ಮೀಸಲಾತಿ: ಪ್ರಧಾನಿ ಕುರ್ಚಿಗೆ ಮೋದಿ ಅಪಮಾನ

| Published : Apr 26 2024, 12:45 AM IST

ಸಾರಾಂಶ

ದಲಿತರ, ಹಿಂದುಳಿದವರ ಮೀಸಲಾತಿ ಕಸಿದುಕೊಂಡು ಮುಸ್ಲಿಮರಿಗೆ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಹಾಗೆ ಮಾಡಲ್ಲ. ಮಾಡಲು ಬರಲ್ಲ. ಸ್ವಲ್ಪ ಅರಿತುಕೊಂಡು ಹೇಳಿಕೆ ನೀಡಬೇಕು.

ಹುಬ್ಬಳ್ಳಿ:

ದಲಿತರ, ಹಿಂದುಳಿದವರ ಮೀಸಲಾತಿ ಕಸಿದುಕೊಂಡು ಮುಸ್ಲಿಮರಿಗೆ ಕೊಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳುವ ಮೂಲಕ ಜನರ ಹಾದಿ ತಪ್ಪಿಸುತ್ತಿದ್ದಾರೆ. ಅಲ್ಲದೇ, ಪ್ರಧಾನಮಂತ್ರಿ ಕುರ್ಚಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ಇಲ್ಲಿನ ಅಂಬೇಡ್ಕರ್‌ ಮೈದಾನದಲ್ಲಿ ಧಾರವಾಡ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ ಪರವಾಗಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ದಲಿತರ, ಹಿಂದುಳಿದವರ ಮೀಸಲಾತಿ ಕಸಿದುಕೊಂಡು ಮುಸ್ಲಿಮರಿಗೆ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಹಾಗೆ ಮಾಡಲ್ಲ. ಮಾಡಲು ಬರಲ್ಲ. ಸ್ವಲ್ಪ ಅರಿತುಕೊಂಡು ಹೇಳಿಕೆ ನೀಡಬೇಕು ಎಂದು ತಿಳಿಸಿದ ಅವರು, ಚಿನ್ನಪ್ಪರೆಡ್ಡಿ ಆಯೋಗದ ವರದಿಯಂತೆ ರಾಜ್ಯದಲ್ಲಿ ಮುಸ್ಲಿಂರಿಗೆ ಶೇ.4ರಷ್ಟು ಮೀಸಲಾತಿ ನೀತಿ ಜಾರಿಯಲ್ಲಿದೆ. ಆದರೆ ಈ ವಿಚಾರದಲ್ಲೂ ಮೋದಿ ಮತ್ತು ಬಿಜೆಪಿ ಸುಳ್ಳು ಹೇಳುತ್ತಿದೆ. ಸ್ವತಃ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವೇ ಸುಪ್ರೀಂಕೋರ್ಟ್ ಎದುರು ಮುಸ್ಲಿಮರ ಮೀಸಲಾತಿಯನ್ನು ರಾಜ್ಯದಲ್ಲಿ ಯಥಾವತ್ತಾಗಿ ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ. ಇದು ನಿಮಗೆ ಗೊತ್ತಿಲ್ಲವೇ ಮೋದಿಯವರೇ? ಎಂದು ಪ್ರಶ್ನಿಸಿದರು.

ಆರ್‌ಎಸ್‌ಎಸ್‌ ಭಾಷಣ:

ಮೋದಿ ಅವರು ತಮ್ಮ ಕುರ್ಚಿಯ ಘನತೆಗೆ ತಕ್ಕಂತೆ ಮಾತನಾಡಬೇಕು. ಆದರೆ ಅವರು ಆರ್‌ಎಸ್‌ಎಸ್‌ ನಾಯಕನಂತೆ ಮಾತನಾಡುತ್ತಿದ್ದಾರೆ. ಮೋದಿ ಮಾತನಾಡುತ್ತಿರುವುದೆಲ್ಲವೂ ಆರ್‌ಎಸ್‌ಎಸ್‌ ಭಾಷಣ ಎಂದು ಲೇವಡಿ ಮಾಡಿದರು.

ಮೂರು ನಾಮ ಹಾಕಿದರು:

2014ರಿಂದ 10 ವರ್ಷಗಳ ಕಾಲ ಬರೀ ಜನರಲ್ಲಿ ಭ್ರಮೆ ಹುಟ್ಟಿಸಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದರು. 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದು ಹೇಳಿದರು. ಇದನ್ನು ಕೇಳಿ ಯುವಕರು ಮೋದಿ ಮೋದಿ ಎಂದು ಕುಣಿಯಲಾರಂಭಿಸಿದರು. ಆದರೆ ಅವರಿಗೆ ಇವರು ಮೂರುನಾಮ ಹಾಕಿದರು ಎಂದು ಟೀಕಿಸಿದರು.

ಮೋದಿ ಸುಳ್ಳುಗಳಿಗೆ ಹತ್ತು ವರ್ಷ ತಲೆಕೊಟ್ಟು ಮೋಸ ಹೋಗಿದ್ದಿರಿ. ಈ ಬಾರಿಯೂ ಮೋಸ ಹೋಗಬೇಡಿ. ಈ ಸಲ ಪ್ರಹ್ಲಾದ್ ಜೋಶಿ ಸೋಲಿಸಿ, ವಿನೋದ್ ಅಸೂಟಿ ಗೆಲ್ಲಿಸಿಕೊಂಡು ಬನ್ನಿ ಎಂದು ಕರೆ ನೀಡಿದರು.

5 ವರ್ಷ ಗ್ಯಾರಂಟಿ ಖಚಿತ:

ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜಾರಿಯೇ ಆಗಲ್ಲ ಅಂತ ಮೋದಿ ಸುಳ್ಳು ಹೇಳಿದ್ದರು. ನಾವು ಐದಕ್ಕೂ ಐದು ಗ್ಯಾರಂಟಿ ಜಾರಿ ಮಾಡಿದ್ದೇವೆ. ಈಗ ಪಾರ್ಲಿಮೆಂಟ್ ಚುನಾವಣೆ ಬಳಿಕ ಗ್ಯಾರಂಟಿಗಳು ಬಂದ್ ಆಗುತ್ತವೆ ಎಂದು ಹೇಳುತ್ತಿದ್ದಾರೆ. ಆದರೆ ಐದು ವರ್ಷಗಳ ಕಾಲ ಗ್ಯಾರಂಟಿಗಳು ಜಾರಿಯಲ್ಲಿರುತ್ತವೆ. ಈ ಬಗ್ಗೆ ಯಾವುದೇ ಸಂದೇಹ ಬೇಡ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

ಕಳೆದ ಬಾರಿ ಪ್ರಹ್ಲಾದ ಜೋಶಿ ಸೇರಿ 25 ಮಂದಿ ಸಂಸದರು ಬಿಜೆಪಿಯಿಂದ ಗೆದ್ದಿದ್ದರು. ಆದರೆ ರಾಜ್ಯಕ್ಕೆ ಅನ್ಯಾಯ ಆದಾಗ ಯಾರೊಬ್ಬರು ಬಾಯಿ ಬಿಡಲಿಲ್ಲ. ಬರ ಪರಿಹಾರ, ತೆರಿಗೆ ಹಣಕ್ಕೆ ಮೋಸ ಆದಾಗಲೂ ಜೋಶಿ ಕೊಡಿಸಲು ಮುಂದಾಗಲಿಲ್ಲ. ಬರೀ ಜಾತಿ, ಧರ್ಮ, ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಈ ಸಲ ಮೋಸ ಹೋಗಬೇಡಿ. ಪ್ರಜ್ಞಾವಂತರಾಗಿ ಮತದಾನ ಮಾಡಿ ಎಂದರು.

ಸಚಿವ ಎಚ್‌.ಕೆ. ಪಾಟೀಲ ಮಾತನಾಡಿ, ಈ ಚುನಾವಣೆ ಭಾವನೆ ಮತ್ತು ಬದುಕಿನ ಚುನಾವಣೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಗಟ್ಟಿಗೊಳಿಸುವ ಚುನಾವಣೆ ಎಂದರು.

ಸಚಿವ ಸಂತೋಷ ಲಾಡ್‌ ಮಾತನಾಡಿ, ಮೋದಿ ವಿಶ್ವಗುರು. ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದೆಲ್ಲ ಹೇಳುತ್ತಿದ್ದಾರೆ. ಮಾಧ್ಯಮಗಳಲ್ಲಿ ಮತ ಕೇಳುವುದನ್ನು ಬಿಟ್ಟು ಪ್ರಚಾರ ಮಾಡಲಿ. "ಮೋದಿಜಿ ಜೂಟ್‌ ಮತ್‌ ಬೋಲೋ ಖುದಾ ಕೆ ಪಾಸ್‌ ಜಾನಾ ಹೈ. ವಂಹಾ ಹಾತಿ ಹೈನಾ ಘೋಡಾ ಹೈ ಪೈದಲ್‌ ಹೀ ಜಾನಾ ಹೈ " ಎಂದು ಹಿಂದಿ ಹಾಡು ಹಾಡುವ ಮೂಲಕ ಟೀಕಿಸಿದರು.

ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ ಮಾತನಾಡಿ, ಪಕ್ಷ ಈ ಸಲ ಅವಕಾಶ ಮಾಡಿಕೊಟ್ಟಿದೆ. ನಿಮ್ಮ ಆಶೀರ್ವಾದ ಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಎನ್‌.ಎಚ್‌. ಕೋನರಡ್ಡಿ, ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಾಜಿ ಸಂಸದ ಐ.ಜಿ. ಸನದಿ, ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಎಫ್‌.ಎಚ್‌. ಜಕ್ಕಪ್ಪನವರ,, ಅಲ್ತಾಫ್‌ ಹಳ್ಳೂರ, ಅನಿಲಕುಮಾರ ಪಾಟೀಲ ಸೇರಿದಂತೆ ಹಲವರಿದ್ದರು.ನೇಹಾ ಹಿರೇಮಠಳಿಗೆ ಶ್ರದ್ಧಾಂಜಲಿ:

ಕಾರ್ಯಕ್ರಮಕ್ಕೂ ಮುನ್ನ ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ಹತ್ಯೆಗೀಡಾದ ನೇಹಾ ಹಿರೇಮಠಳ ಆತ್ಮಕ್ಕೆ ಶಾಂತಿಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.