ಕನ್ನಡಪ್ರಭ ವಾರ್ತೆ ಬಾಗಲಕೋಟೆ ಕರ್ನಾಟಕ ರಾಜ್ಯದ ಶೈಕ್ಷಣಿಕ ಸಂಸ್ಥೆಗಳ ಪ್ರವೇಶಾತಿ ಹಾಗೂ ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಿರುವ ಕ್ರಮಕ್ಕೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯ ನೀಡಿರುವ ತೀರ್ಪು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಗಂಭೀರ ಚಿಂತನೆಗೆ ಕಾರಣವಾಗಿದೆ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕರ್ನಾಟಕ ರಾಜ್ಯದ ಶೈಕ್ಷಣಿಕ ಸಂಸ್ಥೆಗಳ ಪ್ರವೇಶಾತಿ ಹಾಗೂ ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಿರುವ ಕ್ರಮಕ್ಕೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯ ನೀಡಿರುವ ತೀರ್ಪು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಗಂಭೀರ ಚಿಂತನೆಗೆ ಕಾರಣವಾಗಿದೆ. ಈ ಬೆಳವಣಿಗೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಲಕ್ಷಾಂತರ ಜನರ ಶೈಕ್ಷಣಿಕ ಭವಿಷ್ಯ, ಉದ್ಯೋಗಾವಕಾಶಗಳು ಹಾಗೂ ಸಾಮಾಜಿಕ ಪ್ರಗತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ವಿಷಯವನ್ನು ಅತ್ಯಂತ ಜವಾಬ್ದಾರಿಯಿಂದ ಪರಿಗಣಿಸಬೇಕಾಗಿದೆ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಗಳು ಆಗ್ರಹಿಸಿದ್ದಾರೆ.ವಾಲ್ಮೀಕಿ ಶ್ರೀಗಳು 250 ದಿನಗಳಗಿಂತ ಹೆಚ್ಚು ನಡೆಸಿದ ಧರಣಿಯ ಪ್ರಭಾವದಿಂದ ಹೆಚ್ಚಿದ ಪರಿಶಿಷ್ಟರ ಮೀಸಲಾತಿ ಪ್ರಮಾಣಕ್ಕೆ ರಾಜ್ಯ-ಕೇಂದ್ರ ಸರ್ಕಾರಗಳು ನ್ಯಾಯ ಒದಗಿಸಬೇಕು ಎಂದಿರುವ ಶ್ರೀಗಳು, ಮೀಸಲಾತಿ ಎಂಬುದು ಯಾವುದೇ ಸರ್ಕಾರದ ರಾಜಕೀಯ ಕೊಡುಗೆಯಲ್ಲ. ಅದು ಶತಮಾನಗಳಿಂದ ಸಾಮಾಜಿಕ ಅಸಮಾನತೆ, ತಾರತಮ್ಯ ಮತ್ತು ಅವಕಾಶ ವಂಚನೆಯನ್ನು ಎದುರಿಸುತ್ತಿರುವ ಸಮುದಾಯಗಳಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವ ಸಾಂವಿಧಾನಿಕ ಸಾಧನ. ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಸೂಕ್ತ ಪ್ರಾತಿನಿಧ್ಯ ದೊರೆಯುವ ಮೂಲಕ ಈ ಸಮುದಾಯಗಳು ಸ್ವಾಭಿಮಾನದಿಂದ ಬದುಕಲು ಹಾಗೂ ಸಮಾಜದ ಮುಖ್ಯವಾಹಿನಿಯಲ್ಲಿ ಸಮಾನವಾಗಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುವುದು ಮೀಸಲಾತಿಯ ಮೂಲ ಆಶಯವಾಗಿದೆ ಎಂದಿದ್ದಾರೆ.
ಮೀಸಲಾತಿ ಹೆಚ್ಚಳದಂತಹ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವಾಗ ಅವುಗಳಿಗೆ ಅಗತ್ಯವಾದ ಕಾನೂನುಬದ್ಧ ಹಾಗೂ ಸಾಂವಿಧಾನಿಕ ರಕ್ಷಣೆ ಒದಗಿಸುವುದು ಸರ್ಕಾರಗಳ ಆದ್ಯ ಕರ್ತವ್ಯವಾಗಿದೆ. ಕೇವಲ ಕಾಯ್ದೆ ಜಾರಿಗೊಳಿಸುವುದರಿಂದ ಉದ್ದೇಶ ಈಡೇರದು. ನ್ಯಾಯಾಲಯದ ಪರಿಶೀಲನೆಯನ್ನು ಎದುರಿಸಬಲ್ಲ ಸಮರ್ಪಕ ಕಾನೂನು ಆಧಾರ, ಅಗತ್ಯ ದತ್ತಾಂಶ ಮತ್ತು ಸಾಂವಿಧಾನಿಕ ಕ್ರಮಗಳ ಮೂಲಕ ಮೀಸಲಾತಿ ನೀತಿಯನ್ನು ಸುಸ್ಥಿರಗೊಳಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಹಿಂದಿನ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳಲ್ಲಿನ ಕಾನೂನು ಸಂಬಂಧಿತ ಕೊರತೆಗಳನ್ನು ಸರಿಪಡಿಸುವುದರ ಜೊತೆಗೆ, ಪ್ರಸ್ತುತ ರಾಜ್ಯ ಸರ್ಕಾರವೂ ತನ್ನ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.ರಾಜ್ಯ ಸರ್ಕಾರವು ಉಚ್ಚ ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತಲೇ, ಮೇಲ್ಮನವಿ ಸೇರಿದಂತೆ ಲಭ್ಯವಿರುವ ಕಾನೂನು ಮಾರ್ಗಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಮೀಸಲಾತಿ ಹೆಚ್ಚಳದ ಆಶಯಕ್ಕೆ ಧಕ್ಕೆಯಾಗದಂತೆ, ಕಾನೂನಿನ ಚೌಕಟ್ಟಿನಲ್ಲಿ ಪರಿಶಿಷ್ಟ ಸಮುದಾಯಗಳ ಹಿತಾಸಕ್ತಿಗಳನ್ನು ರಕ್ಷಿಸಲು ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕು. ಈಗಾಗಲೇ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಗಳು ಹಾಗೂ ಶೈಕ್ಷಣಿಕ ಪ್ರವೇಶಾತಿಗಳಲ್ಲಿ ಉಂಟಾಗಬಹುದಾದ ಅನಿಶ್ಚಿತತೆಯನ್ನು ಕಡಿಮೆಗೊಳಿಸಲು ಕಾನೂನುಬದ್ಧ ಪರಿಹಾರಗಳನ್ನೂ ಕಂಡುಕೊಳ್ಳಬೇಕು.
ಆದ್ದರಿಂದ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ಅಗತ್ಯವಾದ ಸಾಂವಿಧಾನಿಕ ಮತ್ತು ಕಾನೂನುಬದ್ಧ ರಕ್ಷಣೆ ಒದಗಿಸಬೇಕು. ಪರಿಶಿಷ್ಟ ಸಮುದಾಯಗಳ ಹಕ್ಕುಗಳು, ಆಶಯಗಳು ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ತ್ವರಿತ ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಗಳು ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಿದ್ದಾರೆ.----------------------------ಕೋಟ್...
ಮೀಸಲಾತಿ ಹೆಚ್ಚಳದಂತಹ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವಾಗ ಅವುಗಳಿಗೆ ಅಗತ್ಯವಾದ ಕಾನೂನುಬದ್ಧ ಹಾಗೂ ಸಾಂವಿಧಾನಿಕ ರಕ್ಷಣೆ ಒದಗಿಸುವುದು ಸರ್ಕಾರಗಳ ಆದ್ಯ ಕರ್ತವ್ಯವಾಗಿದೆ. ಕೇವಲ ಕಾಯ್ದೆ ಜಾರಿಗೊಳಿಸುವುದರಿಂದ ಉದ್ದೇಶ ಈಡೇರದು. ನ್ಯಾಯಾಲಯದ ಪರಿಶೀಲನೆಯನ್ನು ಎದುರಿಸಬಲ್ಲ ಸಮರ್ಪಕ ಕಾನೂನು ಆಧಾರ, ಅಗತ್ಯ ದತ್ತಾಂಶ ಮತ್ತು ಸಾಂವಿಧಾನಿಕ ಕ್ರಮಗಳ ಮೂಲಕ ಮೀಸಲಾತಿ ನೀತಿಯನ್ನು ಸುಸ್ಥಿರಗೊಳಿಸಬೇಕಾಗುತ್ತದೆ.- ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ