ಮಲವಂತಿಗೆ ಕಜಕ್ಕೆ ನಿವಾಸಿಗಳಿಗೆ ಬೇಕಿದೆ ಶಾಶ್ವತ ಸೇತುವೆ

| Published : May 15 2024, 01:39 AM IST

ಸಾರಾಂಶ

ತಾಲೂಕು ಕೇಂದ್ರದಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಕಜಕ್ಕೆ ಪ್ರದೇಶಕ್ಕೆ ಕೆಲವೊಂದು ಮೂಲಭೂತ ಸೌಕರ್ಯಗಳು ಬೇಕಿವೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ತಾಲೂಕಿನ ಮಲವಂತಿಗೆ ಗ್ರಾಮದ ಕಜಕ್ಕೆ ಹಳ್ಳಕ್ಕೆ ಸೇತುವೆ ನಿರ್ಮಾಣದ ಅಗತ್ಯವಿದೆ. ಒಂದು ಕಾಲದಲ್ಲಿ ಕುಗ್ರಾಮವೆಂದು ಗುರುತಿಸಲ್ಪಟ್ಟಿದ್ದ ಇಲ್ಲಿನ ದಿಡುಪೆ ಮೂಲಕ ಕಜಕ್ಕೆ ಪ್ರದೇಶವನ್ನು ತಲುಪಬೇಕು. ದಿಡುಪೆಯಿಂದ ಸುಮಾರು 3 ಕಿಮೀ ದೂರದಲ್ಲಿರುವ ಕಜಕ್ಕೆ ಪರಿಸರದಲ್ಲಿ ಹತ್ತಕ್ಕಿಂತ ಅಧಿಕ ಕೃಷಿ ಕುಟುಂಬಗಳು ವಾಸಿಸುತ್ತಿವೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಸಮೀಪದಲ್ಲಿರುವ ಈ ಪ್ರದೇಶದಲ್ಲಿ ಕಾಡಾನೆಗಳ ಸಹಿತ ಅನೇಕ ವನ್ಯಜೀವಿಗಳ ಉಪಟಳವು ಇದೆ.

ಕಜಕ್ಕೆ ಪ್ರದೇಶವನ್ನು ತಲುಪಲು ರಸ್ತೆಯು ಉತ್ತಮವಾಗಿಲ್ಲ. ಸುತ್ತಲೂ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಕಜಕ್ಕೆಯಲ್ಲಿ ಒಂದು ದೇವಸ್ಥಾನವು ಇದೆ. ತಾಲೂಕು ಕೇಂದ್ರದಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಕಜಕ್ಕೆ ಪ್ರದೇಶಕ್ಕೆ ಕೆಲವೊಂದು ಮೂಲಭೂತ ಸೌಕರ್ಯಗಳು ಬೇಕಿವೆ.

ಈ ಪರಿಸರದಲ್ಲಿ ಬೇಸಿಗೆಯಲ್ಲೂ ನೀರಿನ ಸಮಸ್ಯೆ ಇಲ್ಲ. ಇಲ್ಲಿನ ತೋಟಗಳಿಗೆ ಗುಡ್ಡದಿಂದ ಬರುವ ನೀರನ್ನು ನೀಡಲಾಗುತ್ತದೆ.ಈ ಬಿರುಬೇಸಿಗೆಯ ದಿನಗಳಲ್ಲೂ ಗುಡ್ಡದಿಂದ ಉತ್ತಮ ಮಟ್ಟದ ನೀರು ಹರಿದು ಬರುತ್ತಿದೆ. ಪ್ರಾಕೃತಿಕವಾಗಿ ಹರಿದು ಬರುವ ಈ ನೀರು ಇಲ್ಲಿನ ಜನರ ದೈನಂದಿನ ಉಪಯೋಗಕ್ಕೂ ಆಧಾರವಾಗಿದೆ .ಬೇಕಿದೆ ಸೇತುವೆ: ಕಜಕ್ಕೆ ಪ್ರದೇಶದಲ್ಲಿ ಹಳ್ಳವಿದ್ದು ಇಲ್ಲಿನ ಜನರ ಸಂಪರ್ಕ ಇದರ ಮೂಲಕವೇ ಇದೆ. ರಸ್ತೆಯಲ್ಲೇ ಹರಿಯುವ ಈ ಹಳ್ಳದಲ್ಲಿ ಪ್ರಸ್ತುತ ನೀರಿಲ್ಲ. ಆದರೆ ಮಳೆಗಾಲದಲ್ಲಿ ಇಲ್ಲಿ ಭಾರಿ ಮಟ್ಟದಲ್ಲಿ ನೀರು ಹರಿದು ಬಂದು ನೇತ್ರಾವತಿ ನದಿಯನ್ನು ಸೇರುತ್ತದೆ. ಮಳೆಗಾಲದಲ್ಲಿ ಹಳ್ಳದಲ್ಲಿ ನೀರು ಇಳಿಯುವ ತನಕ ಕಾದು ಬಳಿಕ ಇಲ್ಲಿನವರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಮುಂದುವರಿಯಬೇಕು. ಜೋರಾದ ಮಳೆ ಸುರಿದರೆ ಕೆಲವೊಮ್ಮೆ ದಿನಗಟ್ಟಲೆ ಕಾಯಬೇಕಾಗುತ್ತದೆ. ಆಗ ಹಳ್ಳದ ಇನ್ನೊಂದು ಕಡೆ ಇರುವ ಜನರು ದ್ವೀಪ ವಾಸಿಗಳಾಗುತ್ತಾರೆ.

ಹಳ್ಳದ ಕೆಳಭಾಗದಲ್ಲಿ ಮಳೆಗಾಲದ ಸಂಚಾರಕ್ಕೆ ಸ್ಥಳೀಯರು ಸೇರಿ ಈ ಹಳ್ಳಕ್ಕೆ ಮರ ಹಾಗೂ ಅಡಕೆಯ ಕಾಲು ಸಂಕ ರಚಿಸುತ್ತಾರೆ ಶಾಲಾ ಮಕ್ಕಳು, ಹೈನುಗಾರರು ಹಾಗೂ ಇತರ ಜನರಿಗೆ ಈ ಕಾಲುಸಂಕ ಮಳೆಗಾಲದಲ್ಲಿ ಪ್ರಮುಖ ಆಧಾರವಾಗಿದೆ. ಮಳೆಗಾಲದ ಸಮಯ ಹೆಚ್ಚಿನ ದಿನಗಳಲ್ಲಿ ಇಲ್ಲಿನ ಜನರು ತಮ್ಮ ಸ್ವಂತ ವಾಹನಗಳನ್ನು ಹಳ್ಳದ ಇನ್ನೊಂದು ಬದಿಯಲ್ಲಿ ನಿಲ್ಲಿಸಿ ಕಾಲ್ನಡಿಗೆ ಮೂಲಕ ಸಂಕವನ್ನು ದಾಟಿ ಮನೆ ಸೇರುತ್ತಾರೆ. ಇದರಿಂದ ತೀರಾ ಅಗತ್ಯ ಸಂದರ್ಭ ಮನೆಗಳವರೆಗೆ ವಾಹನಗಳನ್ನು ಕೊಂಡೊಯ್ಯಲು ಸಾಧ್ಯವಾಗುವುದಿಲ್ಲ.

ಇಲ್ಲಿ ಸೇತುವೆ ನಿರ್ಮಾಣವಾದರೆ ಈ ಪ್ರದೇಶದ ಜನರ ಸಹಿತ ತಿಮ್ಮಯ್ಯ ಕಂಡ, ಅಡಿಯೇತೋಡಿ ಪ್ರದೇಶದ ಜನತೆಗೂ ಅನುಕೂಲವಾಗಲಿದೆ.ಪ್ರಸ್ತುತ ಈ ಹಳ್ಳವು ಒಣಗಿದೆ. ಆದರೆ ಮಳೆಗಾಲದಲ್ಲಿ ಮೇಲ್ಭಾಗದ ಗುಡ್ಡದಿಂದ ರಭಸವಾದ ನೀರು ಹರಿದು ಬರುವುದರಿಂದ ಈ ಹಳ್ಳದ ಮೂಲಕ ಭಾರಿ ಪ್ರಮಾಣದಲ್ಲಿ ನೀರು ನದಿಯನ್ನು ಸೇರುತ್ತದೆ.

ಮಳೆಗಾಲದ ಸಮಯ ಈ ಹಳ್ಳವನ್ನು ದಾಟುವುದು ಅಪಾಯಕಾರಿ. ಸಂಕದಮೂಲಕ ಸಂಚರಿಸುವಾಗಲೂ ತೀರಾ ಎಚ್ಚರ ಅಗತ್ಯ. ಹಳ್ಳದ ಸುತ್ತಲೂ ಜಾರುವ ಬಂಡೆಗಳು ಇವೆ. ಮಳೆಗಾಲದಲ್ಲಿ ಸಂಪರ್ಕ ರಸ್ತೆಯು ತೀರಾ ಹದಗೆಡುತ್ತದೆ. ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಸಂಚರಿಸುವುದೇ ಸವಾಲು.

ಕಜಕ್ಕೆ ಪರಿಸರದ ಸಂಪರ್ಕಕ್ಕೆ ಸೇತುವೆ ನಿರ್ಮಿಸುವ ಕುರಿತು ಜನಪ್ರತಿನಿಧಿಗಳ ಗಮನಕ್ಕೆ ಸಾಕಷ್ಟು ಬಾರಿ ತರಲಾಗಿದೆ. ಮಳೆಗಾಲದ ಕೆಲವು ದಿನ ನಮ್ಮ ಪರಿಸ್ಥಿತಿ ದ್ವೀಪವಾಸಿಗಳಂತೆ ಆಗುತ್ತದೆ. ಶಾಲೆಗಳಿಗೆ ಮಕ್ಕಳನ್ನು ಹೆಚ್ಚಿನವರು ಹಾಸ್ಟೆಲ್ ಅಥವಾ ಇತರೆಡೆಗಳಿಂದ ಕಳುಹಿಸುವುದು ಅನಿವಾರ್ಯವಾಗಿದೆ

- ಪಾಂಡುರಂಗ, ಸ್ಥಳೀಯರು, ಕಜಕ್ಕೆ ಮಲವಂತಿಗೆ