ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸಂಶೋಧನೆಗಳು ಸತ್ಯದ ಕಡೆಗೆ ಹೋಗಬೇಕು ಎಂಬ ತತ್ವದಡಿ ಡಾ.ಎಂ.ಎಂ. ಕಲಬುರ್ಗಿ ಅವರು ಸಂಶೋಧನೆ ನಡೆಸುತ್ತಿದ್ದರು ಎಂದು ಮೈಸೂರಿನ ಕುಂದೂರು ಮಠದ ಡಾ.ಶರತಚಂದ್ರ ಸ್ವಾಮೀಜಿ ಹೇಳಿದರು.ನಗರದ ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಗ್ರಂಥಾಲಯ ಸಭಾಂಗಣದಲ್ಲಿ ಡಾ.ಎಂ.ಎಂ. ಕಲಬುರ್ಗಿ ಸಮಗ್ರ ಸಾಹಿತ್ಯ 40 ಸಂಪುಟಗಳ ಲೋಕಾರ್ಪಣೆ ಅಂಗವಾಗಿ ಶನಿವಾರ ಆಯೋಜಿಸಿದ್ದ ವಿಚಾರ ಸಂಕಿರಣದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಅನುಭಾವದ ಸಂಶೋಧನೆ ಮತ್ತು ಆಸಕ್ತಿ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಲೇಖನಿಗೆ ದೊಡ್ಡ ಶಕ್ತಿಯಿದೆ. ಸತ್ಯ ಸಂಶೋಧನೆ ಸಮಾಜಕ್ಕೆ ಪೂರಕವಾದರೆ, ಪೀತ ಸಂಶೋಧನೆ ಮಾರಕವಾಗಿದೆ. ನಂಬಿಕೆಗಿಂತ ಸತ್ಯ ಸಂಶೋಧಿಸುವ ಗುಣ ಬೆಳೆಸಿಕೊಳ್ಳಬೇಕು. ಸಂಶೋಧನೆಯಂದರೆ ಭೂಮಿಯಿಂದ ಚಿನ್ನ ತೆಗೆದಂತೆ. ಕಾಲ ಗರ್ಭದಲ್ಲಿರುವ ಸತ್ಯ ಸಂಗತಿಗಳನ್ನು ಹೆಕ್ಕಿ ತೆಗೆದು ಸಂಸ್ಕೃತಿ ಕಟ್ಟುವ ಜವಾಬ್ದಾರಿಯುತ ಕೆಲಸವಾಗಿದೆ ಎಂದರು.ಹಿರಿಯ ಸಂಶೋಧಕ ಮತ್ತು 40 ಸಂಪುಟಗಳ ಸಂಪಾದಕ ಡಾ.ವೀರಣ್ಣ ರಾಜೂರ ಮಾತನಾಡಿ, ಬೇರೆಯವರು 10 ಜನ್ಮಗಳಲ್ಲಿ ಮಾಡುವ ಸಂಶೋಧನೆ ಕೆಲಸವನ್ನು ಕಲಬುರ್ಗಿ ಅವರು ಒಂದೇ ಜನ್ಮದಲ್ಲಿ ಮಾಡಿದ್ದಾರೆ. ಅವರ ಜೀವನದ ಕೆಲಸ ಕಾರ್ಯಗಳನ್ನು ನಾವು ಸಂಪುಟ ಮಾಡಿರುವುದು ನಮ್ಮ ಪುಣ್ಯ. ಪಾಂಡಿತ್ಯ ಪರಂಪರೆ ಅಳವಡಿಸಿಕೊಂಡು ಸೃಜನೇತರ ಸಾಹಿತ್ಯಕ್ಕೆ ಅರ್ಪಿಸಿಕೊಂಡಿದ್ದ ಅವರು ಪ್ರಕಟಿಸಿದ ವಚನದ ಆಕರ ಸಾಮಗ್ರಿಗಳನ್ನು ಸಂಗ್ರಹಿಸಿ ಪ್ರಕಟ ಮಾಡುವ ಮೂಲಕ ಇತಿಹಾಸದಲ್ಲಿ ಎಲೆಮರೆಯ ಕಾಯಿಯಂತಿದ್ದ ಬಸವಾದಿ ಶರಣರ ಮತ್ತು ಕನ್ನಡ ಸಾಹಿತ್ಯ ಬೆಳಕಿಗೆ ತಂದಿದ್ದಾರೆ ಎಂದು ಹೇಳಿದರು.
ಸಂಶೋಧಕ ಡಾ.ಎಸ್.ಕೆ.ಕೊಪ್ಪ ಮಾತನಾಡಿ, ಕಲಬುರ್ಗಿಯವರ ಆಸಕ್ತಿ ಕ್ಷೇತ್ರಗಳ ಹರಿವು ದೊಡ್ಡದಿದೆ. ಸೃಜನ ಮತ್ತು ಸೃಜನೇತರ ಎರಡೂ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದ್ದಾರೆ. ಸಂಶೋಧನೆ ಅವರ ಆತ್ಮವಾಗಿತ್ತು. ಸಂಶೋಧನೆ ಹರವು ಅನಂತಮುಖವಾಗಿದೆ. ಅವರ ಸಂಶೋಧನೆ ಇಡೀಯಾದ ಗ್ರಂಥಗಳ ರೂಪ ಮತ್ತು ಬಿಡಿಬಿಡಿಯಾದ ಸಂಶೋಧನ ಪ್ರಬಂಧಗಳಲ್ಲಿದೆ. ಕಳೆದು ಹೊದ ಚರಿತ್ರೆಯನ್ನು ಕಟ್ಟಿ ಕೊಟ್ಟಿದ್ದಾರೆ. ಕನ್ನಡ ಅಧ್ಯಯನ ವಿಭಾಗದಲ್ಲಿ ಶಾಸನಶಾಸ್ತ್ರ ಅಧ್ಯಯನ ಪತ್ರಿಕೆ ಪ್ರಾರಂಭಿಸಿದ್ದರು. ಕನ್ನಡದ 30000 ಶಾಸನಗಳನ್ನು ಸಂಶೋಧಿಸಿದರು. ಆಕರಗಳಲ್ಲಿರುವ ಸಾಹಿತ್ಯವನ್ನು ವಿಶ್ಲೇಷಿಸಿ ವ್ಯಾಖ್ಯಾನಿಸಿದ್ದಾರೆ ಎಂದು ಹೇಳಿದರು.ಸಂಶೋದಕ ಡಾ.ಗುರುಪಾದ ಮರಿಗುದ್ದಿ ಮಾತನಾಡಿ, ಸ್ವಚಿಂತನೆ ಕವಿತೆಗಳು, ವ್ಯಕ್ತಿ ಚಿತ್ರಣ, ಸಾಂಸ್ಕೃತಿಕ, ಕನ್ನಡ, ವಚನಗಳ ಬಗ್ಗೆ ಕಲಬುರ್ಗಿ ಅವರು ಬರೆದಿದ್ದಾರೆ. ನಾಟಕ, ಗದ್ಯ ಮತ್ತು ಲೇಖನ ಸಾಹಿತ್ಯ ಚಾರಿತ್ರ್ಯದ ವಿಷಯವನ್ನು ವಿಶ್ಲೇಷಿಸಿದ್ದಾರೆ ಎಂದರು.
ಇನ್ನೋರ್ವ ಸಂಶೋಧಕ ಡಾ.ಕೆ.ರವೀಂದ್ರನಾಥ ಮಾತನಾಡಿ, ಕಲಬುರ್ಗಿ ಅವರು ಸಂಶೋಧನ ಮಾರ್ಗ ರೂಪಿಸಿದ್ದಾರೆ. ಕನ್ನಡ ಗ್ರಂಥ ಸಂಶೋಧನ, ಕವಿಕಾವ್ಯ ಚರಿತ್ರೆಗಳ ಬಗ್ಗೆ ಕೃತಿಶಾಸ್ತ್ರದ ಬಗ್ಗೆ, ಕಾಲದ ದೃಷ್ಠಿಯಿಂದ ಪ್ರಾಚೀನ, ಶುದ್ಧ ಅಸ್ಮಿತೆ ಇಟ್ಟುಕೊಂಡು ದೇಶಿ ಸಂಸ್ಕೃತಿಯ ಸಿದ್ಧಾಂತ, ಪರಿಷ್ಕರಣೆ ಸಿದ್ಧಾಂತ ಬಗ್ಗೆ ಬರೆದಿದ್ದಾರೆ. ಸಂಶೋಧನೆಯ ಹೊಸ ಸಿದ್ಧಾಂತ ತೋರಿಸಿದ್ದಾರೆ. ಅವರ ಎಲ್ಲ ಪುಸ್ತಕಗಳಲ್ಲಿರುವ ಪ್ರಸ್ತಾವನೆಗಳು ಓದಿಸಿಕೊಂಡು ಹೋಗುತ್ತವೆ. ಕಲಬುರ್ಗಿಯವರು ಭುವನದ ಭಾಗ್ಯವಿದ್ದಂತೆ. ಅವರು ಬದುಕಿದ್ದರೆ ಇನ್ನೂ 100 ಯೋಜನೆಗಳು ತಲೆ ಎತ್ತುತ್ತಿದ್ದವು ಎಂದು ಹೇಳಿದರು.ಮತ್ತೋರ್ವ ಸಂಶೋಧಕ ಡಾ.ಎಫ್.ಟಿ.ಹಳ್ಳಿಕೇರಿ ಮಾತನಾಡಿ, ಕಲಬುರಗಿಯವರು ಎಲ್ಲರನ್ನು ಕೂಡಿಸಿಕೊಂಡು ಕೆಲಸ ಮಾಡುತ್ತಿದ್ದರು. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ನಿಯತಕಾಲಿಕ ಪ್ರಾರಂಭಿಸಿದ್ದರು. ತಾವು ಜವಾಬ್ದಾರಿ ವಹಿಸಿಕೊಂಡ ಸಂಘ, ಸಂಸ್ಥೆಗಳನ್ನು ಬೆಳೆಸಿದರು. ವಿಚಾರ ಸಂಕಿರಣ, ಚರ್ಚಾ ಗೋಷ್ಠಿ ಕನ್ಮಡ ಅಧ್ಯಾಪಕರ ಪರಿಷತ್ತು ಪ್ರಾರಂಭಿಸಿದರು. ಜೀವಮಾನದುದ್ದಕ್ಕೂ ಕಾಯಕ ನಿರತರಾಗಿ ಬಸವಾದಿ ಶರಣರ ಸಾಹಿತ್ಯ ಸಂಶೋಧನೆ, ಸಂಗ್ರಹ, ಪ್ರಕಟಣೆ, ವಚನ ಸಾಹಿತ್ಯ ಸಂಗ್ರಹ ಮೂಲಕ ಮುಂದಿನ ಪೀಳಿಗೆಗೂ ನೆರವಾಗುವ ಕೆಲಸ ಮಾಡಿದ್ದಾರೆ ಎಂದರು.
ಸಂಶೋಧಕಿ ಡಾ.ಹನುಮಾಕ್ಷಿ ಗೋಗಿ ಮಾತನಾಡಿ, ಕಲಬುರ್ಗಿಯವರು ಸಂಶೋಧಕರಾಗಿ, ಸಮರ್ಥ ಆಡಳಿತಗಾರರಾಗಿದ್ದರು. ಶರಣರಂತೆ ನುಡಿದಂತೆ ನಡೆದರು. ಸಂಶೋಧನೆ ಅವರ ಉಸಿರು ಮತ್ತು ಬದುಕಾಗಿತ್ತು. ಕನ್ನಡ, ಬಸವಣ್ಣನವರ ಅಧ್ಯಯನಕ್ಕೆ ಜೀವನ ಮುಡುಪಾಗಿಟ್ಟಿದ್ದರು. ನಿವೃತ್ತಿಯಾಗುವವರೆಗೂ ಸಂಶೋಧನೆ, ವಿಶ್ಲೇಷಣೆ, ಪ್ರಕಟಣೆಯಲ್ಲಿ ಸಮರ್ಥವಾಗಿ ಮಾದರಿಯ ಆಡಳಿತ ನಡೆಸಿದರು ಎಂದು ಹೇಳಿದರು.ಡಾ.ಎಂ.ಎಸ್.ಮದಭಾವಿ ಸ್ವಾಗತಿಸಿ, ಡಾ.ಸುಭಾಸ ಕನ್ನೂರ ಮತ್ತು ಉಷಾದೇವಿ ನಿರೂಪಿಸಿದರು.
ಸಂಶೋಧನೆ ಹೇಗಿರಬೇಕು ಎಂಬುದರ ಕುರಿತು ಕಲಬುರ್ಗಿ ಅವರು ರಚಿಸಿರುವ ಗ್ರಂಥ ಎಲ್ಲರಿಗೂ ಸದಾ ಮಾದರಿಯಾಗಿದೆ. ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರ ಕಲಬುರ್ಗಿಯವರ 40 ಸಂಪುಟಗಳನ್ನು ಲೋಕಾರ್ಪಣೆ ಮಾಡುತ್ತಿರುವುದನ್ನು ಕಂಡು ಅತೀವ ಸಂತೋಷವಾಗಿದೆ. ಕಲಬುರ್ಗಿ ಅವರ ವಚನ ಸಾಹಿತ್ಯ ಸಂಗ್ರಹವನ್ನು ಹೆಚ್ಚೆಚ್ಚು ಪ್ರಚಾರ ಮಾಡುವ ಎಲ್ಲರಿಂದ ಆಗಬೇಕು.-ಡಾ.ಶರತಚಂದ್ರ ಸ್ವಾಮೀಜಿ, ಮೈಸೂರಿನ ಕುಂದೂರು ಮಠ
;Resize=(128,128))
;Resize=(128,128))
;Resize=(128,128))
;Resize=(128,128))