ಮಳೆಯ ಅನಿಶ್ಚಿತತೆ ಹಾಗೂ ಹೆಚ್ಚುತ್ತಿರುವ ಕೀಟಬಾಧೆಯಿಂದ ರೈತರು ಹೊಸ ಸವಾಲುಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿಯ ಕೃಷಿ ವಿಶ್ವವಿದ್ಯಾಲಯವು ಮಂಗಾರು ಹಾಗೂ ಹಿಂಗಾರು ಹಂಗಾಮಿಗೆ ಸೂಕ್ತವಾಗುವ ಬರ ನಿರೋಧಕ, ರೋಗ ನಿರೋಧಕ ಹಾಗೂ ಅಧಿಕ ಇಳುವರಿ ನೀಡುವ 14 ಹೊಸ ಬೆಳೆ ತಳಿಗಳನ್ನು ಅಭಿವೃದ್ಧಿಪಡಿಸಿದೆ.

ಬಸವರಾಜ ಹಿರೇಮಠ

ಕನ್ನಡಪ್ರಭ ವಾರ್ತೆ ಧಾರವಾಡ

ಮಳೆಯ ಅನಿಶ್ಚಿತತೆ ಹಾಗೂ ಹೆಚ್ಚುತ್ತಿರುವ ಕೀಟಬಾಧೆಯಿಂದ ರೈತರು ಹೊಸ ಸವಾಲುಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿಯ ಕೃಷಿ ವಿಶ್ವವಿದ್ಯಾಲಯವು ಮಂಗಾರು ಹಾಗೂ ಹಿಂಗಾರು ಹಂಗಾಮಿಗೆ ಸೂಕ್ತವಾಗುವ ಬರ ನಿರೋಧಕ, ರೋಗ ನಿರೋಧಕ ಹಾಗೂ ಅಧಿಕ ಇಳುವರಿ ನೀಡುವ 14 ಹೊಸ ಬೆಳೆ ತಳಿಗಳನ್ನು ಅಭಿವೃದ್ಧಿಪಡಿಸಿದೆ.

ಹೊಸ ತಳಿಗಳ ಪೈಕಿ ಜೋಳದ ಹೈಬ್ರಿಡ್‌ ಡಿಎಸ್‌ಎಚ್‌ 6 ವಿವಿಧ ಪರೀಕ್ಷೆಗಳಲ್ಲಿ ಹೆಕ್ಟೇರ್‌ಗೆ ಸರಾಸರಿ 4,962 ಕೆಜಿ ಧಾನ್ಯ ಇಳುವರಿ ದಾಖಲಿಸಿದೆ. ಇದು ಆರಂಭಿಕ ಅವಧಿಯ ಸಿಎಸ್‌ಎಚ್‌-42 ಗಿಂತ ಶೇ.18.8 ಹಾಗೂ ಸಿಎಸ್‌ಎಚ್‌-30ಗಿಂತ ಶೇ.10ರಷ್ಟು ಹೆಚ್ಚಿನ ಇಳುವರಿ ನೀಡಿದೆ. ಇದರ ಮೇವು ಇಳುವರಿಯೂ ಶೇ.14.6ರಷ್ಟು ಹೆಚ್ಚಿದ್ದು, ಕೇವಲ 105 ದಿನಗಳಲ್ಲಿ ಬೆಳೆ ಬರಲಿದ್ದು ರೈತರಿಗೆ ತುಂಬ ಅನುಕೂಲ ಆಗಲಿದೆ.

ಮೆಕ್ಕೆಜೋಳದ ಹೈಬ್ರಿಡ್‌ ಜಿಎಚ್‌ 21547 ಹೆಕ್ಟೇರ್‌ಗೆ ಸರಾಸರಿ 82 ಕ್ವಿಂಟಲ್‌ ಇಳುವರಿ ದಾಖಲಿಸಿದೆ. ಇದು ‘ಧರ್ಮ’ ತಳಿಗಿಂತ ಸುಮಾರು ಶೇ.15ರಷ್ಟು ಹೆಚ್ಚಿನ ಇಳುವರಿ ನೀಡುತ್ತದೆ. ಈ ತಳಿ 120 ದಿನಗಳಲ್ಲಿ ಪಕ್ವವಾಗಲಿದ್ದು, ಉತ್ತಮ ಕಾಳಿನ ತೂಕ ಹೊಂದಿದೆ. ಈ ಪ್ರದೇಶದ ಪ್ರಮುಖ ಖಾರಿಫ್‌ ಬೆಳೆಗಳಲ್ಲಿ ಒಂದಾದ ಹೆಸರು (ಹಸಿರು ಗ್ರಾಂ) ಬೆಳೆಗೆ ಯುಎಎಸ್‌ ಡಿಜಿಜಿ 9 ತಳಿ ಅಭಿವೃದ್ಧಿಪಡಿಸಿದೆ. ಈ ತಳಿಯು ಹೆಕ್ಟೇರ್‌ಗೆ 15 ಕ್ವಿಂಟಲ್‌ ಇಳುವರಿ ಸಾಮರ್ಥ್ಯ ಹೊಂದಿದ್ದು, ಡಿಜಿಜಿ 1 ತಳಿಗಿಂತ ಶೇ.14.8ರಷ್ಟು ಉತ್ತಮವಾಗಿದೆ.

ಸೋಯಾ, ಸೂರ್ಯಕಾಂತಿ:

ಮುಂಗಾರು ಹಂಗಾಮಿಗೆ ಸೂಕ್ತವಾದ ಡಿಎಸ್‌ಬಿ-7 ಎಂಬ ಹೊಸ ಸೋಯಾಬೀನ್‌ ತಳಿ ಸಂಶೋಧಿಸಿದ್ದು, ಇದು ಹೆಕ್ಟೇರ್‌ಗೆ 35 ಕ್ವಿಂಟಲ್‌ ಇಳುವರಿಯ ಸಾಮರ್ಥ್ಯ ಹೊಂದಿದೆ. ಈ ತಳಿಯು ಸೋಯಾಬೀನ್‌ ತುಕ್ಕು ರೋಗಕ್ಕೆ ನಿರೋಧಕವಾಗಿದ್ದು, ಶೇ.38ರಷ್ಟು ಪ್ರೊಟೀನ್‌ ಮತ್ತು ಶೇ.22ರಷ್ಟು ಎಣ್ಣೆ ಅಂಶ ಹೊಂದಿದೆ. ಇನ್ನು, ವಿಶ್ವವಿದ್ಯಾಲಯವು ಕೆಬಿಎಸ್‌ಎಚ್‌ 88 ಎಂಬ ಸೂರ್ಯಕಾಂತಿ ಹೈಬ್ರಿಡ್‌ ತಳಿ ಸಹ ಅಭಿವೃದ್ಧಿಪಡಿಸಿದೆ. ಇದು 84 ದಿನಗಳಲ್ಲಿ ಪಕ್ವವಾಗಲಿದ್ದು, ಶೇ.59.4ರಷ್ಟು ಓಲಿಯಿಕ್‌ ಆಮ್ಲವನ್ನು ಹೊಂದಿದೆ. ಕರ್ನಾಟಕದ ವಲಯ 3 ಮತ್ತು 4ರ ಅರೆ-ಶುಷ್ಕ ಹಾಗೂ ಮಳೆ ಆಧಾರಿತ ಪ್ರದೇಶಗಳಿಗೆ ಈ ತಳಿ ಸೂಕ್ತವಾಗಿದೆ.

ಹಿಂಗಾರು ಹಂಗಾಮಿಗಾಗಿ ಯುಎಎಸ್‌ ಡಿಡಬ್ಲ್ಯೂಬಿ-20 ಎಂಬ ಗೋಧಿ ತಳಿಯನ್ನು ಅಭಿವೃದ್ಧಿಪಡಿಸಿದೆ. ಕರ್ನಾಟಕದ 3 ಮತ್ತು 8ನೇ ವಲಯಗಳಿಗೆ ಈ ತಳಿ ಶಿಫಾರಸು ಮಾಡಲಾಗಿದೆ. ಇದು ಹೆಕ್ಟೇರ್‌ಗೆ 3,521 ಕೆ.ಜಿ. ಧಾನ್ಯ ಇಳುವರಿ ದಾಖಲಿಸಿದ್ದು, ಎಲೆ ತುಕ್ಕು ಮತ್ತು ಕಾಂಡದ ತುಕ್ಕು ರೋಗಗಳಿಗೆ ನಿರೋಧಕ. ಉತ್ತಮ ಚಪಾತಿ ತಯಾರಿಕಾ ಗುಣಮಟ್ಟ ಹೊಂದಿರುವ ಈ ತಳಿಯು ಬೇಕರಿ ಉತ್ಪನ್ನಗಳ ತಯಾರಿಕೆಗೂ ಸೂಕ್ತವಾಗಿದೆ. ಇನ್ನೊಂದು ಗೋಧಿ ತಳಿ ಡಿಡಬ್ಲ್ಯೂಬಿ-18 ಹೆಕ್ಟೇರ್‌ಗೆ 28 ಕ್ವಿಂಟಲ್‌ ಇಳುವರಿ ಸಾಮರ್ಥ್ಯ ಹೊಂದಿದ್ದು, ಶೇ.14.2ರಷ್ಟು ಪ್ರೋಟಿನ್‌ ಅಂಶ ಹೊಂದಿದೆ. ಇದರೊಂದಿಗೆ ಹಿಂಗಾರಿಗೆ ಸೂಕ್ತವಾದ ಡಿಎಸ್‌ಎಎಫ್‌ 2 ಎಂಬ ಕುಸುಬೆ ತಳಿ ಅಭಿವೃದ್ಧಿಪಡಿಸಿದೆ. ಇದು 130 ದಿನಗಳಲ್ಲಿ ಪಕ್ವವಾಗಲಿದ್ದು, ಹೆಕ್ಟೇರ್‌ಗೆ 1,920 ಕೆಜಿ ಇಳುವರಿ ಸಾಮರ್ಥ್ಯ ಹೊಂದಿದೆ.

ಸಿರಿಧಾನ್ಯಗಳ ಪೌಷ್ಟಿಕಾಂಶದ ಮಹತ್ವವನ್ನು ಆರೋಗ್ಯ ತಜ್ಞರು ಹಾಗೂ ಕೃಷಿ ಸಂಸ್ಥೆಗಳು ಒತ್ತಿಹೇಳುತ್ತಿರುವ ಹಿನ್ನೆಲೆ ಸಿರಿಧಾನ್ಯಗಳ ಬೆಳೆ ಮತ್ತು ಬಳಕೆ ಉತ್ತೇಜಿಸಲು ಭಾರತೀಯ ಕೃಷಿ ಸಂಶೋಧನಾ ಮಂಡಳಿ ಕೃಷಿ ವಿವಿಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಈ ಹಿನ್ನೆಲೆ ಕೃಷಿ ವಿವಿಯು ಅಧಿಕ ಇಳುವರಿ ನೀಡುವ ಹಾಗೂ ಹವಾಮಾನ ವೈಪರೀತ್ಯ ಸಹಿಸಿಕೊಳ್ಳುವ ಎರಡು ಹೊಸ ಸಿರಿಧಾನ್ಯ ತಳಿಗಳನ್ನು ಅಭಿವೃದ್ಧಿಪಡಿಸಿದೆ. ಡಿಪಿಎಂಎಚ್‌ 4 ಎಂಬ ಸಜ್ಜೆ ಹೈಬ್ರಿಡ್‌ ತಳಿ, ಡಿಬಿಟಿಎಂ 1 ಎಂಬ ಬ್ರೌನ್‌ಟಾಪ್‌ ಮಿಲೆಟ್‌ (ಕೋರಲೆ/ಬ್ರೌನ್‌ಟಾಪ್‌ ಸಿರಿಧಾನ್ಯ) ತಳಿ ಅಭಿವೃದ್ಧಿಪಡಿಸಲಾಗಿದೆ. ಅಲ್ಲದೇ, ಟಿಡಿಎಂ 305 ಎಂಬ ಹೊಸ ಸಾಸಿವೆ ತಳಿ ಹಾಗೂ ಡಿಎಚ್‌ಸಿವಿ 1 ಎಂಬ ದೇಸಿ ಹತ್ತಿ ತಳಿಯನ್ನೂ ಅಭಿವೃದ್ಧಿಪಡಿಸಿದೆ. ಕೋಟ್‌....

ಸವಾಲು ಎದುರಿಸುವ ತಳಿಗಳಿವು

ಹವಾಮಾನ ಬದಲಾವಣೆ ಹಾಗೂ ಬರದಂತಹ ಪರಿಸ್ಥಿತಿಯಿಂದ ಉಂಟಾಗುವ ಸವಾಲು ಎದುರಿಸಲು ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗಗಳ ರೈತರಿಗೆ ಈ ಹೊಸ ತಳಿಗಳನ್ನು ಸಂಶೋಧಿಸಲಾಗಿದೆ. ಸಿರಿಧಾನ್ಯ, ಎಣ್ಣೆಬೀಜ ಹಾಗೂ ಇತರ ಬೆಳೆಗಳ ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿದ್ದು, ವಿಶ್ವವಿದ್ಯಾಲಯ ವ್ಯಾಪ್ತಿ ಪ್ರದೇಶದಲ್ಲಿ ಈ ತಳಿಗಳ ಸಾಮರ್ಥ್ಯ ಪರೀಕ್ಷೆ ಸಹ ನಡೆಸಿ ಯಶಸ್ವಿಯಾಗಿದ್ದೇವೆ. ಈ ತಳಿಗಳನ್ನು ಇದೀಗ ರೈತರ ಅನುಕೂಲಕ್ಕಾಗಿ ಕೃಷಿ ಮೇಳದ ಮೂಲಕ ಬಿಡುಗಡೆ ಸಹ ಮಾಡಲಾಗುತ್ತಿದೆ.

-ಡಾ.ಎನ್‌.ಬಿ.ಪ್ರಕಾಶ, ಕೃಷಿ ವಿವಿ ಕುಲಪತಿ