ಮಹಿಳಾ ಸಮಾನತೆಗೆ ಮೀಸಲಾತಿ ಅವಶ್ಯ: ಬಸವರಾಜ ಗುರಿಕಾರ

| Published : Mar 12 2025, 12:51 AM IST

ಸಾರಾಂಶ

12ನೇ ಶತಮಾನದಲ್ಲಿ ಸಾಮಾಜಿಕ ನ್ಯಾಯ ಮತ್ತು ಮಹಿಳಾ ಸಮಾನತೆಯ ಬಗೆಗೆ ಸಂದೇಶವನ್ನು ನಾಡಿಗೆ ಕೊಟ್ಟವರು ಬಸವಣ್ಣನವರು ಎಂದು ರಾಷ್ಟ್ರೀಯ ಶಿಕ್ಷಕರ ಫೆಡರೇಶನ್ ಅಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.

ಧಾರವಾಡ: 12ನೇ ಶತಮಾನದಲ್ಲಿ ಸಾಮಾಜಿಕ ನ್ಯಾಯ ಮತ್ತು ಮಹಿಳಾ ಸಮಾನತೆಯ ಬಗೆಗೆ ಸಂದೇಶವನ್ನು ನಾಡಿಗೆ ಕೊಟ್ಟವರು ಬಸವಣ್ಣನವರು ಎಂದು ರಾಷ್ಟ್ರೀಯ ಶಿಕ್ಷಕರ ಫೆಡರೇಶನ್ ಅಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.

ಇಲ್ಲಿಯ ತಾಲೂಕು ಶಿಕ್ಷಕರ ಭವನದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಅಭಿನಂದನೆ ಹಾಗೂ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.ಬಸವಣ್ಣನವರು ಇಡೀ ಜಗತ್ತಿಗೆ ಸಮಾನತೆಯ ಮಹತ್ವ ಸಾರಿದವರು. ಮಹಿಳೆಯರಿಗೆ ಎಲ್ಲ ರಂಗದಲ್ಲಿ ಮೀಸಲಾತಿ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಂಘಗಳು ಕ್ರಮ ವಹಿಸುವ ಅಗತ್ಯತೆ ಇದೆ. ಮಹಿಳೆಯರು ಇಂದು ಪುರುಷರಿಗಿಂತ ಕಡಿಮೆ ಇಲ್ಲ ಎನ್ನುವುದನ್ನು ಪ್ರತಿಯೊಂದು ರಂಗದಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಮಹಿಳೆಯರೂ ಪುರುಷರ ಸಮಾನರಾಗಿ ಕರ್ತವ್ಯ ನಿರ್ವಹಿಸಲು ಅವರಿಗೆ ಮೀಸಲಾತಿ ಅಗತ್ಯವಿದೆ ಎಂದರು.ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಮಾತನಾಡಿ, ಹಿಂದಿನ 20 ವರ್ಷಗಳ ಕೆಳಗೆ ಶಿಕ್ಷಕರ ಸಂಖ್ಯೆ ಕಡಿಮೆ ಇದ್ದರೂ ಶಿಕ್ಷಕರು ನೆಮ್ಮದಿಯಿಂದ ಪಾಠ ಮಾಡುತ್ತಿದ್ದರು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚಿದೆ. ಪ್ರತಿಯೊಬ್ಬ ಶಿಕ್ಷಕರು ನಮ್ಮ ಜಿಲ್ಲೆಗೆ ಮರಳಿ ವಿದ್ಯಾಕಾಶಿ ಎಂಬ ಹೆಸರು ಪಡೆಯುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಬಹುತೇಕ ಶಿಕ್ಷಕ-ಶಿಕ್ಷಕಿಯರು ಉತ್ತಮ ಕಆರ್ಯ ಮಾಡುತ್ತಿದ್ದು, ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಧಾರವಾಡ ತಾಲೂಕು ಅಧ್ಯಕ್ಷ ಅಜೀತಕುಮಾರ ದೇಸಾಯಿ ಮಾತನಾಡಿ, ದಿನಗಳು ಕಳೆದಂತೆ ಶಿಕ್ಷಕರ ಸಂಖ್ಯೆ ಹೆಚ್ಚಾಗಿದ್ದು, ಶಿಕ್ಷಕರ ಭವನ ಚಿಕ್ಕದಾಗಿದೆ. ಯಾವುದೇ ದೊಡ್ಡ ಮಟ್ಟದ ಸಭೆ, ಸಮಾರಂಭ ಮಾಡಲು ಆಗುತ್ತಿಲ್ಲ. ಅದಕ್ಕಾಗಿ ಇದನ್ನು ನವೀಕರಣ ಮಾಡಲು ಎಲ್ಲರೂ ಕೈಜೋಡಿಸಬೇಕು. ಜೊತೆಗೆ ಜಿಲ್ಲೆಯ ಶಿಕ್ಷಕರ ಸಮಸ್ಯೆಗಳನ್ನು ನಿವಾರಿಸಲು ನಿರಂತರ ಸಭೆ ನಡೆಸಬೇಕು ಎಂದು ಮನವಿ ಮಾಡಿದರು.

ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿ.ಎಫ್. ಚುಳಕಿ ಅಧ್ಯಕ್ಷತೆ ವಹಿಸಿದ್ದರು. ಡಾ. ವೀಣಾ ಎಲಿಗಾರ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ ಗುರಿಕಾರ ಅವರನ್ನು ಅಭಿನಂದಿಸಲಾಯಿತು. ಜೊತೆಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿಯರಿಗೆ, ತಾಲೂಕು ಮಟ್ಟದ ಶಾಲೆಗಳಿಗೆ ಪ್ರಶಸ್ತಿ ಪ್ರದಾನ, ಎಸ್‌ಎಸ್‌ಎಲ್‌ಸಿ, ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ತಾಲೂಕಿನ ಉತ್ತಮ ಶಿಕ್ಷಕ-ಶಿಕ್ಷಕಿ ದಂಪತಿಯನ್ನು ಸನ್ಮಾನಿಸಲಾಯಿತು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ಧನಗೌಡರ, ಈಶ್ವರ ಆಯಟ್ಟಿ, ಲೂಸಿ ಸಾಲ್ಡಾನಾ, ಶಂಕರ ಘಟ್ಟಿ, ಎಲ್.ಐ. ಲಕ್ಕಮ್ಮನವರ, ಶಾಂತಾ ಶೀಲವಂತರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹೊನ್ನಪ್ಪನವರ, ನೌಕರ ಸಂಘದ ಜಿಲ್ಲಾ ಕಾರ್ಯದರ್ಶಿ ರಮೇಶ ಲಿಂಗದಾಳ, ಎನ್.ಎಸ್. ಕಮ್ಮಾರ, ಸಿ.ಎಂ. ಕೆಂಗಾರ, ಎಫ್.ಬಿ. ಕಣವಿ ಸೇರಿದಂತೆ ಇತರರು ಇದ್ದರು.