ಸಾರಾಂಶ
ಹುಬ್ಬಳ್ಳಿಯಲ್ಲಿರುವ ಕ್ಯಾನ್ಸರ್ ಆಸ್ಪತ್ರೆಯನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿ, ಬೇರೆ ಬೇರೆ ಕಡೆಗಳಲ್ಲಿ ಕ್ಯಾನ್ಸರ್ ಕೇಂದ್ರಗಳನ್ನು ತೆರೆದು ಅದನ್ನು ಮುಂದುವರಿಸಿಕೊಂಡುವ ಹೋಗುವ ಕೆಲಸ ಮಾಡಬೇಕು.
ಹುಬ್ಬಳ್ಳಿ:
ಕ್ಯಾನ್ಸರ್ ವಿರುದ್ಧ ಯುದ್ಧ ಮಾಡುವುದು ಇಂದಿನ ಅಗತ್ಯವಾಗಿದ್ದು ಭಾರತೀಯ ಸಂಶೋಧನಾ ಕೇಂದ್ರಗಳು ಕ್ಯಾನ್ಸರ್ ನಿಯಂತ್ರಿಸುವಲ್ಲಿ ಹೆಚ್ಚಿನ ಸಂಶೋಧನೆ ನಡೆಸಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಇಲ್ಲಿನ ನವನಗರದಲ್ಲಿ ಕರ್ನಾಟಕ ಕ್ಯಾನ್ಸರ್ ಚಿಕಿತ್ಸೆ ಮತ್ತು ಸಂಶೋಧನಾ ಸಂಸ್ಥೆಯ ವತಿಯಿಂದ ಏರ್ಪಡಿಸಿದ್ದ ಸಾರ್ವಜನಿಕ ಆರೋಗ್ಯ ವಾಹಿನಿ ಉದ್ಘಾಟಿಸಿ ಮಾತನಾಡಿದರು.ಕ್ಯಾನ್ಸರ್ ಚಿಕಿತ್ಸೆ ನಮ್ಮ ಸರ್ಕಾರಿ ಆಸ್ಪತ್ರೆಯಲ್ಲಿ ಇರಲಿಲ್ಲ. ಉತ್ತರ ಕರ್ನಾಟಕದಲ್ಲಿ ಜನರಿಗೆ ಮಾತ್ರ ಕ್ಯಾನ್ಸರ್ ಚಿಕಿತ್ಸೆ ಕಡಿಮೆ ಇದೆ. ದಕ್ಷಿಣ ಕರ್ನಾಟಕದಲ್ಲಿ ನೂರಕ್ಕೆ 80ರಷ್ಟು ಜನರಿಗೆ ಕ್ಯಾನ್ಸರ್ ಚಿಕಿತ್ಸೆ ದೊರೆತರೆ, ಉತ್ತರ ಕರ್ನಾಟಕದವರಿಗೆ ನೂರರಲ್ಲಿ ಮೂವತ್ತು ಜನರಿಗೆ ಮಾತ್ರ ಚಿಕಿತ್ಸೆ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮಟ್ಟದಲ್ಲಿ ಕ್ಯಾನ್ಸರ್ ಚಿಕಿತ್ಸೆ ಬಲವರ್ಧನೆಗೊಳಿಸುವ ಕೆಲಸವಾಗಬೇಕು ಎಂದರು.
ಹುಬ್ಬಳ್ಳಿಯಲ್ಲಿರುವ ಕ್ಯಾನ್ಸರ್ ಆಸ್ಪತ್ರೆಯನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿ, ಬೇರೆ ಬೇರೆ ಕಡೆಗಳಲ್ಲಿ ಕ್ಯಾನ್ಸರ್ ಕೇಂದ್ರಗಳನ್ನು ತೆರೆದು ಅದನ್ನು ಮುಂದುವರಿಸಿಕೊಂಡುವ ಹೋಗುವ ಕೆಲಸ ಮಾಡಬೇಕು ಎಂದು ಹೇಳಿದರು.ಕ್ಯಾನ್ಸರ್ ಸಂಪೂರ್ಣ ನಿಯಂತ್ರಣ ಮಾಡಲು ಆಗದಿದ್ದರೂ ನಿಯಂತ್ರಣಕ್ಕೆ ಸಾಕಷ್ಟು ಸಂಶೋಧನೆಗಳು ಆಗಿವೆ. ಮೈಕ್ರೊಲೆವೆಲ್ ಚಿಕಿತ್ಸೆ ನೀಡುವ ವ್ಯವಸ್ಥೆ ಬಂದಿದೆ. ಇನ್ನಷ್ಟು ಸಂಶೋಧನೆ ಆಗಬೇಕಿದೆ. ಭಾರತೀಯ ಸಂಶೋಧನಾ ಕೇಂದ್ರಗಳಿಗೆ ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆ ನಡೆಸಬೇಕು. ಇಪ್ಪತ್ತು ವರ್ಷಗಳ ಹಿಂದೆ ಒಟ್ಟು ಜನಸಂಖ್ಯೆಯ ಶೇ. 11ರಷ್ಟು ಮಾತ್ರ ಜನರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಈಗ ಅದರ ಪ್ರಮಾಣ ಹೆಚ್ಚಾಗಿದೆ. ಇನ್ನಷ್ಟು ಸಂಶೋಧನೆಗಳು ನಡೆದು ಔಷಧಗಳು ಬರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ವಿಜಯ ಸಂಕೇಶ್ವರ, ಡಾ. ಬಿ.ಆರ್. ಪಾಟೀಲ್ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.