ಖಾಸಗಿ ಕಂಪನಿಗಳಲ್ಲೂ ಕನ್ನಡಿಗರಿಗೆ ಮೀಸಲು

| Published : Jul 16 2024, 12:33 AM IST / Updated: Jul 16 2024, 10:10 AM IST

Janata Curfew Vidhansoudha

ಸಾರಾಂಶ

ರಾಜ್ಯದಲ್ಲಿನ ಎಲ್ಲಾ ಕೈಗಾರಿಕೆಗಳಲ್ಲೂ ಸಿ ಮತ್ತು ಡಿ ವರ್ಗದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ.100ರಷ್ಟು ಮೀಸಲಾತಿ ಕಲ್ಪಿಸುವುದು ಸೇರಿದಂತೆ ಏಳು ವಿಧೇಯಕಗಳನ್ನು ಮಂಡಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

 ಬೆಂಗಳೂರು :  ರಾಜ್ಯದಲ್ಲಿನ ಎಲ್ಲಾ ಕೈಗಾರಿಕೆಗಳಲ್ಲೂ ಸಿ ಮತ್ತು ಡಿ ವರ್ಗದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ.100ರಷ್ಟು ಮೀಸಲಾತಿ ಕಲ್ಪಿಸುವುದು ಸೇರಿದಂತೆ ಏಳು ವಿಧೇಯಕಗಳನ್ನು ಮಂಡಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

ರಾಜ್ಯದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಕೈಗಾರಿಕೆಗಳ ಉದ್ಯೋಗಗಳು ಉತ್ತರ ಭಾರತದ ರಾಜ್ಯಗಳವರ ಪಾಲಾಗುತ್ತಿವೆ. ರಾಜ್ಯದಲ್ಲಿನ ಭೂಮಿ, ನೀರು ಸೇರಿ ಮೂಲಸೌಕರ್ಯ ಪಡೆಯುವ ಕೈಗಾರಿಕೆಗಳು ಸ್ಥಳೀಯರಿಗೆ ಮೀಸಲಾತಿ ನೀಡಬೇಕು ಎಂದು ಕಾರ್ಮಿಕ ಇಲಾಖೆಯು ವಿಧೇಯಕ ರೂಪಿಸಿದ್ದು, ಇದಕ್ಕೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

 ಈ ಹಿಂದೆ ಡಾ.ಸರೋಜಿನಿ ಮಹಿಷಿ ಸಮಿತಿ ವರದಿ ಅನ್ವಯ 50ಕ್ಕಿಂತ ಹೆಚ್ಚು ಕಾರ್ಮಿಕರುಳ್ಳ ಬೃಹತ್‌, ಮಧ್ಯಮ, ಸಣ್ಣ ಕೈಗಾರಿಕಾ ಘಟಕಗಳಲ್ಲಿ ಎ ಮತ್ತು ಬಿ ವರ್ಗದಲ್ಲಿ ಕ್ರಮವಾಗಿ ಶೇ.65 ಮತ್ತು ಶೇ.80, ಸಿ, ಡಿ ವರ್ಗಗಳಲ್ಲಿ ಶೇ.100ರಷ್ಟು ಉದ್ಯೋಗ ಕನ್ನಡಿಗರಿಗೆ ಅಥವಾ ಸ್ಥಳೀಯರಿಗೆ ನಿಗದಿಪಡಿಸಲು ಷರತ್ತನ್ನು ವಿಧಿಸಲಾಗುತ್ತಿತ್ತು.

ಆದರೆ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಖಾತರಿಪಡಿಸುವ ಸಂಬಂಧ ಯಾವುದೇ ನೀತಿ ನಿಯಮಗಳನ್ನು ರೂಪಿಸಿರಲಿಲ್ಲ.

ಇನ್ನು 2022ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಡಿಸಿದ್ದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆಯಲ್ಲೂ ರಾಜ್ಯ ಸರ್ಕಾರದಿಂದ ತೆರಿಗೆ ವಿನಾಯಿತಿ ಹಾಗೂ ಇತರೆ ಸೌಲಭ್ಯ ಪಡೆದ ಕೈಗಾರಿಕೆಗಳಲ್ಲಿ ಮೀಸಲು ನೀಡಬೇಕು ಎಂದು ಹೇಳಲಾಗಿತ್ತು. ಆದರೆ ಇದಕ್ಕೂ ನೀತಿ ನಿಯಮಗಳನ್ನು ಜಾರಿ ಮಾಡಿರಲಿಲ್ಲ.

ಹೀಗಾಗಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕನ್ನಡಿಗರಿಗೆ ಸಿ ಮತ್ತು ಡಿ ದರ್ಜೆಯ ಉದ್ಯೋಗಗಳಲ್ಲಿ ಶೇ.100ರಷ್ಟು ಉದ್ಯೋಗ ಮೀಸಲಾತಿ ಕಲ್ಪಿಸುವ ವಿಧೇಯಕಕ್ಕೆ ಒಪ್ಪಿಗೆ ನೀಡಲಾಗಿದೆ. ಇದೇ ಅಧಿವೇಶನದಲ್ಲಿ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆಯುವುದಾಗಿ ಕಾರ್ಮಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಜತೆಗೆ ‘ಕರ್ನಾಟಕ ಸರಕು ಮತ್ತು ಸೇವೆಗಳು (ತಿದ್ದುಪಡಿ) ವಿಧೇಯಕ, ‘ಕರ್ನಾಟಕ ನೀರಾವರಿ (ತಿದ್ದುಪಡಿ) ವಿಧೇಯಕ, 2024 ಸೇರಿದಂತೆ ಏಳು ವಿಧೇಯಕಗಳಿಗೆ ಒಪ್ಪಿಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.