಸನ್ನ ಮೂರ್ತಿ, ಗೌತಮ್, ಕಿರಣ ರಾಠೋಡ, ಲಕ್ಷ್ಮಿ ಕಬ್ಬರಿಗೆ, ಭೀಮವ್ವ, ಕಾವ್ಯ, ಅಕ್ಷತಾ, ಕಿರಣ ಪಮ್ಮಾರ, ಪರಶುರಾಮ ಜಾಧವ, ವಿನಾಯಕ ರಾಠೋಡ, ದ್ಯಾಮಣ್ಣ ತೆಂಗುಂಟಿ, ಮಂಜುನಾಥ, ಹರೀಶ್ ಇತರರು ಇದ್ದರು.