ಬೆಂಗಳೂರು : ರಾಜ್ಯದ ಪ್ರತಿಯೊಬ್ಬ ಅರ್ಹ ನಾಗರಿಕ ಮತದಾರರ ಪಟ್ಟಿಗೆ ಸೇರಲು ಅಗತ್ಯವಿರುವ 11 ದಾಖಲೆಗಳಲ್ಲಿ ಒಂದಾದ ‘ಶಾಶ್ವತ ನಿವಾಸ ಪ್ರಮಾಣ ಪತ್ರ’ದ ಜೊತೆ ಆಯಾ ಜನರ ಜಾತಿ ಪ್ರಮಾಣ ಪತ್ರವನ್ನು ಉಚಿತವಾಗಿ ಮನೆ ಮನೆಗೆ ತಲುಪಿಸುವ ಐತಿಹಾಸಿಕ ಸೇವೆಗೆ ಸರ್ಕಾರ ಸೋಮವಾರ ಚಾಲನೆ ನೀಡಿತು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಉಪ ಮುಖ್ಯಮಂತ್ರಿ ಡಾ। ಜಿ.ಪರಮೇಶ್ವರ್ ಜಂಟಿಯಾಗಿ ಈ ಎರಡೂ ಸೇವೆಗಳಿಗೆ ಗುಂಡಿ ಒತ್ತುವ ಮೂಲಕ ಉದ್ಘಾಟಿಸಿದರು.

ಇದೇ ವೇಳೆ, ಶಾಶ್ವತ ನಿವಾಸ ಪ್ರಮಾಣ ಪತ್ರ ಸೇವೆಯ ವೆಬ್ ಸೈಟ್ ಹಾಗೂ ವಾಟ್ಸ್ ಆ್ಯಪ್ ಸೇವೆಗೆ ಚಾಲನೆ ನೀಡಲಾಯಿತು. ರಾಜ್ಯದ ಜನರಿಗೆ ನಮ್ಮ ಸರ್ಕಾರ ಈಗಾಗಲೇ ಪಂಚ ಗ್ಯಾರಂಟಿಗಳ ಜತೆಗೆ ಭೂ ಗ್ಯಾರಂಟಿ ನೀಡುತ್ತಿದೆ. ಈಗ ಅವುಗಳ ಸಾಲಿಗೆ ಶಾಶ್ವತ ನಿವಾಸ ದೃಢೀಕರಣ ಪತ್ರ ಕೂಡ ಸೇರಿದೆ. ‘ನಿಮ್ಮ ಮತ ನಿಮ್ಮ ಹಕ್ಕು, ನಿಮ್ಮ ಮತ- ನಿಮ್ಮ ಬದುಕು’ ಇದಕ್ಕಾಗಿ ಈ ದಾಖಲೆಗಳ ಮೂಲಕ ಜನರಿಗೆ ‘ಮತದಾನ ಗ್ಯಾರಂಟಿ’ ಕೂಡ ಸೇರಿಕೊಂಡಿದೆ ಎಂದು ನಾಯಕರು ವಿಶ್ಲೇಷಿಸಿದರು.


ಜನರ ಬದುಕು, ಗುರುತು ಮುಖ್ಯ:

ಸೇವೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜನರ ಬದುಕು, ಗುರುತು ಬಹಳ ಮುಖ್ಯ. ಗುರುತಿದ್ದಲ್ಲಿ ಬದುಕು ಇದೆ. ಅದರಲ್ಲಿ ಶಕ್ತಿ ಇದ್ದು, ಮುಂದಿನ ದಿನಗಳಲ್ಲಿ ಅವರ ನಾಯಕರನ್ನು ಆಯ್ಕೆ ಮಾಡಿಕೊಳ್ಳಲು ಇದು ಅತ್ಯಗತ್ಯ. ನಮಗೆ ರಾಜಕಾರಣ ಮುಖ್ಯವಲ್ಲ. ಅರ್ಹರೆಲ್ಲರಿಗೂ ಮತದಾನದ ಗ್ಯಾರಂಟಿ ಸಿಗುವಂತೆ ಮಾಡುವುದು ಸರ್ಕಾರದ ಕರ್ತವ್ಯ. ಹಾಗಾಗಿ ಮನೆ ಬಾಗಿಲಿಗೆ ಶಾಶ್ವತ ನಿವಾಸ ಪ್ರಮಾಣ ಪತ್ರ ನೀಡಲು ದೇಶದಲ್ಲೇ ಐತಿಹಾಸಿಕ ಕಾರ್ಯಕ್ರಮ ಕೈಗೊಳ್ಳಲಾಗಿದೆ.

ಈ ಕಾರ್ಯಕ್ರಮದಡಿ ರಾಜ್ಯದ ಒಟ್ಟು 4.85 ಕೋಟಿ ಕುಟುಂಬಗಳಿಗೆ ಎರಡೂ ದಾಖಲೆಗಳನ್ನು ಮನೆಗೆ ತಲುಪಿಸುವ ಕೆಲಸ ಆಗಲಿದೆ.ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಮನೀಶ್ ಮೌದ್ಗಿಲ್, ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್, ಕಂದಾಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಸೇರಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.ಅರ್ಜಿ ಸಲ್ಲಿಸಿದವರಿಗೆ ದಾಖಲೆ ಪರಿಶೀಲಿಸಿ ವಿತರಣೆ:

ಕಂದಾಯ ಸಚಿವರೂ ಆದ ಉಪಮುಖ್ಯಮಂತ್ರಿ ಡಾ। ಜಿ.ಪರಮೇಶ್ವರ್‌ ಮಾತನಾಡಿ, ಅಟಲ್‌ ಜನಸ್ನೇಹಿ ಕೇಂದ್ರದಿಂದ ಈಗಾಗಲೇ ಅಗತ್ಯ ಅಂಕಿ-ಅಂಶಗಳನ್ನು ಪಡೆದು, ಅವುಗಳನ್ನು ಆಧರಿಸಿ ಪಿಆರ್‌ಸಿಯನ್ನು ಆಯಾ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಕಳುಹಿಸಿಕೊಡಲಾಗಿದೆ. ಜನ ಅರ್ಜಿ ಸಲ್ಲಿಸುತ್ತಿದ್ದಂತೆ ಪ್ರಮಾಣಪತ್ರವನ್ನು ಅವರಿಗೆ ನೀಡಲಾಗುವುದು ಎಂದು ಹೇಳಿದರು.ಎಲ್ಲೆಲ್ಲಿ ಅರ್ಜಿ?:

ಅರ್ಜಿಗಳನ್ನು ಹೋಬಳಿ ಮಟ್ಟದಲ್ಲಿ ತೆರೆಯಲಾಗಿರುವ ಸೇವಾ ಕೇಂದ್ರಗಳಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ನಾಡಕಚೇರಿ, ಗ್ರಾಮ ಒನ್‌, ಬಾಪೂಜಿ ಸೇವಾ ಕೇಂದ್ರ, ವೆಬ್‌ಸೈಟ್‌ ಲಿಂಕ್‌ಗಳ ಮೂಲಕ ನೇರವಾಗಿ ಅರ್ಜಿ ಸಲ್ಲಿಸಿ ಪ್ರಮಾಣಪತ್ರ ಪಡೆಯಬಹುದು.

ಪಿಆರ್‌ಸಿ- http://ajsk.karnataka.gov.in/nk5_online/login/login_public

ಜಾತಿ ಮತ್ತು ಆದಾಯ- http://nadakacheri.karnataka.gov.in/AJSKCertificates

-ಅರ್ಜಿ ಸಲ್ಲಿಸಿದ ಏಳು ದಿನಗಳಲ್ಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರ ದೊರೆಯಲಿದೆ

- ಅರ್ಜಿ ಸಲ್ಲಿಸಿದ 21 ದಿನಗಳ ಒಳಗೆ ಪಿಆರ್‌ಸಿ ಲಭ್ಯವಾಗಲಿದೆ

ದೂರಿಗೆ ಸಕ್ಷಮ ಪ್ರಾಧಿಕಾರ

ಯಾವುದಾದರೂ ತೊಂದರೆ ಅಥವಾ ದೂರುಗಳು ಬಂದರೆ ಪರಿಶೀಲಿಸಲು ಸಕ್ಷಮ ಪ್ರಾಧಿಕಾರವಾದ ತಹಶೀಲ್ದಾರ್, ಉಪ ತಹಶೀಲ್ದಾರ್‌ ಹಾಗೂ ಪವಿಭಾಗಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಬಹುದು. ದೂರು ಆಧರಿಸಿ ಮರುಪರಿಶೀಲಿಸುವ ಅವಕಾಶವನ್ನು ಜಿಲ್ಲಾಧಿಕಾರಿಗಳಿಗೆ ಕಲ್ಪಿಸಲಾಗಿದೆ.

ಶಾಶ್ವತ ನಿವಾಸಿ ಪತ್ರ ಆತಂಕಕಾರಿ:

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಇಂದು ಮನೆ ಬಾಗಿಲಿಗೆ ಶಾಶ್ವತ ನಿವಾಸಿ ಪ್ರಮಾಣಪತ್ರ(ಪಿಆರ್‌ಸಿ) ವಿತರಣೆಗೆ ಚಾಲನೆ ನೀಡಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ. ರಾಜ್ಯ ಸರ್ಕಾರ ಇದನ್ನು ಆಡಳಿತ ಸುಧಾರಣೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿರುವುದಾಗಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಕಿಡಿಕಾರಿದ್ದಾರೆ.

ರಾಜ್ಯ ಸರ್ಕಾರ ನೀಡುತ್ತಿರುವ ಪಿಆರ್‌ಸಿ ಸಂವಿಧಾನ ಮತ್ತು ಕಾನೂನುಬಾಹಿರ ಕ್ರಮ ಎಂಬುದನ್ನು ರಾಜ್ಯದ ಜನತೆ ಅರಿಯಬೇಕು. ಇಷ್ಟಕ್ಕೂ ಈ ಪಿಆರ್‌ಸಿ ಪ್ರಮಾಣಪತ್ರ ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಕೊಟ್ಟಿದ್ದು ಯಾರು? ಭಾರತದ ಸಂವಿಧಾನ ಪ್ರಕಾರ ಪೌರತ್ವ, ವಿದೇಶಿಯರ ಗುರುತಿಸುವಿಕೆ ಹಾಗೂ ವಲಸೆ ಸಂಬಂಧಿತ ವಿಷಯಗಳು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಸೇರಿವೆ. ಇಂಥ ಸಂದರ್ಭದಲ್ಲಿ ರಾಜ್ಯ ಸರ್ಕಾರ ತನ್ನ ಅಧಿಕಾರದ ಮಿತಿ ಮೀರಿ ನಡೆದುಕೊಳ್ಳುತ್ತಿರುವುದು ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧ ಎಂದು ಆರೋಪಿಸಿದ್ದಾರೆ.

ರಾಷ್ಟ್ರೀಯ ಭದ್ರತೆಗೆ ಧಕ್ಕೆ:ದೇಶಾದ್ಯಂತ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ(ಎಸ್‌ಐಆರ್‌) ನಡೆಯುತ್ತಿರುವ ಈ ಸಂದರ್ಭದಲ್ಲಿ ಇಂತಹ ಪ್ರಮಾಣಪತ್ರಗಳನ್ನು ಮನೆ ಮನೆಗೆ ವಿತರಿಸುವ ಆತುರ ಏಕೆ? ಇದರ ಹಿಂದೆ ಇರುವ ಉದ್ದೇಶವೇನು? ಅಕ್ರಮ ವಲಸಿಗರು ಅಥವಾ ನಕಲಿ ದಾಖಲೆಗಳನ್ನು ಸೃಷ್ಟಿಸಿ ವ್ಯವಸ್ಥೆ ದುರುಪಯೋಗಪಡಿಸಿಕೊಳ್ಳಲು ಈ ಸರ್ಕಾರ ಬಾಗಿಲು ತೆರೆಯುತ್ತಿದೆಯೇ ಎಂಬ ಅನುಮಾನಗಳು ಸಹಜವಾಗಿ ಮೂಡುತ್ತಿವೆ. ರಾಷ್ಟ್ರೀಯ ಭದ್ರತೆ ಮತ್ತು ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಯಾವುದೇ ಕ್ರಮವನ್ನು ಬಿಜೆಪಿ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ವೋಟ್‌ ಬ್ಯಾಂಕ್‌ಗಾಗಿ ಭವಿಷ್ಯ ಪಣಕ್ಕೆ:ಕಂದಾಯ ಇಲಾಖೆ ಮೂಲಕ ಈ ಪ್ರಮಾಣಪತ್ರ ವಿತರಣೆಗೆ ಮುಂದಾಗಿರುವುದು ಭ್ರಷ್ಟಾಚಾರ, ನಕಲಿ ದಾಖಲೆಗಳ ಸೃಷ್ಟಿ ಹಾಗೂ ಅಧಿಕಾರ ದುರುಪಯೋಗಕ್ಕೆ ಅವಕಾಶ ಕಲ್ಪಿಸುವ ಅಪಾಯಕಾರಿ ನಿರ್ಧಾರ. ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ರಾಜ್ಯದ ಭವಿಷ್ಯ ಪಣಕ್ಕಿಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಸ್ಥಳೀಯ ಕನ್ನಡಿಗರ ಶಿಕ್ಷಣ, ಉದ್ಯೋಗ ಮತ್ತು ಅವಕಾಶಗಳ ಮೇಲೆ ಪರಿಣಾಮ ಬೀರುವ ಯಾವುದೇ ಕ್ರಮ ನಾವು ಒಪ್ಪುವುದಿಲ್ಲ. ಆಡಳಿತದ ಹೆಸರಿನಲ್ಲಿ ಸಂವಿಧಾನ ಉಲ್ಲಂಘಿಸಲು ಯಾರಿಗೂ ಅಧಿಕಾರವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪಿಆರ್‌ಸಿ ವಿರುದ್ಧ ಕಾನೂನಾತ್ಮಕ ಹೋರಾಟ:

ಈ ಸಂವಿಧಾನಬಾಹಿರ ಪಿಆರ್‌ಸಿ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆ ತಕ್ಷಣವೇ ಸ್ಥಗಿತಗೊಳಿಸಿ, ಸರ್ಕಾರ ಹೊರಡಿಸಿರುವ ಪ್ರಸ್ತಾವನೆ ಹಿಂಪಡೆಯಬೇಕು. ಸಂವಿಧಾನದ ಆಶಯಗಳು, ಕನ್ನಡಿಗರ ಹಕ್ಕುಗಳು ಮತ್ತು ದೇಶದ ಆಂತರಿಕ ಭದ್ರತೆ ವಿಚಾರದಲ್ಲಿ ಬಿಜೆಪಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಈ ಸಂವಿಧಾನ ಬಾಹಿರ ನಡೆ ವಿರುದ್ಧ ನಾವು ಕಾನೂನಾತ್ಮಕವಾಗಿ ಮತ್ತು ರಾಜಕೀಯವಾಗಿ ಹೋರಾಡುತ್ತೇವೆ. ರಾಷ್ಟ್ರೀಯ ಭದ್ರತೆಗೆ ಮಾರಕವಾಗಿರುವ ಇದರ ವಿರುದ್ಧ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಜನಾಂದೋಲನ ಕಟ್ಟುತ್ತೇವೆ ಎಂದು ಅಶೋಕ್‌ ಅವರು ಸಾಮಾಜಿಕ ಜಾಲತಾಣ ಮೂಲಕ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.