ಹೊಸಪೇಟೆ: ಜಿಲ್ಲೆಯ ಮರಿಯಮ್ಮನಹಳ್ಳಿ ಹೋಬಳಿಯ ನಂದಿಬಂಡಿ ಗ್ರಾಮದಲ್ಲಿ ಇಟ್ಟಂಗಿ ಭಟ್ಟಿಯಲ್ಲಿ ಜೀತ ಪದ್ಧತಿಯಲ್ಲಿ ಸಿಲುಕಿದ್ದ ಒಡಿಶಾ ಮೂಲದ 37 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಸ್ಪಂದನ ಎಂಬ ಎನ್‌ಜಿಒ ಸಂಸ್ಥೆ ನೀಡಿದ ಖಚಿತ ಮಾಹಿತಿ ಮೇರೆಗೆ ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಸಹಾಯಕ ಆಯುಕ್ತರು ನಂದಿಬಂಡಿ ಗ್ರಾಮದ ಮೇಲೆ ದಾಳಿ ನಡೆಸಿದರು.

ದಾಳಿಯ ವೇಳೆ ಕಾರ್ಮಿಕರು ನಾಲ್ಕು ಅಡಿ ಅಗಲದ ಪುಟ್ಟ ಮನೆಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದ ದಯನೀಯ ಸ್ಥಿತಿಯಲ್ಲಿ ಬದುಕುತ್ತಿದ್ದ 10 ಮಕ್ಕಳು, 11 ಮಹಿಳೆಯರು, 16 ಪುರುಷರು ಸೇರಿದಂತೆ ಒಟ್ಟು 37 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದೆ. ಎಲ್ಲರೂ ಒಡಿಶಾದ ಬಲಂಗೀರ್, ನವರಂಗ್‌ಪುರ ಜಿಲ್ಲೆಯವರಾಗಿದ್ದಾರೆ.

ಈ ಕಾರ್ಮಿಕರನ್ನು ಒಡಿಶಾದಿಂದ ಕರೆತರಲಾಗಿದ್ದು, ಆರು ತಿಂಗಳ ಹಿಂದೆ ಪ್ರತಿ ವ್ಯಕ್ತಿಗೆ ₹40,000 ಮುಂಗಡ ಹಣ ನೀಡಿ ಇಲ್ಲಿಗೆ ಕರೆತರಲಾಗಿತ್ತು. ಆರಂಭದಲ್ಲಿ ಆರು ತಿಂಗಳ ಅವಧಿಗೆ ಅಷ್ಟೇ ಕೆಲಸ ಮಾಡಿಸುವುದಾಗಿ ಹೇಳಿ ಕರೆತರಲಾಗಿತ್ತು. ಹಾಗೆಯೇ ಕೆಲಸದ ಆಧಾರದಲ್ಲಿ ಹಣ ನೀಡುತ್ತೇವೆ ಎಂಬ ಭರವಸೆಯೂ ನೀಡಲಾಗಿತ್ತು.

ಅದರಂತೆ ಹಣದ ಆಸೆಗೆ ವಾರವಿಡೀ ಮೈ ಮುರಿದು ಕೆಲಸ ಮಾಡಿದರೂ ಇಡೀ ಕುಟುಂಬಕ್ಕೆ ವಾರಕ್ಕೆ ಕೇವಲ ₹500 ಮಾತ್ರ ನೀಡುತ್ತಾರೆ. ನಾವು ಆರು ತಿಂಗಳ ಹಿಂದೆ ಬಂದಿದ್ದೆವು. ನಮ್ಮ ಅವಧಿ ಮುಗಿದಿದೆ. ನಾವು ಹೋಗುತ್ತೇವೆ ಎಂದು ಹೇಳಿದಾಗ, ನೀವು ತಲಾ ₹40,000 ಪಡೆದು ಬಂದಿದ್ದೀರಿ, ಹೋಗುವಂತಿಲ್ಲ ಎಂದು ಬೆದರಿಕೆ ಹಾಕುತ್ತಿದ್ದರು. ಹೊರ ಪ್ರಪಂಚದ ಸಂಪರ್ಕವಿಲ್ಲದಂತೆ ಕಾಯಲು ಸೆಕ್ಯೂರಿಟಿ ಗಾರ್ಡ್ ನೇಮಿಸಲಾಗಿತ್ತು ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.


ಈ ವೇಳೆ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಪ್ರತಿಕ್ರಿಯಿಸಿ, ಇದು ಅತ್ಯಂತ ಆಘಾತಕಾರಿ ಘಟನೆಯಾಗಿದೆ. ಜೀತ ಪದ್ಧತಿಯಂತಹ ಅನಿಷ್ಟ ಪದ್ಧತಿ ಬೆಂಬಲಿಸುವವರ ವಿರುದ್ಧ ಈಗಾಗಲೇ ಮರಿಯಮ್ಮನಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ನಿಟ್ಟುಸಿರು ಬಿಟ್ಟ ಕಾರ್ಮಿಕರು:

ಒತ್ತೆಯಾಳುಗಳಾಗಿದ್ದ ಒಡಿಶಾ ಮೂಲದ 37 ಜೀವಗಳಿಗೆ ಕೊನೆಗೂ ಬಿಡುಗಡೆಯ ಭಾಗ್ಯ ದೊರೆತಿದೆ. ಜಿಲ್ಲಾಡಳಿತದ ಮಿಂಚಿನ ಕಾರ್ಯಾಚರಣೆಯಿಂದಾಗಿ ಜೀತ ಪದ್ಧತಿಯ ಸಂಕೋಲೆಯಲ್ಲಿ ನಲುಗುತ್ತಿದ್ದ 37 ಕಾರ್ಮಿಕರು ಇಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಸಹಾಯಕ ಆಯುಕ್ತ ವಿವೇಕಾನಂದ ನೇತೃತ್ವದ ತಂಡವು ನಂದಿಬಂಡಿ ಗ್ರಾಮದ ಮೇಲೆ ದಾಳಿ ನಡೆಸಿ, ಜೀತ ಪದ್ಧತಿಯಲ್ಲಿ ಸಿಲುಕಿದ್ದ 37 ಕಾರ್ಮಿಕರ ಯಶಸ್ವಿಯಾಗಿ ರಕ್ಷಿಸಲಾಗಿದೆ. ಸುದೀರ್ಘ ಕಾಲದ ನಂತರ ದಬ್ಬಾಳಿಕೆಯಿಂದ ಮುಕ್ತರಾದ ಕಾರ್ಮಿಕರ ಮುಖದಲ್ಲಿ ಮಂದಹಾಸ ಮೂಡಿತ್ತು. ಪಂಜರದಿಂದ ಬಿಡುಗಡೆಯಾದ ಹಕ್ಕಿಗಳಂತೆ ಎಲ್ಲರ ಮೊಗದಲ್ಲಿ ಸ್ವತಂತ್ರದ ಸಂಭ್ರಮ ಮನೆ ಮಾಡಿತ್ತು.

ಜಿಲ್ಲಾಡಳಿತ ಕೇವಲ ರಕ್ಷಣೆಗೆ ಸೀಮಿತವಾಗದೇ ಕಾರ್ಮಿಕರನ್ನು ಸುರಕ್ಷಿತವಾಗಿ ಅವರ ಸ್ವಗ್ರಾಮಕ್ಕೆ ಕಳುಹಿಸುವಲ್ಲಿ ವಿಶೇಷ ಕಾಳಜಿ ವಹಿಸಿತು. ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ಎಸ್ಪಿ ಎಸ್.ಜಾಹ್ನವಿ ಖುದ್ದಾಗಿ ಹಾಜರಿದ್ದು, ರೈಲಿನ ಮೂಲಕ ಅವರ ಸ್ವ ಗ್ರಾಮಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದರು. ಕಾರ್ಮಿಕರೊಂದಿಗೆ ಇಬ್ಬರು ಪೋಲೀಸ್, ಕಂದಾಯ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಸಹ ರಕ್ಷಣೆಗಾಗಿ ಕಳುಹಿಸಿಕೊಡಲಾಗಿದೆ.

ಈ ವೇಳೆ ಎಸ್ಪಿ ಎಸ್‌.ಜಾಹ್ನವಿ, ಡಿವೈಎಸ್ಪಿ ಪಿ.ಮುರಳೀಧರ, ಉಪವಿಭಾಗಾಧಿಕಾರಿ ವಿವೇಕಾನಂದ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.