ಸಾರಾಂಶ
ಕನ್ನಡಪ್ರಭ ವಾರ್ತೆ ಧಾರವಾಡ
ಅರಣ್ಯ ಇಲಾಖೆಯ ಅಧಿಕಾರಿಗಳಿಬ್ಬರು ತಮ್ಮದಲ್ಲದ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿದ್ದು, ಇಬ್ಬರು ಅಧಿಕಾರಿಗಳ ವಿರುದ್ಧ ಅರಣ್ಯ ಕಾಯ್ದೆ 1963ರ ಸೆಕ್ಶನ್ ಅಡಿ ದೂರು ದಾಖಲಾಗಿದೆ.ಬೀಟ್ ಫಾರೆಸ್ಟರ್ ಆಗಿರುವ ಶಿವಾನಂದ ಕೊಂಡಿಕೊಪ್ಪ, ಡಿಆರ್‌ಎಫ್‌ಒ ಆಗಿರುವ ಅವಿನಾಶ ರಣಕಾಂಬೆ ಈ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅಧಿಕಾರಿಗಳು. ಇಬ್ಬರೂ ಜವಾಬ್ದಾರಿಯುತ ಹುದ್ದೆಯಲ್ಲಿದ್ದು ತಮ್ಮದಲ್ಲದ ಅರಣ್ಯ ವಲಯದಲ್ಲಿ ಏತಕ್ಕೆ ಹೋದರು ಎಂಬ ಪ್ರಶ್ನೆ ಎದುರಾಗಿದೆ. ಅವಿನಾಶ ಸದ್ಯ ಧಾರವಾಡದ ವೃತ್ತ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಶಿವಾನಂದ ಕೊಂಡಿಕೊಪ್ಪ ಇದುವರೆಗೂ ಧಾರವಾಡ ವಿಭಾಗದ ಕಲಕೇರಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತೀಚಿಗಷ್ಟೇ ಅವರನ್ನು ಕಲಘಟಗಿ ತಾಲೂಕಿಗೆ ವರ್ಗಾವಣೆ ಮಾಡಲಾಗಿತ್ತು.
ಅಲ್ಲಿಗೆ ಹೋಗಿ ಕರ್ತವ್ಯಕ್ಕೆ ಹಾಜರಾದ ಬಳಿಕ ಒಂದು ದಿನ ರಜೆ ಹಾಕಿ ಕಳೆದ ಡಿ. 5ರಂದು ತನ್ನ ಹಳೆಯ ವ್ಯಾಪ್ತಿಯ ಸ್ಥಳಕ್ಕೆ ಬಂದಿದ್ದಾರೆ. ಅವರೊಂದಿಗೆ ಅವಿನಾಶ ಹಾಗೂ ಇನ್ನಿಬ್ಬರು ವ್ಯಕ್ತಿಗಳು ಇದ್ದರು. ವಾಹನವೊಂದರಲ್ಲಿ ಬಂದಿದ್ದ ನಾಲ್ವರೂ ಕಲಕೇರಿ ಮೀಸಲು ಅರಣ್ಯ ಪ್ರದೇಶಕ್ಕೆ ಹೋಗಿದ್ದಾರೆ.ಅನುಮತಿ ಇಲ್ಲದೇ ಹೀಗೆ ಒಳಗಡೆ ಪ್ರವೇಶ ನಿಷಿದ್ಧವಾಗಿದ್ದು, ಅರಣ್ಯ ನಿಯಮಗಳ ಪ್ರಕಾರ ಅಪರಾಧ. ಇದೇ ಕಾರಣಕ್ಕೆ ಇದೀಗ ಇಬ್ಬರೂ ಸಿಬ್ಬಂದಿ ಮೇಲೆ ಅರಣ್ಯ ಇಲಾಖೆ ಎಫ್‌ಐಆರ್ ದಾಖಲು ಮಾಡಿದೆ. ಈ ಕುರಿತು ಪ್ರಕರಣ ದಾಖಲು ಮಾಡಿರುವುದನ್ನು ಡಿಎಫ್‌ಒ ಸೋನಲ್ ವೃಷ್ಣಿ ಸಹ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.
ಮೀಸಲು ಅರಣ್ಯದ ಬಳಿ ತಮ್ಮ ಜೀಪ್ ನಿಲ್ಲಿಸಿ ಒಳಗಡೆ ಏನು ಮಾಡಿದರು ಎಂಬುದು ಇನ್ನೂ ತಿಳಿದಿಲ್ಲ. ತನ್ನದಲ್ಲದ ಪ್ರದೇಶಕ್ಕೆ ಅಪರಿಚಿತರನ್ನು ಕರೆ ತಂದಿದ್ದು ತಪ್ಪು. ಹೊರಗಡೆ ಬರುತ್ತಲೇ ಅಲ್ಲಿಗೆ ಸ್ಥಳೀಯ ಅರಣ್ಯ ಸಿಬ್ಬಂದಿ ಹೋಗಿದ್ದಾರೆ. ಆಗ ನೀವೇಕೆ ಇಲ್ಲಿ ಎಂದು ಕೇಳಿದರೆ ಅದಕ್ಕೆ ಉತ್ತರ ನೀಡದೇ ವಾಹನದಲ್ಲಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಅರಣ್ಯ ಸಿಬ್ಬಂದಿ ಹೇಳುತ್ತಾರೆ. ಹೀಗಾಗಿ ನಾಲ್ವರು ಮೀಸಲು ಅರಣ್ಯದೊಳಗೆ ಹೋಗಿದ್ದು ಏಕೆ ಎಂಬ ಅನುಮಾನ ಶುರುವಾಗಿದೆ. ಈ ಮುಂಚೆ ಶಿವಾನಂದ ಅಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದರಿಂದ ಈ ಅನುಮಾನ ಮತ್ತಷ್ಟು ಹೆಚ್ಚಾಗಿದೆ.ಇದೀಗ ಕಲಕೇರಿ ಡಿಆರ್‌ಎಫ್ಓ ಪರಶುರಾಮ ಮನಕೂರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಂತರವೇ ಸತ್ಯ ಹೊರ ಬರಬೇಕಿದೆ.
15ಡಿಡಬ್ಲೂಡಿ9ಅವಿನಾಶ ರಣಕಾಂಬೆ
15ಡಿಡಬ್ಲೂಡಿ10ಶಿವಾನಂದ ಕೊಂಡಿಕೊಪ್ಪ