ಸಾರಾಂಶ
ಬಿ.ರಾಮಪ್ರಸಾದ್ ಗಾಂಧಿ
ಹರಪನಹಳ್ಳಿ: ಪಟ್ಟಣದ ಹೊಸಪೇಟೆ ರಸ್ತೆಯ ಸರ್ಕಾರಿ ಪದವಿ ಕಾಲೇಜು ಸಮೀಪ ಇರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ವಸತಿ ಶಾಲೆಯಲ್ಲಿ ಮೂಲ ಸೌಲಭ್ಯದ ಕೊರತೆಯಿಂದ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ಇದೆ.ಈ ವಸತಿ ಶಾಲೆಯಲ್ಲಿ 6ರಿಂದ 10ನೇ ತರಗತಿವರೆಗೆ 278 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. 6ನೇ ತರಗತಿಯಲ್ಲಿ 100 ವಿದ್ಯಾರ್ಥಿಗಳಿದ್ದು, 7ರಿಂದ 10ನೇ ತರಗತಿಗಳಲ್ಲಿ 178 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಬಾಲಕರಿಗೆ 4 ತರಗತಿ ಕೊಠಡಿಗಳು, ಬಾಲಕಿಯರಿಗೆ 7 ಕೊಠಡಿಗಳಿವೆ. ಇಲ್ಲಿ ಕೊಠಡಿಗಳ ಕೊರತೆ ತೀವ್ರವಾಗಿದೆ. 6ರಿಂದ 10ನೇ ತರಗತಿಯ ಅನೇಕ ಮಕ್ಕಳಿಗೆ ಶಾಲೆಯ ಹಿಂಭಾಗ ಕಂಪೌಂಡ್ ಕಾರಿಡಾರ್‌ನಲ್ಲಿ ತಗಡು ಹಾಕಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಆದರೂ ಸಾಲುತ್ತಿಲ್ಲ. ವಿದ್ಯಾರ್ಥಿಗಳು ಮಲಗಲು ಈಗ 10 ಕೊಠಡಿಗಳಿವೆ. ಇನ್ನು 10 ಕೊಠಡಿಗಳ ವಸತಿಗೆ ಬೇಕಾಗಿದ್ದು, ವಸತಿ ಸಹ ಕಷ್ಟವಾಗಿದೆ. ಹೀಗಾಗಿ, ವಿದ್ಯಾರ್ಥಿಗಳು ಊಟದ ಹಾಲ್‌ನಲ್ಲಿ ಮಲಗುತ್ತಿದ್ದಾರೆ.10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಚರ್ಮ ಕಾಯಿಲೆ ಆವರಿಸಿದೆ. ಈ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿರುವ ನರ್ಸ್ ಒಬ್ಬರು ಹೊರಗಡೆ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೂ ಈ ಚರ್ಮ ಕಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ.
ಮೊರಾರ್ಜಿ ವಸತಿ ಶಾಲೆಯ ನೂತನ ಕಟ್ಟಡ ಕಾಮಗಾರಿ ಬಾಗಳಿ ಕ್ರಾಸ್ ಬಳಿ ಕಳೆದ 5 ವರ್ಷದಿಂದ ಆಮೆಗತಿಯಲ್ಲಿ ನಡೆಯುತ್ತಲೇ ಇದೆ. ಇನ್ನು ಪೂರ್ಣಗೊಳ್ಳುತ್ತಿಲ್ಲ.ಈಗ ಈ ವಸತಿ ಶಾಲೆ ಕಾರ್ಯ ನಿರ್ವಹಿಸುತ್ತಿರುವ ಕಟ್ಟಡ ಪೋಸ್ಟ್ ಮೆಟ್ರಿಕ್ ಬಾಲಕಿಯರ ಹಾಸ್ಟೆಲ್‌ಗೆ ಸೇರಿದೆ. ಆದರೆ ಪೋಸ್ಟ್ ಮೆಟ್ರಿಕ್ ಬಾಲಕಿಯರ ಹಾಸ್ಟೆಲ್ ಪಟ್ಟಣದ ಆಚಾರ ಬಡಾವಣೆಯ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ.
ಮೇಲಧಿಕಾರಿಗಳು, ಜನಪ್ರತಿನಿಧಿಗಳು ಆದಷ್ಟು ಬೇಗ ಸಂಬಂಧಿಸಿದ ಗುತ್ತಿಗೆದಾರರಿಗೆ ಹೇಳಿ ಬಾಗಳಿ ಕ್ರಾಸ್ ಬಳಿ ನಿರ್ಮಾಣವಾಗುತ್ತಿರುವ ಕಟ್ಟಡವನ್ನು ಪೂರ್ಣಗೊಳಿಸಿ ಅಲ್ಪಸಂಖ್ಯಾತರ ಮೊರಾರ್ಜಿ ಶಾಲೆ ಸ್ಥಳಾಂತರಗೊಳಿಸಿ ಸಮಸ್ಯೆ ತಪ್ಪಿಸಬೇಕು ಎಂದು ಪಾಲಕರ ಆಗ್ರಹಿಸಿದ್ದಾರೆ.ಬಾಗಳಿ ಬಳಿ ನಿರ್ಮಾಣವಾಗುತ್ತಿರುವ ನಮ್ಮ ಸ್ವಂತ ಕಟ್ಟಡ ಪೂರ್ಣಗೊಳ್ಳುವವರೆಗೂ ಇಲ್ಲಿ ಇರುವುದು ಅನಿವಾರ್ಯ. ಈಗಾಗಲೇ ಕೆಲವೊಂದು ತರಗತಿ ನಡೆಸಲು ಕಾರಿಡಾರ್ ನಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದೇವೆ. ಎರಡನೇ ಮಹಡಿಯಲ್ಲಿ ಮತ್ತೊಂದು ತಗಡು ಚಾವಣಿ ಹಾಕಿಸಿ ವಿದ್ಯಾರ್ಥಿಗಳಿಗೆ ಮಲಗಲು ವ್ಯವಸ್ಥೆ ಮಾಡಲಾಗುವುದು ಎನ್ನುತ್ತಾರೆ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆ ಪ್ರಾಚಾರ್ಯ ಎಚ್.ಚಂದ್ರಶೇಖರ.