ವಾಹನ ಮೂಲ ದಾಖಲಾತಿ ಕಾಯ್ದಿಟ್ಟುಕೊಳ್ಳಿ: ಭರತ ಕಾಳಸಿಂಘೆ

| Published : Feb 03 2024, 01:46 AM IST

ವಾಹನ ಮೂಲ ದಾಖಲಾತಿ ಕಾಯ್ದಿಟ್ಟುಕೊಳ್ಳಿ: ಭರತ ಕಾಳಸಿಂಘೆ
Share this Article
  • FB
  • TW
  • Linkdin
  • Email

ಸಾರಾಂಶ

ವಾಹನಗಳ ಮೂಲ ದಾಖಲಾತಿ ಕಾಯ್ದಿಟ್ಟುಕೊಳ್ಳುವಂತೆ ಬ್ಯಾಡಗಿಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ ಕಾಳಸಿಂಘೆ ಹೇಳಿದ್ದಾರೆ. ರಸ್ತೆ ಸುರಕ್ಷತಾ ಸಪ್ತಾಹ, ಜನಜಾಗೃತಿ ಬೀದಿನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬ್ಯಾಡಗಿ: ರಸ್ತೆ ನಿಯಮಗಳ ಪಾಲನೆ ಮಾಡದಿದ್ದರೆ ಅಪಘಾತಗಳಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲ. ನಿರ್ಲಕ್ಷ್ಯದ ಚಾಲನೆ ನಿಮ್ಮ ಜೀವಕ್ಕೆ ಸಂಚಕಾರ ತರಲಿದೆ. ಯಾವುದೇ ಕಾರಣಕ್ಕೂ ಕಡ್ಡಾಯವಾಗಿ ವಾಹನ ವಿಮೆಯೊಂದಿಗೆ ಚಾಲನಾ ಪರವಾನಗಿ ಇನ್ನಿತರ ಮೂಲ ದಾಖಲಾತಿ ಕಾಯ್ದಿಟ್ಟುಕೊಳ್ಳಬೇಕು ಎಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ರಾಣಿಬೆನ್ನೂರು) ಭರತ ಕಾಳಸಿಂಘೆ ಹೇಳಿದರು.ಪಟ್ಟಣದ ಬಸ್ ನಿಲ್ದಾಣದಲ್ಲಿ ಮಂಗಳವಾರ ಸಾರಿಗೆ ಇಲಾಖೆ, ರಾಣಿಬೆನ್ನೂರಿನ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹ ಹಾಗೂ ಜನ ಜಾಗೃತಿ ಬೀದಿ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಟ್ಟುನಿಟ್ಟಾದ ರಸ್ತೆ ನಿಯಮಗಳು ಜಾರಿಗೆ ತಂದಿರುವುದು ಜನರ ಜೀವ ಕಾಪಾಡಲು ಎಂಬುದನ್ನು ಮೊದಲು ಸಾರ್ವಜನಿಕರು ಅರಿಯಬೇಕು. ಹೆಲ್ಮೇಟ್, ಸೀಟ್ ಬೆಲ್ಟ್ ಧರಿಸಿ ವಾಹನ ಚಲಾಯಿಸಿದಲ್ಲಿ ಅಪಘಾತ ನಡೆದ ಸಂದರ್ಬದಲ್ಲಿ ಇವು ಜೀವವನ್ನು ರಕ್ಷಣೆ ಮಾಡಲಿವೆ. ಒಂದು ವೇಳೆ ನಮ್ಮ ಅರಿವಿಲ್ಲದೇ ಆಗುವಂತಹ ಅಪಫಾತಗಳ ಸಂದರ್ಭದಲ್ಲಿ ನಮ್ಮ ಕುಟುಂಬಗಳ ರಕ್ಷಣೆಗೆ ವಾಹನ ವಿಮೆಯನ್ನು ಪಡೆದುಕೊಳ್ಳಬೇಕು. ಈ ವಿಷಯ ಪ್ರತಿಯೊಬ್ಬ ವಾಹನ ಚಾಲಕ ಹಾಗೂ ಮಾಲೀಕರ ಆದ್ಯ ಕರ್ತವ್ಯವಾಗಬೇಕು. ಅಂದಾಗ ಮಾತ್ರ ಹೆಚ್ಚುತ್ತಿರುವ ಅಪಘಾತ ಹಾಗೂ ಜೀವಹಾನಿಗೆ ಬ್ರೇಕ್ ಹಾಕಬಹುದಾಗಿದೆ ಎಂದರು.

ವಾಹನ ಚಲಾಯಿಸುವಾಗ ಮೊಬೈಲ್ ಮತ್ತು ಹೆಡ್ ಪೋನ್ ಬಳಕೆ ತಪ್ಪು. ಇದರೊಟ್ಟಿಗೆ ವಾಹನಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿದಲ್ಲಿ ಅಪಘಾತವಾದ ಸಂದರ್ಭದಲ್ಲಿ ಅಕಸ್ಮಾತ್ ಪ್ರಾಣ ಹಾನಿ ಸಂಭವಿಸಿದಲ್ಲಿ ಕುಟುಂಬಸ್ಥರಿಗೆ ಅನುಕೂಲವಾಗಲಿದೆ ಎಂದರು. ಎಎಸ್‌ಐ ಬಸವರಾಜ ಅಂಜುಟಗಿ ಮಾತನಾಡಿ, ರಸ್ತೆ ನಿಯಮ ಮೀರಿದಲ್ಲಿ ಪೊಲೀಸರು ದಂಡ ಹಾಕುತ್ತಾರೆ. ಅಲ್ಲಲ್ಲಿ ನಿಂತು ಸಾರ್ವಜಕನಿಕರಿಗೆ ತೊಂದರೆ ಕೊಡುತ್ತಾರೆ ಎಂಬ ಮನಸ್ಥಿತಿಯಿಂದ ಜನರು ಹೊರ ಬರಬೇಕಿದೆ. ರಸ್ತೆ ನಿಯಮಗಳ ಪಾಲನೆ ನಿಮ್ಮ ಪ್ರಾಣ ರಕ್ಷಣೆಗೆ ಹೊರತು ದಂಡಕ್ಕಾಗಿ ಅಲ್ಲ. ಆದ್ದರಿಂದ ಎಲ್ಲರೂ ರಸ್ತೆ ನಿಯಮ ಪಾಲಿಸಿ ಎಂದರು. ಈ ವೇಳೆ ರಸ್ತೆ ಸುರಕ್ಷತೆ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸವಣೂರಿನ ಹುರುಳಿಕೊಪ್ಪಿ ಗ್ರಾಮದ ವೀರಭದ್ರೇಶ್ವರ ಸಾಂಸ್ಕೃತಿಕ ಕಲಾ ತಂಡದ ವತಿಯಿಂದ ಬೀದಿನಾಟಕ ನಡೆಸಲಾಯಿತು. ರಾಣಿಬೆನ್ನೂರ ಸಾರಿಗೆ ಕಚೇರಿ ಸಿಬ್ಬಂದಿ ಆರ್. ಜಗದೀಶ, ಪ್ರಭುಗೌಡ ಪಾಟೀಲ, ವಿಜಯ್ ಪಾಟೀಲ, ಪೊಲೀಸ್ ಪೇದೆ ಹನುಮಂತ ಬೆಳಕೇರಿ ಭಾಗವಹಿಸಿದ್ದರು.