ಮೀಸಲಾತಿ ಅವಕೃಪೆಯಿಂದಾಗಿ ಸ್ಪರ್ಧಿಸಲು ಅವಕಾಶ ಇಲ್ಲದೇ ಇರುವುದರಿಂದ ಕೆಲವು ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.

ರಾಘವೇಂದ್ರ ಹೆಬ್ಬಾರ್

ಭಟ್ಕಳ: ಜಿಲ್ಲಾ ಪಂಚಾಯಿತಿ ಸದಸ್ಯರಾಗಬೇಕೆಂಬ ಕನಸು ಕಂಡ ಮುಖಂಡರಿಗೆ ಮೀಸಲಾತಿ ಅವಕೃಪೆ ಉಂಟಾಗಿದ್ದು, ಈ ಸಲವೂ ಸ್ಪರ್ಧಿಸಲು ಅವಕಾಶ ಇಲ್ಲದಂತಾಗಿದೆ.

ಸರ್ಕಾರ ಬರೋಬ್ಬರಿ ಎಂಟು ವರ್ಷಗಳ ನಂತರ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಮುಂದಾಗಿ ಮೀಸಲಾತಿಯೂ ಪ್ರಕಟಸಿದೆ. ತಾಲೂಕಿನಲ್ಲಿ 5 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿದ್ದು, ಮಾವಳ್ಳಿ1ಕ್ಕೆ ಹಿಂದುಳದ ವರ್ಗ ಬ, ಕಾಯ್ಕಿಣಿ ಕ್ಷೇತ್ರಕ್ಕೆ ಹಿಂದುಳಿದ ವರ್ಗ ಅ ಮಹಿಳೆ, ಶಿರಾಲಿ ಕ್ಷೇತ್ರಕ್ಕೆ ಸಾಮಾನ್ಯ ಮಹಿಳೆ, ಮುಟ್ಟಳ್ಳಿ ಕ್ಷೇತ್ರಕ್ಕೆ ಅನುಸೂಚಿತ ಪಂಗಡ ಮಹಿಳೆ ಹಾಗೂ ಬೆಳಕೆ ಕ್ಷೇತ್ರಕ್ಕೆ ಪರಿಶಿಷ್ಟ ಜಾತಿ ಮೀಸಲಾತಿ ಪ್ರಕಟವಾಗಿದೆ.

ತಾಲೂಕಿನ 5 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿಯೂ ಘಟಾನುಘಟಿ ಆಕಾಂಕ್ಷಿಗಳಿದ್ದರು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹೀಗೆ ಎಲ್ಲ ಪಕ್ಷಗಳಿಂದಲೂ ಸ್ಪರ್ಧಿಸುವ ಉಮೇದುವಾರರರಿದ್ದರು. ಆದರೆ ಸರ್ಕಾರದಿಂದ ಪ್ರಕಟವಾದ ಮೀಸಲಾತಿಯಿಂದಾಗಿ ಘಟಾನುಘಟಿಗಳಿಗೆ ನಿರಾಸೆ ಉಂಟಾಗಿದೆ. ಮಾವಳ್ಳಿಯಲ್ಲಿ ಹಿಂದುಳಿದ ವರ್ಗ ಬ ಮೀಸಲಾತಿ ಬಂದಿದ್ದರಿಂದ ಕ್ರಿಶ್ಚಿಯನ್, ಜೈನ್ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳು ಮಾತ್ರ ಕಣಕ್ಕಿಳಿಯಬೇಕಾಗಿದೆ.

ಇನ್ನು ಕಾಯ್ಕಿಣಿಯಲ್ಲಿ ಹಿಂದುಳಿದ ವರ್ಗ ಅ ಮಹಿಳಾ ಮೀಸಲಾತಿ ಬಂದಿದ್ದರಿಂದ ಘಟಾನುಘಟಿ ಸ್ಪರ್ಧಿಗಳು ತಮ್ಮ ಪತ್ನಿಗೂ ಅಥವಾ ಮನೆಯ ಇತರೆ ಮಹಿಳಾ ಸದಸ್ಯರನ್ನು ಕಣಕ್ಕಿಳಿಸಬೇಕಾದ ಅನಿವಾರ್ಯತೆ ಇದೆ. ಜಿದ್ದಾಜಿದ್ದಿ ಕ್ಷೇತ್ರವಾಗಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದ ಶಿರಾಲಿಯಲ್ಲಿ ಸಾಮಾನ್ಯ ಮಹಿಳಾ ಮೀಸಲಾತಿ ಬಂದಿದ್ದು, ಪುರುಷ ಆಕಾಂಕ್ಷಿಗಳಲ್ಲಿ ಭಾರಿ ನಿರಾಸೆಗೆ ಕಾರಣವಾಗಿದೆ. ಇಲ್ಲಿಯೂ ಎಲ್ಲ ಪಕ್ಷಗಳಿಂದಲೂ ಪ್ರಬಲ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.

ಇನ್ನು ಮುಟ್ಟಳ್ಳಿ ಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡ ಮಹಿಳಾ ಮೀಸಲಾತಿ ಬಂದಿದ್ದು, ಇಲ್ಲಿಯೂ ಪುರುಷ ಆಕಾಂಕ್ಷಿಗಳಿಗೆ ನಿರಾಸೆ ತಂದಿದೆ. ಬೆಳಕೆಯಲ್ಲಿ ಅನುಸೂಚಿತ ಜಾತಿ ಮೀಸಲಾತಿ ಬಂದಿದ್ದು, ಕ್ಷೇತ್ರದಲ್ಲಿ ಈ ಸಮುದಾಯದ ಪುರುಷರು ಸ್ಪರ್ಧಿಸಲು ಅವಕಾಶ ಇರುವುದರಿಂದ ಜಿದ್ದಾಜಿದ್ದಿ ಆಗುವ ಸಾಧ್ಯತೆ ಇದೆ.

ಒಟ್ಟಾರೆಯಾಗಿ 5 ಕ್ಷೇತ್ರಗಳಲ್ಲಿಯೂ ಒಂದಲ್ಲದೊಂದು ಮೀಸಲಾತಿ ಬಂದಿರುವುದರಿಂದ ಜಿಪಂ ಸದಸ್ಯರಾಗುವ ಕನಸು ಕಂಡಿದ್ದ ಮುಖಂಡರಿಗೆ ನಿರಾಸೆ ಉಂಟಾಗಿದೆ. ಸದ್ಯ ಎಲ್ಲಿಯೂ ಸ್ಪರ್ಧಿಸದ ಸ್ಥಿತಿ ಉಂಟಾಗಿದೆ. ಮಾರುಕೇರಿ, ಮುಟ್ಟಳ್ಳಿ, ಶಿರಾಲಿ ತಾಪಂ ಕ್ಷೇತ್ರದಲ್ಲಿ ಸಾಮಾನ್ಯ ಮೀಸಲಾತಿ ಬಂದಿದ್ದರಿಂದ ಈ ಕ್ಷೇತ್ರದಲ್ಲಿ ಸ್ಪರ್ಧಿಸುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಕಳೆದ ಎಂಟು ವರ್ಷಗಳಿಂದ ತಾಪಂ, ಜಿಪಂ ಚುನಾವಣೆ ನಡೆಯದೇ ಸ್ಥಳೀಯ ಮುಖಂಡರಿಗೆ ಯಾವುದೇ ಅಧಿಕಾರ ಇರಲಿಲ್ಲ. ಇದೀಗ ಸರ್ಕಾರ ಜಿಪಂ, ತಾಪಂ ಚುನಾವಣೆ ನಡೆಸಲು ಮುಂದಾಗಿರುವುದರಿಂದ ಸ್ಥಳೀಯ ಮುಖಂಡರು ಅಧಿಕಾರ ಹೊಂದಲು ಅನುಕೂಲವಾದಂತಾಗಿದೆ.

ಮೀಸಲಾತಿ ಅವಕೃಪೆಯಿಂದಾಗಿ ಸ್ಪರ್ಧಿಸಲು ಅವಕಾಶ ಇಲ್ಲದೇ ಇರುವುದರಿಂದ ಕೆಲವು ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಸ್ಥಳೀಯ ಚುನಾವಣೆಗೆ ಸರ್ಕಾರ ಮುಂದಾಗಿರುವುದರಿಂದ ಹಳ್ಳಿಗಳಲ್ಲಿ ರಾಜಕೀಯ ಗರಿಗೆದರಿದೆ. ಹಳ್ಳಿಗಳಲ್ಲಿ ಜಿಪಂ, ತಾಪಂ ಮೀಸಲಾತಿಯ ಕುರಿತು ಚರ್ಚೆ ನಡೆಯುತ್ತಿದ್ದು, ಸ್ಪರ್ಧಿಸಲು ಆಕಾಂಕ್ಷಿಗಳು ರೆಡಿ ಆಗುತ್ತಿದ್ದಾರೆ.