ಸಾರಾಂಶ
ಮಲ್ಲಿಕ್ಯಾತನಹಳ್ಳಿಯಲ್ಲಿ ಸರ್ವೇ ನಂ.375ರ ಸರ್ಕಾರಿ ಭೂಮಿಯಲ್ಲಿ ವಾಸವಾಗಿರುವ 42 ಬಡ ಕುಟುಂಬಗಳು ಹಿಂದೆ ನಮೂನೆ 94ಸಿ ಅಡಿಯಲ್ಲಿ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿ ಮತ್ತು ರಾಜಸ್ವ ನಿರೀಕ್ಷಕರ ಸುಳ್ಳು ವರದಿಯಿಂದ ಅರ್ಜಿಗಳು ತಿರಸ್ಕೃತಗೊಂಡಿವೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಹಕ್ಕುಪತ್ರ ವಿತರಣೆ ಸೇರಿದಂತೆ ವಿವಿಧ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿ ತಾಲೂಕಿನ ಮಲ್ಲಿಕ್ಯಾತನಹಳ್ಳಿ ನಿವಾಸಿಗಳು ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಪಟ್ಟಣದ ಸಾರಿಗೆ ಬಸ್ ನಿಲ್ದಾಣದಿಂದ ನೂರಾರು ಮಂದಿ ಪ್ರತಿಭಟನಾಕಾರರು ತಾಲೂಕು ಕಚೇರಿಗೆ ತೆರಳಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಪಟ್ಟಣದ ತಾಲೂಕು ಕಚೇರಿ ಎದುರು ಸಾಮೂಹಿಕವಾಗಿ ಒಲೆ ಹೂಡಿ ಅಡುಗೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.
ಸಂಘದ ತಾಲೂಕು ಅಧ್ಯಕ್ಷ ಎನ್.ಎಲ್.ಭರತ್ ರಾಜ್ ಮಾತನಾಡಿ, ಮಲ್ಲಿಕ್ಯಾತನಹಳ್ಳಿಯಲ್ಲಿ ಸರ್ವೇ ನಂ.375ರ ಸರ್ಕಾರಿ ಭೂಮಿಯಲ್ಲಿ ವಾಸವಾಗಿರುವ 42 ಬಡ ಕುಟುಂಬಗಳು ಹಿಂದೆ ನಮೂನೆ 94ಸಿ ಅಡಿಯಲ್ಲಿ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿ ಮತ್ತು ರಾಜಸ್ವ ನಿರೀಕ್ಷಕರ ಸುಳ್ಳು ವರದಿಯಿಂದ ಅರ್ಜಿಗಳು ತಿರಸ್ಕೃತಗೊಂಡಿವೆ. ನ್ಯಾಯಕ್ಕಾಗಿ ಹೋರಾಟ ನಡೆಸಿದ್ದ ಸಂಘಟನೆಯ ಮುಖಂಡರು ಸೇರಿದಂತೆ 35 ಜನರ ಮೇಲೆ ಪೊಲೀಸರು ಕೇಸು ದಾಖಲಿಸಿಕೊಂಡು ಜನವಿರೋಧಿ ನೀತಿಯನ್ನು ಪ್ರದರ್ಶಿಸಿದ್ದರು ಎಂದು ಕಿಡಿಕಾರಿದರು.ನಿರಂತರ ಹೋರಾಟದಿಂದಾಗಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಹಿಂದೆ ತಿರಸ್ಕೃತಗೊಂಡಿದ್ದ ನಮೂನೆ 94ಸಿ ಅರ್ಜಿಯನ್ನು ಪುರಸ್ಕರಿಸುವಂತೆ ನಿವಾಸಿಗಳಿಂದ ಮೇಲ್ಮನವಿ ಪಡೆದು ದಂಡ( ಕಿಮ್ಮತ್ತು) ಕಟ್ಟಿಸಿಕೊಂಡು ಹಕ್ಕುಪತ್ರ ಸಿದ್ಧಪಡಿಸಲಾಗಿದೆ ಎನ್ನಲಾಗಿದೆ. ಆದರೆ, ಹಕ್ಕುಪತ್ರ ಸಿದ್ಧವಾಗಿ ಮೂರು ತಿಂಗಳು ಕಳೆದರೂ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದರು.
ಸ್ಥಳಕ್ಕೆ ಬಂದ ತಹಸೀಲ್ದಾರ್ ಎಸ್.ವಿ.ಲೋಕೇಶ್, ತಾಪಂ ಇಒ ಎಚ್.ಜಿ.ಶ್ರೀನಿವಾಸ್ ಮನವಿ ಸ್ವೀಕರಿಸಿ ಶೀಘ್ರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಮುಖಂಡರಾದ ಎನ್.ಲಿಂಗರಾಜು ಮೂರ್ತಿ, ಗುರುಸ್ವಾಮಿ, ಸುಶೀಲ, ಮಹದೇವಯ್ಯ,ಶಿವಕುಮಾರ್, ಸಣ್ಣಶೆಟ್ಟಿ, ಸಿದ್ದರಾಜು, ಚಿಕ್ಕಸ್ವಾಮಿ, ಹಿಪ್ಪುಲ್ಲಾ, ಸತೀಶ್,ವಿಷಕಂಠ, ರಾಜು ಸೇರಿದಂತೆ ಇತರರು ಇದ್ದರು.ಫೆ.೭ರಂದು ಕುವೆಂಪು ಭಾವಗೀತೆಗಳ ಗಾಯನ ಸ್ಪರ್ಧೆ
ಮಂಡ್ಯ: ಕದಂಬ ಸೈನ್ಯಯಿಂದ ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ ಅಂಗವಾಗಿ ಫೆ.೭ರಂದು ನಗರದ ಹರ್ಡಿಕರ್ ಭವನದಲ್ಲಿ ಬೆಳಗ್ಗೆ ೧೦ ಗಂಟೆಗೆ ಕುವೆಂಪುರವರ ಭಾವಗೀತೆಗಳ ಗಾಯನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಗಾಯನ ಸ್ಪರ್ಧೆಲ್ಲಿ ಭಾಗವಹಿಸುವ ಆಸಕ್ತರು ಫೆ.೪ ರೊಳಗೆ ತಮ್ಮ ಹೆಸರುಗಳನ್ನು ಸಂಘಟನೆಯ ಜಿಲ್ಲಾ ಸಂಚಾಲಕ ಸಲ್ಮಾನ್ ಮತ್ತು ಜೋಸೆಫ್ ರಾಮು ಕೀಲಾರ, ಉಮ್ಮಡಹಳ್ಳಿ ನಾಗೇಶ್ ಅವರನ್ನು ಸಂಪರ್ಕಿಸುವಂತೆ ಕೋರಲಾಗಿದೆ. ಗಾಯನ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಪ್ರಶಸ್ತಿ ಮತ್ತು ವಿಶೇಷ ಪ್ರಶಸ್ತಿ ನೀಡಿಗೌರವಿಸಲಾಗುವುದು. ಭಾಗವಹಿಸುವ ಎಲ್ಲರಿಗೂ ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ಸೈನ್ಯದ ಜಿಲ್ಲಾ ಸಂಚಾಲಕ ಸಲ್ಮಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.