ತಂಬ್ರಹಳ್ಳಿಯಲ್ಲಿ ಪಿಯುಸಿ ವಿಜ್ಞಾನ ವಿಭಾಗ ಆರಂಭಿಸಲು ಗ್ರಾಮಸ್ಥರ ಮನವಿ

| Published : May 22 2024, 01:03 AM IST

ತಂಬ್ರಹಳ್ಳಿಯಲ್ಲಿ ಪಿಯುಸಿ ವಿಜ್ಞಾನ ವಿಭಾಗ ಆರಂಭಿಸಲು ಗ್ರಾಮಸ್ಥರ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿಯಲ್ಲಿ ವೀ.ವಿ. ಸಂಘದ ಪದವಿಪೂರ್ವ ಕಾಲೇಜ್‌ನಲ್ಲಿ ಈ ಸಾಲಿನಿಂದಲೇ ಪಿಯುಸಿ ವಿಜ್ಞಾನ ವಿಭಾಗ ಆರಂಭಿಸಬೇಕು ಹಾಗೂ ಗ್ರಾಮದಲ್ಲಿ ಕಿಂಡರ್ ಗಾರ್ಟನ್ ಸ್ಕೂಲ್ ಆರಂಭಿಸಬೇಕು ಎಂದು ಗ್ರಾಮದ ಮುಖಂಡರು ವೀ.ವಿ. ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ ಅವರಿಗೆ ಮನವಿ ಸಲ್ಲಿಸಿದರು.

ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿಯಲ್ಲಿ ವೀ.ವಿ. ಸಂಘದ ಪದವಿಪೂರ್ವ ಕಾಲೇಜ್‌ನಲ್ಲಿ ಈ ಸಾಲಿನಿಂದಲೇ ಪಿಯುಸಿ ವಿಜ್ಞಾನ ವಿಭಾಗ ಆರಂಭಿಸಬೇಕು ಹಾಗೂ ಗ್ರಾಮದಲ್ಲಿ ಕಿಂಡರ್ ಗಾರ್ಟನ್ ಸ್ಕೂಲ್ ಆರಂಭಿಸಬೇಕು ಎಂದು ಗ್ರಾಮದ ಮುಖಂಡರು ವೀ.ವಿ. ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ ಅವರಿಗೆ ಮನವಿ ಸಲ್ಲಿಸಿದರು.

ಈ ಕುರಿತು ಜಿಪಂ ಮಾಜಿ ಸದಸ್ಯ ಅಕ್ಕಿತೋಟೇಶ್ ಮಾತನಾಡಿ, ತಂಬ್ರಹಳ್ಳಿ ಭಾಗದ ಕಾಲೇಜು ವಿದ್ಯಾರ್ಥಿಗಳಿಗೆ ವಿಜ್ಞಾನ ವಿಭಾಗ ಅತ್ಯವಶ್ಯವಾಗಿದೆ. ತಂಬ್ರಹಳ್ಳಿ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಬಡ ವಿದ್ಯಾರ್ಥಿಗಳು ದೂರದ ಪಟ್ಟಣಗಳ ವಿಜ್ಞಾನ ಕಾಲೇಜುಗಳಿಗೆ ಹೋಗಲು ಅಶಕ್ತರಾಗಿ ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ. ಗ್ರಾಮದಲ್ಲಿ ೨೬ ವರ್ಷಗಳ ಹಿಂದೆ ಪದವಿಪೂರ್ವ ಕಾಲೇಜ್ ಸ್ಥಾಪಿಸಲಾಗಿದೆ. ಆದರೆ, ಈ ವರೆಗೂ ಕೇವಲ ಕಲಾ ಮತ್ತು ವಾಣಿಜ್ಯ ವಿಭಾಗವಿದೆ. ಕಳೆದ ಕೆಲವು ವರ್ಷಗಳಿಂದಲೂ ಸುತ್ತಲಿನ ಹಲವು ಗ್ರಾಮಗಳ ವಿದ್ಯಾರ್ಥಿಗಳು ವಿಜ್ಞಾನ ವಿಭಾಗಕ್ಕೆ ಪ್ರವೇಶ ಬಯಸಿದ್ದಾರೆ. ವಿಜ್ಞಾನ ವಿಭಾಗ ಇಲ್ಲದ್ದರಿಂದ ಇಲ್ಲಿನ ವಿದ್ಯಾರ್ಥಿಗಳು ದುಬಾರಿ ವೆಚ್ಚದಲ್ಲಿನ ಖಾಸಗಿ ಕಾಲೇಜುಗಳನ್ನು ಅವಲಂಬಿಸುವಂತಾಗಿದೆ. ಗ್ರಾಮದಲ್ಲಿ ಬಿಸಿಎಂ ಕಾಲೇಜು, ಹಾಸ್ಟೆಲ್ ಇದ್ದು, ೧೫೦ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಈ ಪೈಕಿ ಪ್ರತಿ ವರ್ಷವೂ ಅನೇಕರು ವಿಜ್ಞಾನ ವಿಭಾಗಕ್ಕೆ ಆಸಕ್ತಿ ತೋರುತ್ತಿದ್ದಾರೆ. ಬಡ ವಿದ್ಯಾರ್ಥಿಗಳಿಗಾಗಿ ಕೂಡಲೆ ವಿಜ್ಞಾನ ವಿಭಾಗ ಆರಂಭಿಸಬೇಕು. ಜತೆಗೆ ಕಳೆದ ಬಾರಿ ವೀವಿ ಸಂಘದವರು ಗ್ರಾಮದಲ್ಲಿ ಕಿಂಡರ್‌ಗಾರ್ಟನ್ ಶಾಲೆ ಆರಂಭಿಸುತ್ತೇವೆ ಎಂದು ಭರವಸೆ ನೀಡಿದ್ದನ್ನು ಕಾರ್ಯರೂಪಕ್ಕೆ ತರಬೇಕು ಎಂದು ಒತ್ತಾಯಿಸಿದರು.

ವೀ.ವಿ. ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ ಮನವಿ ಸ್ವೀಕರಿಸಿ ಮಾತನಾಡಿ, ಗ್ರಾಮದಲ್ಲಿ ಕಿಂಡರ್‌ಗಾರ್ಟನ್ ಶಾಲೆ ಹಾಗೂ ವಿಜ್ಞಾನ ಕಾಲೇಜು ಆರಂಭಿಸುವ ನಿಟ್ಟಿನಲ್ಲಿ ಸಂಘದ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ವೀ.ವಿ. ಸಂಘದ ಕಾರ್ಯದರ್ಶಿ ಡಾ. ಅರುಣ ಪಾಟೀಲ್, ಕಾರ್ಯಕಾರಿ ಸಮಿತಿ ಸದಸ್ಯ ಶರಣಬಸವನಗೌಡ, ತಾ.ಪಂ. ಮಾಜಿ ಸದಸ್ಯ ಪಿ. ಕೊಟ್ರೇಶ್, ಪಿಕಾರ್ಡ್ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಪಟ್ಟಣಶೆಟ್ಟಿ ಸುರೇಶ್, ಗ್ರಾ.ಪಂ. ನಿವೃತ್ತ ಪಿಡಿಒ ತೋಟಯ್ಯ, ಕೃಷಿಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ರೆಡ್ಡಿ ಮಂಜುನಾಥ ಪಾಟೀಲ್ ಇದ್ದರು.