ಸಾರಾಂಶ
ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ- 2024 ಮತ್ತು ಕರ್ನಾಟಕ ಸಹಕಾರಿ ಸಂಘಗಳ (ತಿದ್ದುಪಡಿ) ವಿಧೇಯಕ- 2024ಕ್ಕೆ ವಿಧಾನ ಪರಿಷತ್‌ನಲ್ಲಿ ಸೋಮವಾರ ಅಂಗೀಕಾರ ದೊರಕಿತು.
ಕನ್ನಡಪ್ರಭ ವಾರ್ತೆ ಬೆಂಗಳೂರುಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ- 2024 ಮತ್ತು ಕರ್ನಾಟಕ ಸಹಕಾರಿ ಸಂಘಗಳ (ತಿದ್ದುಪಡಿ) ವಿಧೇಯಕ- 2024ಕ್ಕೆ ವಿಧಾನ ಪರಿಷತ್‌ನಲ್ಲಿ ಸೋಮವಾರ ಅಂಗೀಕಾರ ದೊರಕಿತು.
ಪ್ರಾಥಮಿಕ ಸಹಕಾರಿ ಸಂಘಗಳ ಮಂಡಳಿಯಲ್ಲಿ ಅನುಸೂಚಿತ ಜಾತಿ, ಅನುಸೂಚಿತ ಬುಡಕಟ್ಟುಗಳು, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗಾಗಿ ಈಗಾಗಲೇ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಅದಕ್ಕೆ ಅನುಸಾರವಾಗಿ, ಪೂರಕ ಸಹಕಾರಿ, ಸಂಯುಕ್ತ ಸಹಕಾರಿ ಮತ್ತು ಅಪೆಕ್ಸ್ ಸಹಕಾರಿಗಳ ಮಂಡಳಿಯಲ್ಲಿ ಪ್ರಾತಿನಿಧ್ಯ ಹೊಂದಿರದ ವರ್ಗದ ಜನರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಸದುದ್ದೇಶದಿಂದ ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮಕ್ಕೆ ತಿದ್ದುಪಡಿ ತಂದಿರುವುದಾಗಿ ವಿಧೇಯಕ ಮಂಡಿಸಿದ ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.ಇನ್ನು ಸರ್ಕಾರದಿಂದ ನೆರವು ಪಡೆಯುವ ಪ್ರತಿಯೊಂದು ಸಂಘಗಳ ಮಂಡಳಿಗೆ ಅದರ ಪ್ರತಿನಿಧಿಗಳನ್ನಾಗಿ ಮೂವರು ವ್ಯಕ್ತಿಗಳನ್ನು ರಾಜ್ಯ ಸರ್ಕಾರ ನಾಮ ನಿರ್ದೇಶನ ಮಾಡಬಹುದು. ಒಬ್ಬರು ಅನುಸೂಚಿತ ಜಾತಿ, ಒಬ್ಬರು ಅನುಸೂಚಿತ ಪಂಗಡ ಮತ್ತು ಒಬ್ಬರು ಸಾಮಾನ್ಯ ವರ್ಗದವರಾಗಿರಬೇಕು. ಈ ಮೂವರಲ್ಲಿ ಒಬ್ಬರು ಮಹಿಳೆ ಆಗಿರಬೇಕು. ನಾಮ ನಿರ್ದೇಶಿತ ಸದಸ್ಯರು ಸಹಕಾರ ಸಂಘದ ಎಲ್ಲಾ ಸಭೆಗಳಲ್ಲಿ ಮತ್ತು ಚುನಾವಣೆಗಳಲ್ಲಿ ಮತ ಚಲಾಯಿಸಬಹುದು ಎನ್ನುವುದು ಸೇರಿದಂತೆ ಇನ್ನಿತರ ಅಂಶಗಳನ್ನು ಕರ್ನಾಟಕ ಸಹಕಾರಿ ಸಂಘಗಳ ತಿದ್ದುಪಡಿ ವಿಧೇಯಕ ಒಳಗೊಂಡಿದೆ.