ಸಾರಾಂಶ
ಕಂದಕದ ಕೆಸರಿನಲ್ಲಿ ಸಿಲುಕಿದ್ದ ಕಾಡಾನೆಯನ್ನುಅರಣ್ಯ ಅಧಿಕಾರಿಗಳು ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಕುಶಾಲನಗರ
ಅರಣ್ಯದಿಂದ ನೀರು ಅರಸಿ ಬಂದು ಕಂದಕದ ಕೆಸರಿನಲ್ಲಿ ಸಿಲುಕಿದ್ದ ಕಾಡಾನೆಯೊಂದನ್ನು ಕುಶಾಲನಗರ ವಲಯ ಅರಣ್ಯ ಅಧಿಕಾರಿ ಸಿಬ್ಬಂದಿ ರಕ್ಷಿಸುವ ಕಾರ್ಯಾಚರಣೆ ನಡೆಸಿ ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.ಕುಶಾಲನಗರ ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಬೆಟ್ಟಗೇರಿಯ ಕೆರೆಮೂಲೆಯ ಅರಣ್ಯದೊಳಗಿಂದ ಸ್ಥಳೀಯ ಕಾಫಿ ತೋಟಕ್ಕೆ ಆಗಮಿಸಿದ ಕಾಡಾನೆ ತೋಟದ ಮೂಲಕ ಅಶೋಕ್ ಎಂಬವರ ಮನೆಯಂಗಳಕ್ಕೆ ತೆರಳಿದೆ.
ಎಲ್ಲಿಯೂ ಕುಡಿಯಲು ನೀರು ಲಭಿಸದೇ ಇದ್ದ ಸಂದರ್ಭ ಸಮೀಪದಲ್ಲಿ ಇದ್ದ ಕಂದಕಕ್ಕೆ ಇಳಿದಿದೆ. ಅರಣ್ಯದಂಚಿನಲ್ಲಿದ್ದ ಕಂದಕದಲ್ಲಿ ನಿಂತಿದ್ದ ನೀರನ್ನು ಕುಡಿಯಲು ತೆರಳಿದಾಗ ಆನೆಯ ಕಾಲುಗಳು ಹೂತು ಹೋಗಿ ಅಲ್ಲೇ ಸಿಲುಕಿ ಕೊಂಡಿದೆ.ಕಾಫಿ ಬೆಳೆಗಾರ ಸಿ.ಕೆ.ಗಣೇಶ್ ಮಾರ್ಗ ಮಧ್ಯೆ ತೆರಳುವಾಗ ಕಾಡಾನೆಯ ಬಳಲಿದ ಸದ್ದು ಕೇಳಿ ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಕುಶಾಲನಗರ ಉಪವಲಯ ಅರಣ್ಯಾಧಿಕಾರಿಗಳಾದ ರಂಜನ್ ಹಾಗೂ ದೇವಯ್ಯ, ಕಾರ್ಯಪ್ರವೃತ್ತರಾಗಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಕೆಸರಿನಲ್ಲಿ ಸಿಲುಕಿದ್ದ ಕಾಡಾನೆಯನ್ನು ಮೇಲೆತ್ತಲು ಕಾರ್ಯಾಚರಣೆ ನಡೆಸಿ ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.ಜೆಸಿಬಿ ಯಂತ್ರ ತರಿಸಿ ಕಾಡಾನೆಯನ್ನು ಕೊನೆಗೂ ರಕ್ಷಿಸಿದ್ದಾರೆ. ಈ ನಡುವೆ ಕಾಡಾನೆ ಅಲ್ಲಿನ ಅಶೋಕ್ ಎಂಬವರಿಗೆ ಸೇರಿದ ನೀರಿನ ಟ್ಯಾಂಕ್ ಮತ್ತಿತರ ವಸ್ತುಗಳನ್ನು ನಾಶ ಮಾಡಿರುವುದು ಕಂಡು ಬಂದಿದೆ.