ಸಾರಾಂಶ
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ರೈತರೋರ್ವರು ಗಾಯಗೊಂಡಿರುವ ಪುನಗು ಬೆಕ್ಕನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ.ಬಳಗುಂದ ಗ್ರಾಮದ ಬಿ.ಸಿ.ಸುರೇಂದ್ರ ಎಂಬವರಿಗೆ ಮನೆಗೆ ಅಪರೂಪದ ಪುನಗು ಬೆಕ್ಕು ಬಂದು ಸೇರಿಕೊಂಡಿತ್ತು. ಕಾಡಿಗೆ ಕಳುಹಿಸುವ ಪ್ರಯತ್ನ ಮಾಡಿದರೂ, ಮಾರನೇ ದಿನವೂ ವಾಪಾಸ್ಸು ಮನೆಗೆ ಬಂದಿದೆ. ಪುನಗು ಬೆಕ್ಕಿನ ಕುತ್ತಿಗೆ ಭಾಗದಲ್ಲಿ ಗಾಯವನ್ನು ಗಮನಿಸಿದ ಸುರೇಂದ್ರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬೇಳೂರು ಉಪವಲಯದ ಡಿಆರ್‌ಎಫ್‌ಒ ನಾರಾಯಣ ಮೂಲ್ಯ ಮತ್ತು ಸಿಬ್ಬಂದಿ ಪುನಗು ಬೆಕ್ಕಿಗೆ ಚಿಕಿತ್ಸೆ ಕೊಡಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.
--------------------------------ಕೊಡಗು ಜಿಲ್ಲೆಯಾದ್ಯಂತ ಭಾರಿ ಮಳೆ
ಕನ್ನಡಪ್ರಭ ವಾರ್ತೆ ಮಡಿಕೇರಿಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಸೋಮವಾರ ಮಧ್ಯಾಹ್ನದ ಬಳಿಕ ಭಾರಿ ಮಳೆ ಸುರಿದಿದೆ.
ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಸೋಮವಾರಪೇಟೆ, ಸುಂಟಿಕೊಪ್ಪ, ಕುಶಾಲನಗರ ಭಾಗದಲ್ಲಿ ಮಳೆಯಾಗಿದೆ. ಸೋಮವಾರ ಜಿಲ್ಲೆಯ ವಿವಿಧೆಡೆ ಗೌರಿ, ಗಣೇಶ ಮೂರ್ತಿಗಳ ವಿಸರ್ಜನೋತ್ಸವ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮಳೆಯಿಂದ ತೊಂದರೆಯುಂಟಾಯಿತು. ಮಳೆಯ ನಡುವೆಯೇ ಹಲವು ಕಡೆಗಳಲ್ಲಿ ಶೋಭಾಯಾತ್ರೆ ನಡೆಯಿತು.ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 10.67 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 18.20 ಮಿ.ಮೀ. ಮಳೆಯಾಗಿತ್ತು.
ವಿರಾಜಪೇಟೆ ತಾಲೂಕಿನಲ್ಲಿ 8 ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ 11.20 ಮಿ.ಮೀ, ಕುಶಾಲನಗರ ತಾಲೂಕಿನಲ್ಲಿ 6.80 ಮಿ.ಮೀಯಾಗಿದೆ.ಜಿ ಮಡಿಕೇರಿ ಕಸಬಾ 24.40, ನಾಪೋಕ್ಲು 7.40, ಸಂಪಾಜೆ 18.50, ಭಾಗಮಂಡಲ 21.20, ವಿರಾಜಪೇಟೆ 8, ಅಮ್ಮತ್ತಿ 8, ಹುದಿಕೇರಿ 6.40, ಶ್ರೀಮಂಗಲ 17.60, ಪೊನ್ನಂಪೇಟೆ 8, ಬಾಳೆಲೆ 6, ಸೋಮವಾರಪೇಟೆ 10.20, ಶನಿವಾರಸಂತೆ 4.60, ಶಾಂತಳ್ಳಿ 20, ಕೊಡ್ಲಿಪೇಟೆ 10, ಕುಶಾಲನಗರ 4.60, ಸುಂಟಿಕೊಪ್ಪ 9 ಮಿ.ಮೀ.ಮಳೆಯಾಗಿದೆ.