ಒಳ ಮೀಸಲಾತಿ: ಮೂಗಿಗೆ ತುಪ್ಪ ಸವರಿದ ಸರ್ಕಾರ

| Published : Jul 31 2025, 12:48 AM IST

ಸಾರಾಂಶ

ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿ ಆ. 1ಕ್ಕೆ ಒಂದು ವರ್ಷ ಕಳೆದಿದೆ. ಈ ವರೆಗೂ ಕಾಲಹರಣ ಮಾಡುತ್ತಾ ಬಂದಿರುವ ಸರ್ಕಾರ ಜಾತಿ ಗಣತಿ, ಆಯೋಗ ರಚನೆ ಮಾಡಿ ದತ್ತಾಂಶ ಪಡೆದು ಒಳ ಮೀಸಲಾತಿ ಜಾರಿಗೆ ಮಾಡುತ್ತೇವೆ ಎಂದು ಹಸಿ ಸುಳ್ಳು, ಭರವಸೆ ನೀಡಿದೆ.

ಕುಕನೂರು:

ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಆ. 1ರಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ವಕೀಲ ಮಹಾಂತೇಶ ಬೂದಗುಂಪಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕುಕನೂರ-ಯಲಬುರ್ಗಾ ತಾಲೂಕಿನ ಮಾದಿಗ ಸಮುದಾಯದ ವಿವಿಧ ಸಂಘಟನೆಗಳ ಮುಖಂಡರು ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿ ಆ. 1ಕ್ಕೆ ಒಂದು ವರ್ಷ ಕಳೆದಿದೆ. ಈ ವರೆಗೂ ಕಾಲಹರಣ ಮಾಡುತ್ತಾ ಬಂದಿರುವ ಸರ್ಕಾರ ಜಾತಿ ಗಣತಿ, ಆಯೋಗ ರಚನೆ ಮಾಡಿ ದತ್ತಾಂಶ ಪಡೆದು ಒಳ ಮೀಸಲಾತಿ ಜಾರಿಗೆ ಮಾಡುತ್ತೇವೆ ಎಂದು ಹಸಿ ಸುಳ್ಳು, ಭರವಸೆ ನೀಡಿದೆ. ಹೀಗಾಗಿ ಮಾದಿಗ ಸಮುದಾಯದ ಮುಖಂಡರು, ಯುವಕರು ಆ. 1ರಂದು ಜಿಲ್ಲಾಧಿಕಾರಿಗೆ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಮನವಿ ಸಲ್ಲಿಸಲಿದ್ದೇವೆ ಎಂದರು.

ಹಿರಿಯ ಮುಖಂಡ ಬಸವರಾಜ ನಡುಲಮನಿ ಮಾತನಾಡಿ, ಎರಡು ತಾಲೂಕಿನ ಸಮುದಾಯವು ಮತ್ತೊಮ್ಮೆ ದೊಡ್ಡಮಟ್ಟದ ಹೋರಾಟಕ್ಕೆ ಸಿದ್ಧರಾಗಬೇಕು. ರಾಜ್ಯ ಸರ್ಕಾರ ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಇದೇ ಅಧಿವೇಶನದಲ್ಲಿ ಒಳ ಮೀಸಲಾತಿ ಜಾರಿ ಮಾಡದಿದ್ದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಕೀಲ ರವಿಚಂದ್ರ ಮಾಟಲದಿನ್ನಿ ಮಾತನಾಡಿ, ಒಳ ಮೀಸಲಾತಿ ಹೋರಾಟಕ್ಕೆ ಸಹಕಾರ ಅಗತ್ಯವಾಗಿದೆ ಎಂದರು.

ಈ ವೇಳೆ ಮುಖಂಡರಾದ ಯಮನೂರಪ್ಪ ಗೊರ್ಲೆಕೊಪ್ಪ, ಈಶಪ್ಪ ಶಿರೂರು, ಪ್ರಕಾಶ ಹಿರೇಮನಿ, ಹನಮಂತಪ್ಪ ಮುತ್ತಾಳ, ಶರಣಪ್ಪ ಹಿರೇಮನಿ, ಶಂಕರ ಭಂಡಾರಿ, ನಾಗರಾಜ ಸಂಗನಾಳ, ದೇವಪ್ಪ ಡಿಜೆ, ಮಹೇಶ ಹಿರೇಮನಿ, ಶಿವರಾಜ ದೊಡ್ಡಮನಿ, ನೀಲಪ್ಪ ಬೆಣಕಲ್, ರವಿ ಹಿರೇಮನಿ, ಮಂಜುನಾಥ ಪ್ರಸಾದ, ಶರಣಪ್ಪ ಮಾಲಗಿತ್ತಿ, ಹನುಮೇಶ ಬಂಡಿ ಇದ್ದರು.ಮೀಸಲಾತಿ ಹೋರಾಟಕ್ಕೆ ಪಕ್ಷಾತೀತವಾಗಿ ಬೆಂಬಲಿಸಿ

ಕನಕಗಿರಿ:

ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಆ. 1ರಂದು ಕೊಪ್ಪಳದಲ್ಲಿ ನಡೆಯುವ ಹೋರಾಟಕ್ಕೆ ಮಾದಿಗ ಸಮುದಾಯದವರು ಪಕ್ಷಾತೀತವಾಗಿ ಬೆಂಬಲಿಸಿ, ಪಾಲ್ಗೊಳ್ಳಬೇಕು ಎಂದು ಮಾತಂಗ ಮಹಾಸಭಾದ ತಾಲೂಕು ಅಧ್ಯಕ್ಷ ನಿಂಗಪ್ಪ ಪೂಜಾರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕು ಮಾದಿಗ ಸಂಘಟನೆಗಳ ಒಕ್ಕೂಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಸಮಾಜಕ್ಕೆ ನ್ಯಾಯ ದೊರಕಿಸುವ ಉದ್ದೇಶದಿಂದ ಒಳ ಮೀಸಲಾತಿ ನೀಡುವಂತೆ ರಾಜ್ಯವ್ಯಾಪಿ ಹೋರಾಟ ನಡೆಯುತ್ತಿದೆ.ನಮ್ಮ ನೋವನ್ನರಿತ ಸುಪ್ರೀಂ ಕೋರ್ಟ್ ಒಳ ಮೀಸಲಾತಿ ನೀಡುವಂತೆ ಆದೇಶ ನೀಡಿ ೧ ವರ್ಷ ಕಳೆದರೂ ಈ ವರೆಗೂ ರಾಜ್ಯದಲ್ಲಿ ಜಾರಿಗೆ ಬಂದಿಲ್ಲ. ಇದರಿಂದ ರಾಜ್ಯಾದ್ಯಂತ ಜಿಲ್ಲಾ ಕೇಂದ್ರದಲ್ಲಿ ಹೋರಾಟ ಮಾಡಲು ಮಾದಿಗ ಸಮಾಜದ ಹಿರಿಯರು, ಹೋರಾಟಗಾರರು ನಿರ್ಧರಿಸಿದ್ದಾರೆ. ಅದರಂತೆ ಜಿಲ್ಲಾಡಳಿತ ಭವನದ ಎದುರು ಆ.೧ರಂದು ಬೃಹತ್ ಪ್ರತಿಭಟನೆ ನಡೆಯುತ್ತಿದ್ದು, ತಾಲೂಕಿನಿಂದ 5 ಸಾವಿರಕ್ಕೂ ಹೆಚ್ಚು ಜನ ಪಕ್ಷಾತೀತವಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಜಿಪಂ ಮಾಜಿ ಸದಸ್ಯ ಪರಶುರಾಮ, ಪ್ರಮುಖರಾದ ಹನುಮಂತಪ್ಪ ಡಗ್ಗಿ, ಸುಭಾಷ ಕಂದಕೂರು, ಹನುಮಂತ ಬಸರಿಗಿಡ, ಶಾಂತಪ್ಪ ಬಸರಿಗಿಡ, ಸಣ್ಣ ಹನುಮಂತಪ್ಪ ಮರಳಿ, ಸಣ್ಣ ಹನುಮಂತ ಹುಲಿಹೈದರ್‌, ರಮೇಶ ಕಾಟಾಪುರ, ಕನಕಪ್ಪ ಮ್ಯಾಗಡೆ, ಯಮನೂರಪ್ಪ, ದುರಗಪ್ಪ ದೊಡ್ಡಮನಿ, ಗಂಗಾಧರ ಈಚನಾಳ, ಮರಿಯಪ್ಪ ಸಿರಿವಾರ, ವೀರೇಶ ನವಲಿ, ವೆಂಕಟೇಶ ಪೂಜಾರ, ಕಂಠೆಪ್ಪ ಮ್ಯಾಗಡೆ, ದುರುಗಪ್ಪ ಗೋರಾಳಕೇರಿ ಇತರರಿದ್ದರು.