ದಾರಿ ತಪ್ಪಿ ಬಂದ ವೃದ್ಧ ಮಹಿಳಯ ರಕ್ಷಣೆ

| Published : Dec 05 2024, 12:33 AM IST

ದಾರಿ ತಪ್ಪಿ ಬಂದ ವೃದ್ಧ ಮಹಿಳಯ ರಕ್ಷಣೆ
Share this Article
  • FB
  • TW
  • Linkdin
  • Email

ಸಾರಾಂಶ

ಆನೆ, ಚಿರತೆ ಮೊದಲಾದ ವನ್ಯಮೃಗಗಳು ತಿರುಗಾಟ ಇರುವ ದಿಡುಪೆ -ಸಂಸೆ ರಸ್ತೆ ರಾತ್ರಿ ವೇಳೆ ಹೆಚ್ಚು ಅಪಾಯಕಾರಿಯಾದುದು. ಅರಣ್ಯ ಇಲಾಖೆ ಹಾಗೂ ಸ್ಥಳೀಯರ ತುರ್ತು ಸ್ಪಂದನೆಯಿಂದ ವೃದ್ಧೆ ಯಾವುದೇ ಅಪಾಯಕ್ಕೆ ಸಿಲುಕದೆ ಮರಳಿ ಗೂಡು ಸೇರಿದರು.

ಬೆಳ್ತಂಗಡಿ: ಕಳಸದ ಸಂಸೆಯಿಂದ ದಿಡುಪೆ ಕಡೆ ದಟ್ಟಅರಣ್ಯದ ರಸ್ತೆಯಲ್ಲಿ ಮಧ್ಯರಾತ್ರಿ ನಡೆದುಕೊಂಡು ಬರುತ್ತಿದ್ದ ವೃದ್ಧೆಯೊಬ್ಬರನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿ ಮನೆಯವರಿಗೆ ಒಪ್ಪಿಸಿದ ಘಟನೆ ನಡೆದಿದೆ.

ಸುಮಾರು 70 ವರ್ಷ ಪ್ರಾಯದ ಮಹಿಳೆಯೊಬ್ಬರು ಮಾನಸಿಕ ಅಸೌಖ್ಯದಿಂದ ಬಳಲುತ್ತಿದ್ದು, ಮನೆಯವರ ಗಮನಕ್ಕೆ ಬಾರದಂತೆ ಸೋಮವಾರ ಸಂಜೆ ಮನೆಯಿಂದ ಕಾಣೆಯಾಗಿದ್ದರು.

ಅವರು ಸಂಸೆಯಿಂದ ದಿಡುಪೆಗೆ ಸಂಪರ್ಕ ಇರುವ ಕಾಡು ರಸ್ತೆಯಲ್ಲಿ ರಾತ್ರಿ 11.30ರ ಸುಮಾರಿಗೆ ನಡೆದುಕೊಂಡು ಹೋಗುತ್ತಿರುವುದನ್ನು ಬೈಕ್‌ನಲ್ಲಿ ತೆರಳುತ್ತಿದ್ದವರು ನೋಡಿದ್ದಾರೆ. ತಕ್ಷಣ ಬೈಕ್ ಸವಾರರು ಈ ವಿಚಾರವನ್ನು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದವರ ಗಮನಕ್ಕೆ ತಂದರು.

ಸ್ಥಳಕ್ಕೆ ತೆರಳಿದ ವನ್ಯಜೀವಿ ವಿಭಾಗದ ಡಿಆರ್‌ಎಫ್‌ಒ ರಂಜಿತ್ ಕುಮಾರ್ ಹಾಗೂ ಸಿಬ್ಬಂದಿ ಭರತ್ ವೃದ್ಧ ಮಹಿಳೆಯನ್ನು ದಿಡುಪೆಗೆ ಸ್ಥಳೀಯ ಅಶೋಕ ಕಟ್ಣಡ್ಕ ಹಾಗೂ ಜಗದೀಶ್ ಅವರ ಸಹಕಾರದಲ್ಲಿ ಕರೆತಂದರು. ಬಳಿಕ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಸಂಸೆಯಿಂದ ಮನೆಯವರನ್ನು ಕರೆಯಿಸಿ ಅವರ ವಶಕ್ಕೆ ಒಪ್ಪಿಸಿದ್ದಾರೆ.

ಆನೆ, ಚಿರತೆ ಮೊದಲಾದ ವನ್ಯಮೃಗಗಳು ತಿರುಗಾಟ ಇರುವ ದಿಡುಪೆ -ಸಂಸೆ ರಸ್ತೆ ರಾತ್ರಿ ವೇಳೆ ಹೆಚ್ಚು ಅಪಾಯಕಾರಿಯಾದುದು. ಅರಣ್ಯ ಇಲಾಖೆ ಹಾಗೂ ಸ್ಥಳೀಯರ ತುರ್ತು ಸ್ಪಂದನೆಯಿಂದ ವೃದ್ಧೆ ಯಾವುದೇ ಅಪಾಯಕ್ಕೆ ಸಿಲುಕದೆ ಮರಳಿ ಗೂಡು ಸೇರಿದರು.