ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ ಜಿಲ್ಲೆಯ ಅಭಿವೃದ್ಧಿಗಾಗಿ ಚಿಂತನೆ ನಡೆಸದ ಸ್ಥಳೀಯ ಕಾಂಗ್ರೆಸ್ ಶಾಸಕರು, ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಆಡಳಿತಾತ್ಮಕ ಒಪ್ಪಿಗೆ ಪಡೆದು ಟೆಂಡರ್ ಆದ ಕಾಮಗಾರಿಗಳನ್ನು ಬದಲಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಮಾಜಿ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಹಾಗೂ ಕೆ.ಜಿ.ಬೋಪಯ್ಯ ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಅಪ್ಪಚ್ಚು ರಂಜನ್, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಜಿಲ್ಲೆಯಲ್ಲಿ ನಯಾ ಪೈಸೆಯ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಆರಂಭಿಸಿದ ಹಲವು ಕಾಮಗಾರಿಗಳಿಗೆ ಪ್ರಸ್ತುತ ಕನಿಷ್ಠ ಹಣ ಬಿಡುಗಡೆಯನ್ನು ಮಾಡಿಲ್ಲವೆಂದು ಟೀಕಿಸಿದರು.ಮುಖ್ಯಮಂತ್ರಿಗಳ ಪರಿಹಾರ ನಿಧಿ-ಪ್ರಾಕೃತಿಕ ವಿಕೋಪ ನಿಧಿಯಡಿ ಹಿಂದಿನ ಸರ್ಕಾರದ ಅವಧಿಯಲ್ಲಿ ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರಗಳಿಗೆ ತಲಾ 7 ಕೋಟಿ ರು. ಅನುದಾನವನ್ನು ಒದಗಿಸಲಾಗಿತ್ತು. ಮಡಿಕೇರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ 69 ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸಿ ಮಂಜೂರಾತಿಯೂ ದೊರಕಿತ್ತು. ಪ್ರಸ್ತುತ ಈ ಎಲ್ಲ ಕಾಮಗಾರಿಗಳನ್ನು ಬದಲಿಸಲು ಮಡಿಕೇರಿ ಕ್ಷೇತ್ರದ ಶಾಸಕರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗೆ ಪ್ರಸ್ತಾವನೆಯೊಂದನ್ನು ಸಲ್ಲಿಸಿದ್ದಾರೆ ಎಂದರು.
ಮುಖ್ಯಮಂತ್ರಿಗಳ ಮತ್ತು ಪ್ರಾಕೃತಿಕ ವಿಕೋಪ ನಿಧಿಯಡಿ ಈ ಹಿಂದೆ ನಿಗದಿಯಾದ ಕಾಮಗಾರಿಗಳ ಬದಲಾವಣೆಗೆ ಅವಕಾಶವಿಲ್ಲ. ಹೀಗಿದ್ದೂ ಇವುಗಳ ಬದಲಾವಣೆಗೆ ಇಂದಿನ ಶಾಸಕರು ಮುಂದಾಗಿದ್ದು, ಇದರ ವಿರುದ್ಧ ನ್ಯಾಯಾಂಗದ ಮೊರೆ ಹೋಗಲು ಚಿಂತಿಸುತ್ತಿರುವುದಾಗಿ ರಂಜನ್ ಹೇಳಿದರು.ತಮ್ಮ ಅಧಿಕಾರದ ಅವಧಿಯಲ್ಲಿ 2018ರಲ್ಲಿ ಹಾರಂಗಿ ಅಣೆಕಟ್ಟು ಅಭಿವೃದ್ಧಿಗೆ 138 ಕೋಟಿ ರು. ಅನುದಾನ ಮಂಜೂರಾಗಿತ್ತು. ಇದರಲ್ಲಿ 131 ಕೋಟಿ ವೆಚ್ಚದ ಹಾರಂಗಿ ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್ ಕೂಡ ನಡೆದಿದೆಯಾದರು, ಇಲ್ಲಿಯವರೆಗೂ ఆ ಕೆಲಸಗಳು ನಡೆದಿಲ್ಲವೆಂದು ಆರೋಪಿಸಿದ ರಂಜನ್, ಹಾರಂಗಿ ನಾಲೆಗಳ ಆಧುನೀಕರಣಕ್ಕೆ 49 ಕೋಟಿ ಅನುದಾನವನ್ನು ಒದಗಿಸಲಾಗಿತ್ತು. ಇದರ ಕಾಮಗಾರಿಗಳಿಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಡೆ ಮಾಡಲಾಗಿದೆ ಎಂದು ಆರೋಪಿಸಿದರು.ಕುಶಾಲನಗರದಲ್ಲಿ ಮುಂಗಾರಿನ ಅವಧಿಯಲ್ಲಿ ಪ್ರವಾಹಕ್ಕೆ ಸಿಲುಕಿಕೊಳ್ಳುವ ಬಡಾವಣೆಗಳಲ್ಲಿ ತಡೆಗೋಡೆ ನಿರ್ಮಾಣಕ್ಕೆ 10 ಕೋಟಿ ರು.ಗಳನ್ನು ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಒದಗಿಸಲಾಗಿತ್ತಾದರೂ, ಈ ಯಾವುದೇ ಕಾಮಗಾರಿಗಳ ಬಗ್ಗೆ ಸ್ಥಳೀಯ ಶಾಸಕರು ಆಸಕ್ತರಾಗಿಲ್ಲ. ಒಟ್ಟಾಗಿ ಈ ಹಿಂದಿನ ಅವಧಿಯ 230 ಕೋಟಿ ವೆಚ್ಚದ ಕಾಮಗಾರಿಗಳು ನಡೆಯಲು ಬಾಕಿ ಇವೆ ಎಂದರು.* ಪ್ರತಿಭಟನೆಯ ಎಚ್ಚರಿಕೆ
ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಅನಗತ್ಯ ತಡೆಗಳನ್ನು ಉಂಟುಮಾಡುತ್ತಾ ಮುಂದುವರಿದಲ್ಲಿ ಮುಂಬರುವ ದಿನಗಳಲ್ಲಿ, ಅಭಿವೃದ್ಧಿ ಕಾರ್ಯ ಸ್ಥಗಿತಗೊಂಡ ಪಂಚಾಯಿತಿಗಳ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರಂಜನ್ ಎಚ್ಚರಿಕೆ ನೀಡಿದರು.ವಿರಾಜಪೇಟೆಯ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ನಮ್ಮ ಸರ್ಕಾರ ಕೊಡವ ಅಭಿವೃದ್ಧಿಗೆ 10 ಕೋಟಿ ರು. ಬಿಡುಗಡೆ ಮಾಡಿತ್ತು. ಆದರೆ ಇಂದಿನ ಸರ್ಕಾರ ಅದನ್ನು ಬಿಡುಗಡೆ ಮಾಡಿಲ್ಲ. ಮುಂಗಾರಿನ ಅವಧಿಯಲ್ಲಿ ಭಾಗಮಂಡಲದಲ್ಲಿ ಕಾಣಿಸಿಕೊಳ್ಳುವ ಪ್ರವಾಹವನ್ನು ತಪ್ಪಿಸುವ ಚಿಂತನೆಯಡಿ ಕೋಟಿ ವೆಚ್ಚದಲ್ಲಿ ಭಾಗಮಂಡಲದಲ್ಲಿ ಆರಂಭಿಸಿದ ಕಾವೇರಿಯ ಹೂಳೆತ್ತುವ ಕಾಮಗಾರಿಯನ್ನು ಇದೀಗ ತಡೆ ಹಿಡಿಯಲಾಗಿದೆ. ಬೆಂಗಳೂರು ಬಿಬಿಎಂಪಿಯಿಂದ ಪ್ರಾಕೃತಿಕ ವಿಕೋಪ ಸಂದರ್ಭ ನೀಡಿದ್ದ 1 ಕೋಟಿ ರು. ವೆಚ್ಚದಲ್ಲಿ ತಲಕಾವೇರಿಯಲ್ಲಿ ಜಾತ್ರಾ ಅರ್ಚಕರು, ತಕ್ಕ ಮುಖ್ಯಸ್ಥರು, ಪೊಲೀಸರಿಗೆ ಅನುಕೂಲವಾಗುವಂತೆ ವಸತಿ ಗೃಹ ನಿರ್ಮಾಣ ಮಾಡಲು ಟೆಂಡರ್ ಪ್ರಕ್ರಿಯೆ ನಡೆಯಬೇಕಿತ್ತು. ಅದನ್ನು ಸ್ಥಗಿತಗೊಳಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಸಲು ಬಿಡುತ್ತಿಲ್ಲವೆಂದು ಗಂಭೀರ ಆರೋಪ ಮಾಡಿದರು.* ಶ್ವೇತಪತ್ರ ಹೊರಡಿಸಲಿಈ ಹಿಂದಿನ ದಶಕದ ಅವಧಿಯಲ್ಲಿ ಬಿಜೆಪಿ ಯಾವುದೇ ಅಭಿವೃದ್ಧಿ ನಡೆಸಿಲ್ಲವೆಂದು ಆರೋಪ ಮಾಡಿಕೊಂಡು ಬರುತ್ತಿದೆ. ಆದರೆ, 2004ರಿಂದ 2006ರ ವರೆಗೆ ಕಾಂಗ್ರೆಸ್‌ನ ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದು, 2013-18ರ ವರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದನ್ನು ಉಲ್ಲೇಖಿಸಿದ ಕೆ.ಜಿ.ಬೋಪಯ್ಯ, ಕಾಂಗ್ರೆಸ್ ಅವಧಿಯಲ್ಲಿ ಕೊಡಗು ಜಿಲ್ಲೆಗೆ ಎಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ ಎನ್ನುವ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ನಗರೋತ್ಥಾನದಡಿ ಕೈಗೊಂಡಿದ್ದ ಕಾಮಗಾರಿಗಳು, ಚುನಾವಣಾ ನೀತಿ ಸಂಹಿತೆ ಮತ್ತು ಮಳೆಯ ಹಿನ್ನೆಲೆ ಸ್ಥಗಿತವಾಗಿತ್ತು. ಈ ಕಾಮಗಾರಿಗಳು ನಡೆಯಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಹಾಗೂ ಉಪಾಧ್ಯಕ್ಷ ಅರುಣ್ ಕುಮಾರ್ ಇದ್ದರು.