ಸಂಶೋಧಕರಿಗೆ ಕಲ್ಪನೆ, ಭಾಷೆ ಅವಶ್ಯಕ: ಅಮರೇಶ ನುಗಡೋಣಿ

| Published : Jul 17 2025, 12:34 AM IST

ಸಾರಾಂಶ

ಸಂಶೋಧಕರಿಗೆ ಕಲ್ಪನೆ ಮತ್ತು ಭಾಷೆ ಅವಶ್ಯಕ. ಕಲ್ಪನೆ ಸಾಹಿತ್ಯದಲ್ಲಿ ದೊಡ್ಡ ವರ.

ನಂದಿಹಳ್ಳಿಯಲ್ಲಿರುವ ಸ್ನಾತಕೋತ್ತರ ಕೇಂದ್ರದ ಸಭಾಂಗಣದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಲೇಖಕ

ಕನ್ನಡಪ್ರಭ ವಾರ್ತೆ ಸಂಡೂರು

ಸಂಶೋಧಕರಿಗೆ ಕಲ್ಪನೆ ಮತ್ತು ಭಾಷೆ ಅವಶ್ಯಕ. ಕಲ್ಪನೆ ಸಾಹಿತ್ಯದಲ್ಲಿ ದೊಡ್ಡ ವರ ಎಂದು ಲೇಖಕ ಅಮರೇಶ ನುಗಡೋಣಿ ಅಭಿಪ್ರಾಯಪಟ್ಟರು.

ತಾಲೂಕಿನ ನಂದಿಹಳ್ಳಿಯಲ್ಲಿರುವ ಸ್ನಾತಕೋತ್ತರ ಕೇಂದ್ರದ ಸಭಾಂಗಣದಲ್ಲಿ ಬುಧವಾರ ಕೇಂದ್ರದ ಅಲ್ಯುಮ್ನಿ ಅಸೋಸಿಯೇಷನ್ ಮತ್ತು ಕನ್ನಡ ಅಧ್ಯಯನ ವಿಭಾಗದ ಸಹಯೋಗದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ವಿದ್ಯಾರ್ಥಿಗಳು ಶೋಧ ಮಾಡುವಾಗ ಕನ್ನಡ ಸಾಹಿತ್ಯ ಮತ್ತು ಚರಿತ್ರೆಯ ವಿಷಯಗಳನ್ನು ತಿಳಿದು ಅಧ್ಯಯನ ಮಾಡಬೇಕಾಗುತ್ತದೆ. ಸಂಶೋಧನೆಗೆ ವೈಧಾನಿಕತೆ ಮುಖ್ಯವಾಗಿರುತ್ತದೆ. ಇದರಿಂದ ಸಂಶೋಧನಾ ಪ್ರಬಂಧಗಳನ್ನು ಕಟ್ಟಿಕೊಡಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ನಿರ್ದೇಶಕ ಡಾ. ರವಿ ಬಿ. ಮಾತನಾಡಿ, ಅಮರೇಶ ನುಗಡೋಣಿ ಅವರು ಈ ನಾಡು ಕಂಡಂತಹ ಹೆಸರಾಂತ ಕತೆಗಾರರು, ಕಾದಂಬರಿಕಾರರು ಮತ್ತು ಸಂಶೋಧಕರು. ಅವರ ಅನೇಕ ಕತೆ ಮತ್ತು ಕಾದಂಬರಿಗಳು ಸಿನಿಮಾ ಹಾಗೂ ನಾಟಕಗಳಾಗಿವೆ. ಈ ಸಿನಿಮಾ ಮತ್ತು ನಾಟಕಗಳಿಗೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳೂ ಲಭಿಸಿವೆ. ಇಂತಹ ಸಂಶೋಧಕರು ಇಂದು ನಮ್ಮ ವಿದ್ಯಾರ್ಥಿಗಳಿಗೆ ಉಪನ್ಯಾಸ ಕೊಡಲು ಆಗಮಿಸಿರುವುದು ಸಂತಸದ ವಿಷಯ ಎಂದರು.

ಕನ್ನಡ ವಿಭಾಗದ ಅಧ್ಯಾಪಕ ಡಾ. ಮಲ್ಲಯ್ಯ ಸಂಡೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಡಾ. ಗುಡ್ಡಪ್ಪ, ಶಿವಕುಮಾರ, ರೇಣುಕಾ ಪೂಜಾರಿ, ಇತಿಹಾಸ ವಿಭಾಗದ ಅಧ್ಯಾಪಕರಾದ ಡಾ. ವಿರುಪಾಕ್ಷಿ, ಡಾ. ನರಸಿಂಹಮೂರ್ತಿ, ರಮೇಶ್, ಕ್ರೀಡಾ ಸಹಾಯಕ ನಿರ್ದೇಶಕ ಶಿವರಾಮಪ್ಪ ರಾಗಿ, ಸಂಡೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಅಧ್ಯಾಪಕರಾದ ಡಾ. ಈ.ಜಿ. ರೇಖಾ, ಡಾ. ಶಿವರಂಜನಿ, ದೇವೇಂದ್ರ ಹಾಗೂ ಕನ್ನಡ ಮತ್ತು ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.