ಸಾರಾಂಶ
ಮಾನಸಿಕ ಅಸ್ವಸ್ಥ ಬಾವಿಗೆ ಬಿದ್ದಿದ್ದ. ಆದರೆ ಬಾವಿಯಲ್ಲಿ ನೀರು ಇಲ್ಲದ ಕಾರಣ ಯುವಕನಿಗೆ ಯಾವುದೇ ಬಗೆಯ ಗಂಭೀರ ಗಾಯಗಳಾಗಿರಲಿಲ್ಲ. ಆತನನ್ನು ರಕ್ಷಿಸಲಾಗಿದೆ.
ಕನ್ನಡಪ್ರಭ ವಾರ್ತೆ ಕುಂದಗೋಳ
300 ಅಡಿ ಆಳದ ಪಾಳುಬಾವಿಯಲ್ಲಿ ಬಿದ್ದಿದ್ದ ಮಾನಸಿಕ ಅಸ್ವಸ್ಥ ಯುವಕನನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.ತಾಲೂಕಿನ ತರ್ಲಘಟ್ಟ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥನಾದ ಮಾಲತೇಶ ನೀಲಪ್ಪ ಮಾವನೂರು (16) ಎಂಬಾತ ರಾತ್ರಿ 10ರ ಸುಮಾರಿಗೆ ಬಾವಿಯೊಳಗೆ ಬಿದ್ದಿದ್ದ. ಈತ ಬೀಳುವುದನ್ನು ಸಾರ್ವಜನಿಕರು ನೋಡಿದರು. ಕೂಡಲೇ ಅಗ್ನಿ ಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದಾರೆ.
ಏಕೆ ಬಿದ್ದ:ಈತ ಬಾವಿ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬಿದ್ದಿದ್ದಾನೆ. ಆದರೆ ಇದರಲ್ಲಿ ನೀರು ಇರಲಿಲ್ಲ.
ಈತ ಬಿದ್ದ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಹಗ್ಗಕ್ಕೆ ಬುಟ್ಟಿ ಕಟ್ಟಿ ಕೆಳಕ್ಕೆ ಇಳಿಬಿಟ್ಟು ಆತನನ್ನು ರಕ್ಷಿಸಿದ್ದಾರೆ. ಗ್ರಾಮಸ್ಥರು ಬಾವಿಯೊಳಗೆ ಬಟ್ಟೆ ಬರೆ ಸೇರಿದಂತೆ ಇತರೆ ತ್ಯಾಜ್ಯ ಎಸೆಯುತ್ತಿದ್ದರಿಂದ ಈತನಿಗೆ ಏನೂ ಆಗಿರಲಿಲ್ಲ. ಸಣ್ಣಪುಟ್ಟ ಪರಿಚಿದ ಗಾಯಗಳಾಗಿದ್ದವು ಅಷ್ಟೇ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.ಈ ಕುರಿತು ಅಗ್ನಿಶಾಮಕ ದಳದ ಅಧಿಕಾರಿ ವಿನಾಯಕ ದೊಡ್ಡವಾಡ ಮಾತನಾಡಿ, ಮಾನಸಿಕ ಅಸ್ವಸ್ಥ ಬಿದ್ದಿದ್ದ. ಆದರೆ ಬಾವಿಯಲ್ಲಿ ನೀರು ಇಲ್ಲದ ಕಾರಣ ಯುವಕನಿಗೆ ಯಾವುದೇ ಬಗೆಯ ಗಂಭೀರ ಗಾಯಗಳಾಗಿರಲಿಲ್ಲ. ಆತನನ್ನು ರಕ್ಷಿಸಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಆರೋಗ್ಯದಿಂದ ಇದ್ದಾನೆ ಎಂದು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ರಾಜು ಎಸ್. ಜಾದವ, ಅಲ್ಲಾಭಕ್ಷಿ ಕಲಾಯಿಗಾರ, ಸತೀಶ ಎಸ್.ಎನ್, ರೋಹನ ಮತ್ತು ಕೆ.ಹೊನ್ನಪ್ಪ ಇದ್ದರು.