ಕೊಪ್ಪಳ: ಡಿಜಿಟಲ್ ಮತ್ತು ತಂತ್ರಜ್ಞಾನ ಯುಗದಲ್ಲಿ ಸಂಶೋಧಕರು ಆಧುನಿಕ ಎಐ ಪರಿಕರ ಹಾಗೂ ಸುಧಾರಿತ ಸಾಹಿತ್ಯ ಅವಲೋಕನ ವಿಧಾನಗಳ ಕುರಿತು ಸಮಗ್ರ ಮಾಹಿತಿ ಹೊಂದಿರುವುದು ಅಗತ್ಯ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಗುರುರಾಜ ಹಡಗಲಿ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಪಿಎಂ-ಉಷಾ ಪ್ರಾಯೋಜಕತ್ವ ಹಾಗೂ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಆಯೋಜಿಸಿದ್ದ ಸುಧಾರಿತ ಸಂಶೋಧನಾ ಪರಿಕರಗಳು ಕುರಿತ ರಾಜ್ಯ ಮಟ್ಟದ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮದ ಎರಡನೇ ದಿನದ ಅಧಿವೇಶನದಲ್ಲಿ ಮಾತನಾಡಿದರು.ಮೊದಲ ತಾಂತ್ರಿಕ ಅಧಿವೇಶನದಲ್ಲಿ ಸುಧಾರಿತ ಸಾಹಿತ್ಯ ಅವಲೋಕನ ವಿಧಾನಗಳು ಕುರಿತು ಉಪನ್ಯಾಸ ನೀಡಿದ ಅವರು, ಉತ್ತಮ ಸಂಶೋಧನೆಗೆ ಸಮಗ್ರ ಸಾಹಿತ್ಯ ಅವಲೋಕನ ಅತ್ಯಂತ ಮುಖ್ಯವಾಗಿದ್ದು, ಸಂಶೋಧನಾ ಅಂತರ ಗುರುತಿಸುವುದು, ಮೂಲ ವೈಜ್ಞಾನಿಕವಾಗಿ ವಿಶ್ಲೇಷಿಸುವುದು ಹಾಗೂ ಡಿಜಿಟಲ್ ದತ್ತಾಂಶ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
ಎರಡನೇ ಅಧಿವೇಶನದಲ್ಲಿ ಸಂಶೋಧನೆಗಾಗಿ ಎಐ ಪರಿಕರಗಳು ವಿಷಯವಾಗಿ ಮಾತನಾಡಿದ ಅವರು, ಕೃತಕ ಬುದ್ಧಿಮತ್ತೆ ಆಧಾರಿತ ಪರಿಕರ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತಂದಿವೆ ಎಂದು ಹೇಳಿದರು.ಮೂರನೇ ತಾಂತ್ರಿಕ ಅಧಿವೇಶನದಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಜನಾರ್ದನ ಅವರು ಡಿಜಿಟಲ್ ದತ್ತಾಂಶ ಸಂಗ್ರಹ, ಪರಿಕರಗಳು ಮತ್ತು ತಂತ್ರಗಳು ಕುರಿತು ಉಪನ್ಯಾಸ ನೀಡಿದರು.
ಸಂಶೋಧನೆಯಲ್ಲಿ ಡಿಜಿಟಲ್ ದತ್ತಾಂಶ ಸಂಗ್ರಹಣೆಯ ಮಹತ್ವ,ಆನ್‌ಲೈನ್ ಸಮೀಕ್ಷಾ ವಿಧಾನಗಳು, ಕ್ಷೇತ್ರ ಅಧ್ಯಯನದಲ್ಲಿ ತಂತ್ರಜ್ಞಾನದ ಬಳಕೆ ಹಾಗೂ ದತ್ತಾಂಶ ನಿರ್ವಹಣೆಯ ಕುರಿತು ಮಾಹಿತಿ ನೀಡಿದರು. ನಾಲ್ಕನೇ ಅಧಿವೇಶನದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ರಮೇಶ್ ಕೆ ಉಲ್ಲೇಖ ನಿರ್ವಹಣಾ ಪರಿಕರಗಳು ಕುರಿತು ಮಾಹಿತಿ ನೀಡಿದರು. ಸಂಶೋಧನಾ ಲೇಖನಗಳಲ್ಲಿ ಉಲ್ಲೇಖಗಳ ಸರಿಯಾದ ಬಳಕೆ, ಉಲ್ಲೇಖ ನಿರ್ವಹಣಾ ಸಾಫ್ಟ್‌ವೇರ್‌ಗಳ ಉಪಯೋಗ ಹಾಗೂ ಶೈಕ್ಷಣಿಕ ಪ್ರಾಮಾಣಿಕತೆಯ ಮಹತ್ವ ವಿವರಿಸಿದರು.
ಎಐ ಬಳಕೆ ಮಾಡುವಾಗ ಸಂಶೋಧಕರು ಪ್ರಾಮಾಣಿಕತೆ ಮತ್ತು ಶೈಕ್ಷಣಿಕ ನೈತಿಕತೆ ಕಾಪಾಡಿಕೊಳ್ಳಬೇಕು ಎಂದು ವಿವಿಧ ಸಂಪನ್ಮೂಲ ವ್ಯಕ್ತಿಗಳು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ವೈ.ಬಿ. ಅಂಗಡಿ, ಕಾರ್ಯಕ್ರಮದ ಸಂಚಾಲಕಿ ಸುಧಾ ಹೆಗಡೆ, ಐಕ್ಯೂಎಸಿ ಸಂಯೋಜಕ ಪ್ರಕಾಶ್ ಗೌಡ ಹಾಗೂ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ಅಧ್ಯಾಪಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಸಂವಾದಾತ್ಮಕವಾಗಿ ಚರ್ಚೆಯಲ್ಲಿ ಪಾಲ್ಗೊಂಡರು.