ಸಾರಾಂಶ
ಕೆಎಚ್‌ಬಿ ಬಡಾವಣೆ ನಿರ್ಮಾಣವಾಗಿ ೨೦ ವರ್ಷ ಕಳೆದರೂ ಬಡಾವಣೆಗೆ ಕುಡಿಯುವ ಕಾವೇರಿ ನೀರು ಪೂರೈಕೆ ಮಾಡಿಲ್ಲ. ರಸ್ತೆಗಳಲ್ಲಿ ಗಿಡ ಗಂಟಿಗಳು ಬೆಳೆದು ರಸ್ತೆಯನ್ನು ಆವರಿಸಿವೆ. ಚರಂಡಿ ಹಾಗೂ ಯುಜಿಡಿಗಳಿಲ್ಲ. ವಿದ್ಯುತ್ ಬಲ್ಪ್ ಗಳಿಲ್ಲ. ಇದರಿಂದ ಬಡಾವಣೆ ಜನ ರಾತ್ರಿಯಾದರೆ ಓಡಾಡುವುದೇ ಕಷ್ಟವಾಗಿದೆ. ಆದ್ದರಿಂದ ತಾವು ಬಡಾವಣೆಯಲ್ಲಿ ಜನಸಂಪರ್ಕ ಸಭೆ ಮಾಡಬೇಕೆಂದು ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಕಾವೇರಿ ನೀರು ಸೇರಿದಂತೆ ಕೆಎಚ್‌ಬಿ ಬಡಾವಣೆಯು ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ಈ ಸಂಬಂಧ ಬಡಾವಣೆ ನಿವಾಸಿಗಳು ಶಾಸಕ ಪಿ.ರವಿಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.ಕೆಎಚ್‌ಬಿ ಬಡಾವಣೆ ನಿರ್ಮಾಣವಾಗಿ ೨೦ ವರ್ಷ ಕಳೆದರೂ ಬಡಾವಣೆಗೆ ಕುಡಿಯುವ ಕಾವೇರಿ ನೀರು ಪೂರೈಕೆ ಮಾಡಿಲ್ಲ. ರಸ್ತೆಗಳಲ್ಲಿ ಗಿಡ ಗಂಟಿಗಳು ಬೆಳೆದು ರಸ್ತೆಯನ್ನು ಆವರಿಸಿವೆ. ಚರಂಡಿ ಹಾಗೂ ಯುಜಿಡಿಗಳಿಲ್ಲ. ವಿದ್ಯುತ್ ಬಲ್ಪ್ ಗಳಿಲ್ಲ. ಇದರಿಂದ ಬಡಾವಣೆ ಜನ ರಾತ್ರಿಯಾದರೆ ಓಡಾಡುವುದೇ ಕಷ್ಟವಾಗಿದೆ. ಆದ್ದರಿಂದ ತಾವು ಬಡಾವಣೆಯಲ್ಲಿ ಜನಸಂಪರ್ಕ ಸಭೆ ಮಾಡಬೇಕೆಂದು ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಶಾಸಕ ಪಿ.ರವಿಕುಮಾರ್ ಅವರು, ಮೇ ೨೧ ರಂದು ಬೆಳಗ್ಗೆ ೧೦ ಗಂಟೆಗೆ ಕಾವೇರಿ ಭವನದಲ್ಲಿ ನಗರಸಭೆ, ಕರ್ನಾಟಕ ಗೃಹಮಂಡಳಿ ಹಾಗೂ ವಾಟರ್ ಬೋರ್ಡ್ ಅಧಿಕಾರಿಗಳನ್ನು ಸಭೆ ಕರೆದಿದ್ದೇನೆ. ಎಲ್ಲಿ ಲೋಪವಾಗಿದೆ. ಸಮಸ್ಯೆ ನಿವಾರಣೆಗೆ ಅನುಸರಿಸಬೇಕಾದ ಕ್ರಮಗಳೇನು ಎಂಬ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.ಸ್ಥಳದಲ್ಲಿಯೇ ನಗರಸಭೆ ಆಯುಕ್ತರಾದ ಪಂಪಾಶ್ರೀ ಅವರಿಗೆ ದೂರವಾಣಿ ಕರೆ ಮಾಡಿ, ಡಿಸಿಎಂ ಡಿ.ಕೆ.ಶಿವಕುಮಾರ್ ಕೆಎಚ್‌ಬಿ ಬಡಾವಣೆಗೆ ಆಗಮಿಸುತ್ತಿದ್ದಾರೆ. ರಸ್ತೆಗಳಲ್ಲಿ ಬೆಳೆದು ನಿಂತಿರುವ ಗಿಡ ಗಂಟಿಗಳನ್ನು ತೆರವುಗೊಳಿಸುವಂತೆ ಸೂಚಿಸಿದರು.
ಹೊಳಲು ರಸ್ತೆಯಿಂದ ಕೆಎಚ್‌ಬಿ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸಂಚಾರ ಮಾಡಲಾಗುತ್ತಿಲ್ಲ. ಆದ್ದರಿಂದ ಆ ರಸ್ತೆ ಕಾಮಗಾರಿ ಹಮ್ಮಿಕೊಂಡು ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.ಕೆಎಚ್‌ಬಿ ಮಹಾರಾಜನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹರೀಶ್, ಗೌರವಾಧ್ಯಕ್ಷ ಸಿ.ಶ್ರೀಕಾಂತ್, ಸಂಘಟನಾ ಕಾರ್ಯದರ್ಶಿ ಸಂತೋಷ್ ಜಿ.ಆರ್. ಪತ್ರಕರ್ತ ಸೋಮಶೇಖರ್ ಹಾಗೂ ರವಿ, ಸತೀಶ್, ಶ್ರೀನಿವಾಸ್, ಪ್ರಸನ್ನ ಸೇರಿದಂತೆ ಬಡಾವಣೆಯ ನಿವಾಸಿಗಳು ಹಾಜರಿದ್ದರು.