ಯಲಬುರ್ಗಾದ ಬೇವೂರಿನಲ್ಲಿ 24 ಕೋಟಿ ವೆಚ್ಚದಲ್ಲಿ ಬಿಸಿಎ, ಬಿ.ಕಾಂ, ಬಿಎಸ್ಸಿ ಓದಲು ವಸತಿ ಸಹಿತ ಕಾಲೇಜು ಮಂಜೂರಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ಕುಕನೂರು: ಯಲಬುರ್ಗಾದ ಬೇವೂರಿನಲ್ಲಿ 24 ಕೋಟಿ ವೆಚ್ಚದಲ್ಲಿ ಬಿಸಿಎ, ಬಿ.ಕಾಂ, ಬಿಎಸ್ಸಿ ಓದಲು ವಸತಿ ಸಹಿತ ಕಾಲೇಜು ಮಂಜೂರಾಗಿದೆ. ಕ್ಷೇತ್ರದಲ್ಲಿ ಈ ಅವಧಿಯಲ್ಲಿ 18 ಪ್ರೌಢ ಶಾಲೆ, 7 ಜೂನಿಯರ್ ಕಾಲೇಜು, ಕಾರ್ಮಿಕರ ವಸತಿ ಶಾಲೆ, ಇನ್ನೊಂದು ಕೌಶಲ್ಯ ಅಭಿವೃದ್ಧಿ ಕೇಂದ್ರ ಮಂಜೂರು ಆಗಿದೆ. ಎಂಜಿನಿಯರ್ ಹಾಗೂ ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಅಭಿವೃದ್ಧಿಗೆ ಅನುದಾನ ಒದಗಿಸಿದ್ದೇನೆ ಎಂದು ಉನ್ನತ ಶಿಕ್ಷಣ ಇಲಾಖೆ ಸಚಿವ ಬಸವರಾಜ ರಾಯರಡ್ಡಿ ಹೇಳಿದರು. ತಾಲೂಕಿನ ಮಂಗಳೂರು ಗ್ರಾಮದಲ್ಲಿ ಪ್ರಜಾಸೇವೆ ಇಲಾಖೆ, ತಾಲೂಕಾಡಳಿತದಿಂದ ಜರುಗಿದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಜನರಿಗೆ ಸರ್ಕಾರದ ಸೇವೆ ಲಭ್ಯತೆ ಸೇರಿದಂತೆ ಜನರ ಸಮಸ್ಯೆ ಬಗೆಹರಿಸಲು ಸರ್ಕಾರ ಪ್ರಜಾಸೇವೆ ಇಲಾಖೆ ಆರಂಭಿಸಿ ಪ್ರಜಾಸೇವೆ ಆಂದೋಲನ ಆರಂಭಿಸಿದೆ. ಸಿಎಂ ಡಿಕೆಶಿ ಅವರು ಪ್ರತಿ ತಾಲೂಕಿನಲ್ಲಿ ಅಧಿಕಾರಿಗಳು, ಶಾಸಕರು, ಸಚಿವರು ಪ್ರಜಾಸೇವೆ ಆಂದೋಲನ ಕೈಗೊಳ್ಳಲು ಸೂಚಿಸಿದ್ದಾರೆ.
ಜನರ ಕೆಲಸಕ್ಕಾಗಿ ಪ್ರಜಾ ಸೇವೆನಾನು ಈ ಹಿಂದೆ ಗುಡಿಗೆ ಹೋಗಲ್ಲ ಅಂದಿದ್ದೆ. ಅಂದರೆ ನಾನು ದೇವರ ಸೇವೆಗಿಂತ ಜನರ ಸೇವೆ ಮಾಡುತ್ತೇನೆ ಎಂದು ಅದರ ಅರ್ಥ. ನಮಗೆ ಜನರೇ ದೇವರು. ಜನರಾದ ನಿಮ್ಮ ಸೇವೆ ಮಾಡೋದೇ ಪೂಜೆ ಮಾಡಿದಂತೆ. ಜನತಾ ಸೇವೆಯೇ ಜನಾರ್ದನ ಸೇವೆ ಎಂಬ ನಿಟ್ಟಿನಲ್ಲಿ ಪ್ರಜಾ ಇಲಾಖೆ ಆರಂಭವಾಗಿದೆ ಎಂದು ತಿಳಿಸಿದರು.
ಸದ್ಯ ಮಾಶಾಸನಗಳಿಗೆ ಆದಾಯದ ಮಿತಿಯಿಂದ ತೊಂದರೆ ಆಗಿತ್ತು. ಅದನ್ನು 35 ಸಾವಿರದಿಂದ 1.20 ಲಕ್ಷದವರೆಗೆ ಏರಿಸಲಾಗಿದೆ. ಮಂಗಳೂರು ಗ್ರಾಮದಲ್ಲಿ ಮನೆಯಲ್ಲಿ ವಾಸವಿದ್ದು, ಹಕ್ಕುಪತ್ರ ಇಲ್ಲದೆ 365 ಕುಟುಂಬಳಿಗೆ ಶೀಘ್ರ ಹಕ್ಕುಪತ್ರ ವಿತರಣೆ ಕಾರ್ಯ ಆಗುತ್ತದೆ. ನಾನು ಗದಗ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೇನೆ. ಜಿಲ್ಲಾ ಉಸ್ತುವಾರಿ ಅಂದ ಕೂಡಲೇ ದೊಡ್ಡ ಕೆಲಸ ಇರುವುದಿಲ್ಲ. ನಾನು ಇತ್ತೀಚಿಗೆ ಕೆಲಸ ಮಾಡದ ಅಧಿಕಾರಿಗಳನ್ನು ಫೈರ್ ಮಾಡುತ್ತೇನೆ ಅಂದೆ. ಅಂದರೆ, ಅವರನ್ನು ಕೆಲಸದಿಂದ ವಜಾ ಮಾಡುತ್ತೇನೆ ಎಂದರ್ಥ. ಹಾಗೆಯೇ ತಹಸೀಲ್ದಾರರು ಪಿಆರ್‌ಒ ಆಗಿ ಕೆಲಸ ಮಾಬೇಕು ಅಂದಿದ್ದೆ. ಅದರರ್ಥ ಪಬ್ಲಿಕ್ ರಿಲೆಟಿವ್ ಆಗಿ ಕೆಲಸ ಮಾಡಬೇಕು ಎಂದು ಹೇಳಿದರು.ಪಿಡಿಒಗಳನ್ನು ಸಸ್ಪೆಂಡ್ ಮಾಡಿ
ಎಲ್ಲ ಗ್ರಾಮಗಳಲ್ಲೂ ಪಿಡಿಒಗಳ ಬಗ್ಗೆ ದೂರು ಬರುತ್ತಿವೆ. ಜಿಪಂ ಸಿಇಒ ಗ್ರಾಪಂಗಳಿಗೆ ಭೇಟಿ ನೀಡಿ ಪಿಡಿಒ ಕಾರ್ಯ ವೈಖರಿ ಬಗ್ಗೆ ಗಮನ ಹರಿಸಬೇಕು. ಕೆಲಸ ಮಾಡದೆ ನಾಲ್ಕೈದು ಪಿಡಿಒಗಳನ್ನು ಸಸ್ಪೆಂಡ್ ಮಾಡಿ ಎಂದರುಪ್ರಜಾಸೌಧದ ಕಟ್ಟಡ ಆರಂಭ
ಹಿಂದಿನ ಡಿಸಿ ಪ್ರಜಾಸೌಧ ಕಟ್ಟಡಕ್ಕೆ ಭೂ ಸ್ವಾಧೀನ ಮಾಡಿಕೊಳ್ಳಲು ಮುಂದಾದಾಗ ಜಮೀನು ಮಾಲಕರು ತಕರಾರು ತೆಗೆದಿದ್ದಾರೆ. ಗುದ್ನೇಶ್ವರ ದೇವಸ್ಥಾನದ ಜಾಗವನ್ನು ಯಾರೂ ಖರೀದಿಸಲು ಬರುವುದಿಲ್ಲ. ಗುತ್ತಿಗೆ ಆಧಾರದ ಮೇಲೆ ಅಲ್ಲಿ ಪ್ರಜಾಸೌಧ ಕಟ್ಟಡ ಕಾರ್ಯ ಆರಂಭವಾಗಿದೆ. ಅಲ್ಲಿನ ಸೇವಾದಾರರು ಭೂಮಿ ತಮ್ಮದೆಂದು ತಕರಾರು ಮಾಡುವುದು ತಪ್ಪು ಎಂದರು.ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಮಾತನಾಡಿ, ಈ ಹಿಂದೆ ಯಲಬುರ್ಗಾದ ಹಿರೇವಂಕಲಕುಂಟಾ ಗ್ರಾಮದಲ್ಲಿ ಜರುಗಿದ ಪ್ರಜಾಸೇವಾ ಆಂದೋಲನದಲ್ಲಿ ಮಾಶಾಸನ ಕುರಿತು 50 ಅರ್ಜಿಗಳು ಬಂದಿದ್ದವು. ಅವುಗಳಲ್ಲಿ 30 ಅರ್ಜಿ ವಿಲೇವಾರಿ ಮಾಡಲಾಗಿದೆ. ಇದರಿಂದ ಜನರಿಗೆ ಅನುಕೂಲ ಆಗುತ್ತಿದೆ. ಜಿಲ್ಲೆಯಲ್ಲಿ 50 ಸಾವಿರ ನಿವೇಶನ ಹಂಚಿಕೆ ಮಾಡಲಾಗುವುದು. ಯಲಬುರ್ಗಾ ಕ್ಷೇತ್ರಕ್ಕೆ 15 ಸಾವಿರ ನಿವೇಶನ ನೀಡಲಾಗುವುದು ಎಂದರು.
ಜಿಪಂ ಸಿಇಒ ವರ್ಣೀತ್ ನೇಗಿ, ತಹಸೀಲ್ದಾರ್ ಬಸವರಾಜ ಬೆಣ್ಣೆ ಶಿರೂರು, ತಾಪಂ ಇಒ ಬೆಟದಪ್ಪ ಮಾಳೆಜಿಪ್ಪ, ಉಪತಹಸೀಲ್ದಾರ್ ಮುರುಳೀಧರ ರಾವ್ ಕುಲಕರ್ಣಿ ಸೇರಿ ನಾನಾ ಇಲಾಖೆ ಅಧಿಕಾರಿಗಳಿದ್ದರು.