ಹಂಪಿಯಿಂದ ಪ್ರವಾಸಿ ತಾಣಗಳಿಗೆ ನೇರ ರೈಲು ಸೇವೆ ಆರಂಭಿಸಲು ಪ್ರಧಾನ ವ್ಯವಸ್ಥಾಪಕರಿಗೆ ಮನವಿ

| Published : Aug 31 2024, 01:44 AM IST / Updated: Aug 31 2024, 11:55 AM IST

ಹಂಪಿಯಿಂದ ಪ್ರವಾಸಿ ತಾಣಗಳಿಗೆ ನೇರ ರೈಲು ಸೇವೆ ಆರಂಭಿಸಲು ಪ್ರಧಾನ ವ್ಯವಸ್ಥಾಪಕರಿಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಯುನೆಸ್ಕೊ ಪಟ್ಟಿಯಲ್ಲಿರುವ ಹಂಪಿಯಿಂದ ರಾಜ್ಯದ ಇತರ ಪ್ರಮುಖ ಪ್ರವಾಸಿ ತಾಣಗಳಿಗೆ ಹಾಗೂ ಕರಾವಳಿಗೆ ನೇರ ರೈಲು ವ್ಯವಸ್ಥೆ ಕಲ್ಪಿಸಬೇಕು ಎಂದು ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು ನೈಋತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ರವಾನಿಸಿದ್ದಾರೆ.

ಹೊಸಪೇಟೆ: ಯುನೆಸ್ಕೊ ಪಟ್ಟಿಯಲ್ಲಿರುವ ಹಂಪಿಯಿಂದ ರಾಜ್ಯದ ಇತರ ಪ್ರಮುಖ ಪ್ರವಾಸಿ ತಾಣಗಳಿಗೆ ನೇರ ರೈಲು ವ್ಯವಸ್ಥೆ ಕಲ್ಪಿಸಬೇಕು ಎಂದು ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು ಒತ್ತಾಯಿಸಿದ್ದಾರೆ.

ಸ್ಥಳೀಯ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪ್ರಾದೇಶಿಕ ಅಧಿಕಾರಿ ಮುಕೇಶ್ ಕುಮಾರ್ ಅವರ ಮೂಲಕ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಶುಕ್ರವಾರ ಮನವಿ ರವಾನಿಸಿದ್ದಾರೆ. ಹಾಸನ, ಹಳೆಬೀಡು, ಬೇಲೂರು, ಶ್ರಣಬೆಳಗೋಳ, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಹಾಗೂ ಶೈಕ್ಷಣಿಕ ಮತ್ತು ಬೃಹತ್ ಆಸ್ಪತ್ರೆ ಕೇಂದ್ರಗಳಾದ ಮಣಿಪಾಲ-ಉಡುಪಿ-ಮಂಗಳೂರಿಗೆ ನೇರ ರೈಲು ಆರಂಭಿಸಬೇಕು ಎಂದು ಕೋರಿದ್ದಾರೆ.

ಕ್ರಿಯಾ ಸಮಿತಿ ಅಧ್ಯಕ್ಷ ವೈ. ಯಮುನೇಶ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಮಾರಂಭ ಒಂದರಲ್ಲಿ ಮಾತನಾಡುತ್ತಾ 2030ನೇ ವರ್ಷದೊಳಗೆ ನಮ್ಮ ದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಬೆಳವಣಿಗೆಯಿಂದ ₹೨೦ ಲಕ್ಷ ಕೋಟಿ ಆದಾಯ ಸಂಗ್ರಹಿಸಬಹುದಾಗಿದ್ದು, ಅಂದಾಜು 14 ಕೋಟಿ ಉದ್ಯೋಗ ಸೃಷ್ಟಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ. ಹೀಗಾಗಿ ಪ್ರಧಾನಮಂತ್ರಿಗಳ ದೂರದೃಷ್ಟಿಯ ಹೇಳಿಕೆಯನ್ನು ಸಾಕಾರಗೊಳಿಸುವ ಮಹತ್ತರ ಜವಾಬ್ದಾರಿ ರೈಲ್ವೆ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಗಳ ಮೇಲಿದೆ. ಈ ನಿಟ್ಟಿನಲ್ಲಿ ನಮ್ಮ ರಾಜ್ಯದಲ್ಲಿ ವಿವಿಧ ಪ್ರವಾಸಿ ತಾಣಗಳು ಹಾಗೂ ವಿಶ್ವ ಪಾರಂಪರಿಕ ತಾಣಗಳ ನಡುವೆ ನೇರ ರೈಲು ಸಂಪರ್ಕ ಕಲ್ಪಿಸುವ ಅಗತ್ಯವಿದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಹೆಬ್ಬಾಗಿಲಿನಂತಿರುವ ವಿಜಯನಗರ ಜಿಲ್ಲೆ ಮತ್ತು ಬಂದರುನಗರ ಮಂಗಳೂರಿಗೆ ನೇರ ಸಂಪರ್ಕ ದೊರೆತರೆ ವ್ಯಾಪಾರ-ವಹಿವಾಟು ವೃದ್ದಿಯಾಗುತ್ತದೆ. ವಿಜಯನಗರ ಜಿಲ್ಲೆ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆ ವೃದ್ಧಿಯಾಗುವ ನಿಟ್ಟಿನಲ್ಲಿ ಹೊಸಪೇಟೆಯಿಂದ ಕೊಟ್ಟೂರು ಮಾರ್ಗವಾಗಿ ಮಂಗಳೂರಿಗೆ ನೇರ ರೈಲು ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಕ್ರಿಯಾಸಮಿತಿ ಉಪಾಧ್ಯಕ್ಷ ಉಮಾಮಹೇಶ್ವರ್ ಮಾತನಾಡಿ, ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಪ್ರಸಿದ್ಧ ಯಾತ್ರಾಸ್ಥಳ ಮಂತ್ರಾಲಯ ಮಾರ್ಗವಾಗಿ ಈ ಹಿಂದೆ ಸಂಚರಿಸುತ್ತಿದ್ದ ರೈಲನ್ನು ನಾಲ್ಕು ತಿಂಗಳಿಂದ ರದ್ದುಪಡಿಸಿರುವುದು ಖಂಡನೀಯ. ಇದರಿಂದ ಈ ಜಿಲ್ಲೆಗಳಿಂದ ಮಂತ್ರಾಲಯ ಹಾಗೂ ರಾಯಚೂರು, ಹೈದರಾಬಾದ್ ಕಡೆಗೆ ಹೋಗುವ ಪ್ರಯಾಣಿಕರಿಗೆ ತೊಂದರೆಯಾಗಿದೆ. ಕೂಡಲೇ ಈ ರೈಲನ್ನು ಮರು ಆರಂಭಿಸಬೇಕು. ಹೊಸಪೇಟೆ ನಿಲ್ದಾಣದಲ್ಲಿ ರೈಲುಗಳ ಸುಗಮ ಮತ್ತು ಸಕಾಲಕ್ಕೆ ಸಂಚರಿಸುವ ದೃಷ್ಟಿಯಿಂದ ಹೆಚ್ಚುವರಿಯಾಗಿ ಎರಡು ಪ್ಲಾಟ್‌ಫಾರಂಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಮಹೇಶ್ ಕುಡುತಿನಿ, ಕೌತಾಳ್ ವಿಶ್ವನಾಥ, ಎಲ್. ರಮೇಶ್ ಲಮಾಣಿ, ಸಿದ್ದಪ್ಪ, ಬಿ. ವಿರೂಪಾಕ್ಷಪ್ಪ, ಪಿ. ಪ್ರಭಾಕರ್, ಡಿ. ರಾಮಕೃಷ್ಣ, ಎಂ. ಶಂಕ್ರಪ್ಪ, ಕೆ.ವಿ. ರಾಮಾಲಿ, ಮಲ್ಲಯ್ಯ, ಎಚ್. ಮಹೇಶ, ನಜೀರ್ ಸಾಬ್, ಶಂಶುದ್ದೀನ್, ಬಿ. ಮಹಮ್ಮದ್ ಜಮೀರ್, ಯು. ಆಂಜನೇಯಲು, ಎಚ್. ತಿಪ್ಪೇಸ್ವಾಮಿ, ಲೋಗನಾಥನ್, ಎಸ್.ಟಿ. ಮುಂಡರಗಿ, ಡಿ. ಜಗದೀಶ್, ಶೇಕ್‌ಮಹಮ್ಮದ್ ಬಾಷಾ, ಸಣ್ಣಮಾರೆಪ್ಪ, ದೇವರೆಡ್ಡಿ, ಮಹಾಂತೇಶ್, ಜೆ. ವರುಣ್ ಮತ್ತಿತರರಿದ್ದರು.