ಸಾರಾಂಶ
ಸಂಜೆ ಬೆಂಗಳೂರಿಗೆ ವಾಪಸಾಗುವ ವೇಳೆ ಮಿನಿಬಸ್ ಬ್ರೇಕ್ ಡೌನ್ ಆಗಿದೆ.
ಕಾರವಾರ: ಪ್ರವಾಸಿ ಮಿನಿ ಬಸ್‌ನ ಬ್ರೇಕ್ ಡೌನ್ ಆಗಿ ಕಾಡಿನಲ್ಲಿ ಸಿಲುಕಿದ್ದ 20ಕ್ಕೂ ಅಧಿಕ ಪ್ರವಾಸಿಗರನ್ನು 112 ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ರಕ್ಷಣೆ ಮಾಡಿ ವಾಪಸ್ ಊರಿಗೆ ಕಳಿಸಿಕೊಟ್ಟಿದ್ದಾರೆ.
ಬೆಂಗಳೂರು ಮೂಲದ 16 ಯುವಕರು, 8 ಯುವತಿಯರು, ಗೈಡ್ ಸೇರಿ 25 ಪ್ರವಾಸಿಗರು ಮಿನಿ ಬಸ್ ಮಾಡಿಸಿಕೊಂಡು ಅಂಕೋಲಾ ತಾಲೂಕಿನ ಯಾಣಕ್ಕೆ ಭಾನುವಾರ ಪ್ರವಾಸಕ್ಕೆ ಬಂದಿದ್ದರು. ಸಂಜೆ ಬೆಂಗಳೂರಿಗೆ ವಾಪಸಾಗುವ ವೇಳೆ ಮಿನಿಬಸ್‌ನ ಬ್ರೇಕ್ ಡೌನ್ ಆಗಿದೆ. ಯಾಣದಲ್ಲಿ ಮೊಬೈಲ್ ನೆಟ್ವರ್ಕ್ ಸಹ ಇಲ್ಲವಾಗಿದೆ. ರಾತ್ರಿ ಆಗಿದ್ದರಿಂದ ಯಾವುದೇ ನೆರವು ದೊರೆಯದೇ ಪ್ರವಾಸಿಗರು ಕಂಗಾಲಾಗಿದ್ದರು.
ಈ ವೇಳೆ ಹರಸಾಹಸಪಟ್ಟು ಪೊಲೀಸ್ ಇಲಾಖೆಯ 112 ತುರ್ತು ಸಹಾಯವಾಣಿ ಸಂಖ್ಯೆಗೆ ಸಹಾಯಕ್ಕಾಗಿ ನೆರವು ಕೋರಿ ವಾಯ್ಸ್ ಮೆಸೇಜ್ ಕಳುಹಿಸಿದ್ದರು. ಕೂಡಲೇ ಕಾರ್ಯ ಪ್ರವೃತ್ತರಾದ ಗೋಕರ್ಣದ ಪೊಲೀಸರು ನೆರವಿಗೆ ಧಾವಿಸಲು ಸ್ಥಳದ ಮಾಹಿತಿಗಾಗಿ ಸಂಪರ್ಕಿಸಲು ಯತ್ನಿಸಿದರಾದರೂ ನೆಟ್ವರ್ಕ್ ಇಲ್ಲದ ಹಿನ್ನೆಲೆ ಸಂಪರ್ಕ ಸಾಧ್ಯವಾಗಿರಲಿಲ್ಲ. ಬಳಿಕ ಯಾಣ ಕಡೆಗೆ ಪ್ರವಾಸಿಗರನ್ನು ಹುಡುಕಿಕೊಂಡು ಹೊರಟಿದ್ದು, ರಾತ್ರಿ 9.45ರ ವೇಳೆಗೆ ಪ್ರವಾಸಿಗರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಪರಿಶೀಲಿಸಿದಾಗ ಪ್ರವಾಸಿಗರ ಬಸ್‌ನ ಬ್ರೇಕ್ ಡೌನ್ ಆಗಿದ್ದರಿಂದ ಜೆಸಿಬಿಯೊಂದರ ಸಹಾಯದಿಂದ ಅಚವೆ ಉಪಠಾಣೆ ಸಿಬ್ಬಂದಿ ನೆರವಿನೊಂದಿಗೆ ಪ್ರವಾಸಿಗರ ಬಸ್‌ನ್ನು ಸುರಕ್ಷಿತ ಸ್ಥಳಕ್ಕೆ ತಂದು ನಿಲ್ಲಿಸಿದರು. ಪ್ರವಾಸಿಗರನ್ನು ಬೇರೆ ವಾಹನದ ಮೂಲಕ ಹಿಲ್ಲೂರು ಮಾರ್ಗವಾಗಿ ಅಂಕೋಲಾಕ್ಕೆ ಕಳಿಸಿದರು. ಅಲ್ಲಿಂದ ಎಲ್ಲ ಪ್ರವಾಸಿಗರೂ ಸುರಕ್ಷಿತವಾಗಿ ಬೆಂಗಳೂರಿಗೆ ತೆರಳಲು 112 ಸಿಬ್ಬಂದಿ ನೆರವಾಗಿದ್ದಾರೆ. ಸಿಬ್ಬಂದಿ ಸಂತೋಷ ಮಾಳಗೌಡರ, ಮಹೇಶ ನಾಯ್ಕ, ಪಂಡರಿನಾಥ ಮುಂಬೈಕರ ನೆರವಾದವರಾಗಿದ್ದಾರೆ.
ಪ್ರವಾಸಿಗರು ಆಗಮಿಸಿದ್ದ ಮಿನಿ ಬಸ್.