ಇಬ್ಬರು ಬ್ಲಾಕ್ ಅಧ್ಯಕ್ಷರ ರಾಜೀನಾಮೆ, ಕಾಂಗ್ರೆಸ್‌ನಲ್ಲಿ ಬಿರುಗಾಳಿ

| Published : May 22 2024, 12:48 AM IST / Updated: May 22 2024, 12:49 AM IST

ಸಾರಾಂಶ

ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಇತ್ತೀಚೆಗೆ ರಾಜೀನಾಮೆ ನೀಡಿದ್ದರೆ, ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ ಮಂಗಳವಾರ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ.

ಕಾರವಾರ: ಸಿದ್ದಾಪುರ ಹಾಗೂ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ರಾಜೀನಾಮೆ ನೀಡಿದ್ದು, ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಪಕ್ಷದಲ್ಲಿ ಬಿರುಗಾಳಿ ಎದ್ದಿದೆ.ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಇತ್ತೀಚೆಗೆ ರಾಜೀನಾಮೆ ನೀಡಿದ್ದರೆ, ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ ಮಂಗಳವಾರ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. ಜತೆಗೆ ಪಕ್ಷದ ಮುಖಂಡರ ನಡೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹಾಗೂ ಹಿರಿಯ ಮುಖಂಡ ಆರ್.ವಿ. ದೇಶಪಾಂಡೆ ಬಣಗಳ ನಡುವಣ ಭರಾಟೆಯಲ್ಲಿ ಜಗದೀಪ ತೆಂಗೇರಿ ಅವರಿಗೆ ಕೆಲಸ ನಿಭಾಯಿಸುವುದು ಕಷ್ಟಕರವಾಗಿತ್ತು. ವಿಧಾನಸಭೆ ಚುನಾವಣೆಯಲ್ಲಿ ಕುಮಟಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ನಿವೇದಿತ ಆಳ್ವಾ ಹೊನ್ನಾವರದ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಪಕ್ಷ ಸಂಘಟನೆ, ಪಕ್ಷದ ಹುದ್ದೆಗಳ ನೇಮಕಾತಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಗಮನಕ್ಕೆ ಬಾರದೆ ನಡೆಯುತ್ತಿತ್ತು ಎನ್ನುವುದೂ ಮೂಲಗಳಿಂದ ದೊರೆತಿರುವ ಮಾಹಿತಿ. ಸದ್ಯಕ್ಕಂತೂ ಇಬ್ಬರು ರಾಜೀನಾಮೆ ನೀಡಿದ್ದಾರೆ. ಪಕ್ಷ ಇದನ್ನು ಹೇಗೆ ನಿಭಾಯಿಸಲಿದೆ ಎಂದು ಕಾದು ನೋಡಬೇಕಾಗಿದೆ.ವೈಯಕ್ತಿಕ ಕಾರಣ: ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ಅಂಗೀಕರಿಸಿಲ್ಲ. ಮಾತುಕತೆ ನಡೆಸುತ್ತೇವೆ. ಹೊನ್ನಾವರ ಬ್ಲಾಕ್ ಅಧ್ಯಕ್ಷರು ರಾಜೀನಾಮೆ ನೀಡಿರುವುದು ತಮ್ಮ ಗಮನಕ್ಕೆ ಬಂದಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ ತಿಳಿಸಿದ್ದಾರೆ.ಪಕ್ಷದ ವರಿಷ್ಠರ ನಡೆಯ ಬಗ್ಗೆ ಅಸಮಾಧಾನ

ಹೊನ್ನಾವರ: ನಾವು ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಅಪೇಕ್ಷಿಸಿದರೇ, ಪ್ರಬಲ ಜಾತಿಗಳಿಗೆ ಪ್ರಥಮ ಆದ್ಯತೆ ನೀಡುವುದರಿಂದ ಪಕ್ಷಕ್ಕೆ ಅನುಕೂಲವಾಗಲಿದ್ದು, ನಿಮ್ಮದು ಚಿಕ್ಕ ಸಮಾಜ ಅನ್ನುವ ಉಡಾಫೆ ಮಾತು ಪಕ್ಷದ ಕೆಲ ನಾಯಕರ ಬಾಯಿಂದ ಕೇಳಿ ಬರುತ್ತಿದೆ. ಕೆಲಸಕ್ಕೆ ನಾವು, ಅಧಿಕಾರಕ್ಕೆ ಇನ್ನೊಬ್ಬರು ಅನ್ನುವ ತತ್ವ ಇದರಲ್ಲಿ ಅಡಗಿದಂತಿದೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ನೋವಿನಿಂದ ನುಡಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಕ್ಷಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿ, ಜೀವನದುದ್ದಕ್ಕೂ ತನು- ಮನ- ಧನ ಸಮರ್ಪಿಸಿ, ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯವನ್ನು ಸ್ವಂತ ಖರ್ಚಿನಲ್ಲಿ ನಿರ್ವಹಿಸಿ, ಬಾಡಿಗೆ ಮನೆಯಲ್ಲಿ ಬದುಕುವ ನಮ್ಮಂಥವರಿಗೂ ಜಾತಿ ಮಾನದಂಡ ಮಾಡುವುದು ಸರಿಯೇ? ಪಟ್ಟಣದಲ್ಲಿ ನನ್ನ ಸಮಾಜದ ಬೆರಳೆಣಿಕೆಯಷ್ಟು ಮನೆಯಿದ್ದರೂ ಯಾರಿಗೂ ನನ್ನ ಜಾತಿ ಯಾವುದೆಂದು ಇದುವರೆಗೂ ತಿಳಿದಿಲ್ಲ. ನಮ್ಮ ಮಾನವೀಯ ಅಂತಃಕರಣದ ನೆರಳಲ್ಲಿ ಹೊನ್ನಾವರವೆಂಬ ನಗರದಲ್ಲಿ ಪಕ್ಷಾತೀತವಾಗಿ ನನ್ನನ್ನು ವೈಯಕ್ತಿಕವಾಗಿ ಪ್ರೀತಿಸುತ್ತಾರೆ. ಕಳೆದ ಕೆಲವು ತಿಂಗಳ ಹಿಂದೆ ಯಾವುದಾದರೂ ಸರ್ಕಾರಿ ನಾಮನಿರ್ದೇಶನಕ್ಕೆ ಅರ್ಜಿ ಸಲ್ಲಿಸುವಂತೆ ಪಕ್ಷ ನನಗೆ ಸೂಚಿಸಿತ್ತು. ಅದರಂತೆ ನಾನು ಪಕ್ಷದ ಹಿರಿಯ ಮುಖಂಡರೊಬ್ಬರ ಹೆಸರನ್ನು ರಾಜ್ಯ ಸಮಿತಿಗೆ ಮತ್ತು ನನ್ನ ಹೆಸರನ್ನು ಜಿಲ್ಲಾ ಕೆಡಿಪಿ ಸದಸ್ಯತ್ವಕ್ಕೆ ವಿನಂತಿಸಿದ್ದೆ. ಯಾವುದೇ ವಿಶೇಷ ಸವಲತ್ತು ಇರದ ಈ ಸಮಿತಿಯಲ್ಲಿ ಸೇರಿದರೇ, ಪಕ್ಷದ ಶಾಸಕರಿಲ್ಲದ ನಮ್ಮ ಭಾಗದಲ್ಲಿ ಕಾರ್ಯಕರ್ತರ ಸಮಸ್ಯೆಯನ್ನು ಮೂರು ತಿಂಗಳಿಗೊಮ್ಮೆ ನಡೆಯುವ ತ್ರೈಮಾಸಿಕ ಸಭೆಯಲ್ಲಿ ಅಧಿಕಾರಸ್ಥರ ಗಮನ ಸೆಳೆಯಬಹುದು ಅನ್ನುವುದು ನನ್ನ ಉದ್ದೇಶವಾಗಿತ್ತು. ಆದರೆ ಪಕ್ಷಕ್ಕಾಗಿ ೪೦ ವರ್ಷ ದುಡಿದ ನನ್ನ ಹೆಸರನ್ನು ಕೈ ಬಿಟ್ಟು, ನಮ್ಮ ಭಾಗದಲ್ಲಿ ಪಕ್ಷದ ಪ್ರಾಥಮಿಕ ಸದಸ್ಯರಲ್ಲದವರನ್ನು ಕೆಡಿಪಿ ಸದಸ್ಯರನ್ನಾಗಿ ಮಾಡಿರುವುದು ಸರಿಯೇ ಎಂದು ಪ್ರಶ್ನಿಸಿದರು.ಕನಿಷ್ಠ ಸೌಜನ್ಯಕ್ಕೂ ನನ್ನ ಬಳಿ ಯಾರೂ ಚರ್ಚಿಸಿಲ್ಲ. ಇದರಿಂದ ತುಂಬಾ ನೋವು ಅನುಭವಿಸಿದ ನಾನು ಇತ್ತೀಚೆಗೆ ನಡೆದ ಪಕ್ಷದ ಸಭೆಯಲ್ಲಿ, ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಈ ಎಲ್ಲ ಬೆಳವಣಿಗೆಯ ಕುರಿತಂತೆ ಸವಿಸ್ತಾರವಾಗಿ ವಿವರಿಸಿ, ಮುಂದಿನ ದಿನದಲ್ಲಿ ಸರ್ಕಾರದ ಯಾವುದೇ ಲಾಭದಾಯಕ ಹುದ್ದೆ, ಸ್ಥಾನಮಾನ, ನಾಮನಿರ್ದೆಶನ ಸ್ವೀಕರಿಸುವುದಿಲ್ಲ ಎಂದು ಪ್ರಮಾಣ ಮಾಡಿದ್ದೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಉಪಾಧ್ಯಕ್ಷ ದಾಮೋದರ ನಾಯ್ಕ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಾಲಚಂದ್ರ ನಾಯ್ಕ, ಬ್ಲಾಕ್ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಕುಪ್ಪು ಗೌಡ, ಬ್ಲಾಕ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಕೃಷ್ಣ ಹರಿಜನ, ಬ್ಲಾಕ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಜಕ್ರಿಯ್ಯಾ ಶೇಖ, ಇಂಟೆಕ್ ಜಿಲ್ಲಾ ಕಾರ್ಯದರ್ಶಿ ಕೇಶವ ಮೇಸ್ತ ಇತರರು ಇದ್ದರು.