ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
‘ಹೈಕೋರ್ಟ್ ನನ್ನ ಬಗೆಗಿನ ದೂರಿನ ಬಗ್ಗೆ ತನಿಖೆಗೆ ಅನುಮತಿ ನೀಡಿದೆ ಎಂದಾಕ್ಷಣ ನಾನು ತಪ್ಪು ಮಾಡಿದ್ದೇನೆ ಎಂದಾಗುವುದಿಲ್ಲ. ಹೈಕಮಾಂಡ್, ಶಾಸಕರು ಹಾಗೂ ಜನರು ಎಲ್ಲಾ ನನ್ನ ಬೆನ್ನ ಹಿಂದೆ ಬಂಡೆಯಂತೆ ನಿಂತಿದ್ದಾರೆ. ಹೀಗಾಗಿ ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.ಜೆಡಿಎಸ್-ಬಿಜೆಪಿಯ ಪಿತೂರಿಗೆ ಹೆದರುವ ಪ್ರಶ್ನೆಯೇ ಇಲ್ಲ. ಯಾವುದೇ ತನಿಖೆಗೆ ನಾನು ಎದೆಗುಂದುವುದಿಲ್ಲ. ಕೋರ್ಟ್ ಆದೇಶದ ಬಗ್ಗೆ ಕಾನೂನು ತಜ್ಞರು, ಪಕ್ಷದ ನಾಯಕರು ಹಾಗೂ ಹೈಕಮಾಂಡ್ ಜತೆ ಚರ್ಚಿಸಿ ಮುಂದಿನ ಕಾನೂನು ಹಾಗೂ ರಾಜಕೀಯ ಹೋರಾಟ ಮಾಡುತ್ತೇವೆ. ಈ ಹೋರಾಟದಲ್ಲಿ ಸತ್ಯಕ್ಕೆ ಅಂತಿಮ ಜಯ ಸಿಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಮುಡಾ ಪ್ರಕರಣ ಕುರಿತು ಹೈಕೋರ್ಟ್ ಆದೇಶದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಮೊದಲ ಪ್ರತಿಕ್ರಿಯೆ ನೀಡಿದ ಅವರು, ಈ ರಾಜಕೀಯ ಹೋರಾಟದಲ್ಲಿ ರಾಜ್ಯದ ಜನ ನನ್ನ ಹಿಂದೆ ಇದ್ದಾರೆ. ಅವರ ಆಶೀರ್ವಾದವೇ ನನಗೆ ಶ್ರೀರಕ್ಷೆ. ನಮ್ಮ ಪಕ್ಷದ ಎಲ್ಲ ಶಾಸಕರು, ನಾಯಕರು ಮತ್ತು ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಹೈಕಮಾಂಡ್ ನನ್ನ ಪರವಾಗಿ ಭದ್ರವಾಗಿ ಬಂಡೆಯಂತೆ ನಿಂತಿದ್ದು, ಹೋರಾಟ ಮುಂದುವರೆಸಲು ಉತ್ತೇಜನ ನೀಡಿದ್ದಾರೆ ಎಂದು ಹೇಳಿದರು.ಸರ್ಕಾರ ಅಲುಗಾಡಿಸಲು ಷಡ್ಯಂತ್ರ:ದೇಶಾದ್ಯಂತ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರತಿಪಕ್ಷಗಳ ಸರ್ಕಾರದ ಮೇಲೆ ಸೇಡಿನ ರಾಜಕೀಯ ಮಾಡುತ್ತಿದೆ. ನಮ್ಮಲ್ಲೂ 136 ಶಾಸಕರ ಬೆಂಬಲದೊಂದಿಗೆ ರಚಿಸಿರುವ ಸರ್ಕಾರ ಅಸ್ಥಿರಗೊಳಿಸಲು ಆಪರೇಷನ್ ಕಮಲಕ್ಕೆ ಯತ್ನಿಸಿದರು. ಆದರೆ ನಮ್ಮ ಶಾಸಕರು ಸಂಚಿಗೆ ಬಲಿಯಾಗಲಿಲ್ಲ. ಹೀಗಾಗಿ ಮುಡಾ ಹೆಸರಿನಲ್ಲಿ ರಾಜ್ಯದಲ್ಲೂ ಸರ್ಕಾರ ಅಲುಗಾಡಿಸಲು, ಕಪ್ಪು ಮಸಿ ಬಳಿಯಲು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸೇರಿಕೊಂಡು ರಾಜಭವನವನ್ನು ದುರುಪಯೋಗ ಮಾಡಿಕೊಂಡು ಷಡ್ಯಂತ್ರದ ಮೂಲಕ ಸಂಚು ನಡೆಸಿದ್ದಾರೆ ಎಂದು ಆರೋಪಿಸಿದರು.
ನನ್ನ ವಿರುದ್ಧ ಪ್ರತೀಕಾರಕ್ಕೆ ಯತ್ನ:ನಾನು ಬಡವರ ಪರವಾಗಿದ್ದೇನೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದೇನೆ ಎನ್ನುವ ಕಾರಣಕ್ಕಾಗಿ ನನ್ನ ವಿರುದ್ಧ ಬಿಜೆಪಿ, ಜೆಡಿಎಸ್ ರಾಜಕೀಯ ಪ್ರತೀಕಾರಕ್ಕೆ ಇಳಿದಿವೆ. ನನ್ನ 40 ವರ್ಷದ ರಾಜಕೀಯ ಜೀವನದುದ್ದಕ್ಕೂ ಇಂತಹ ಸೇಡು, ಸಂಚಿನ ರಾಜಕೀಯವನ್ನು ಎದುರಿಸಿದ್ದೇನೆ. ರಾಜ್ಯದ ಜನರ ಆಶೀರ್ವಾದ, ಹಾರೈಕೆಯ ಬಲದಿಂದ ಗೆಲ್ಲುತ್ತಾ ಬಂದಿದ್ದೇನೆ. ಈ ಹೋರಾಟವನ್ನೂ ಜನತೆಯ ಆಶೀರ್ವಾದದ ಬಲದಿಂದ ಗೆಲ್ಲುತ್ತೇನೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.ಗ್ಯಾರಂಟಿ ನಿಲ್ಲಿಸುವುದು ಉದ್ದೇಶ:ಬಡವರು ಮತ್ತು ಶೋಷಿತರ ಪರವಾಗಿರುವ ನಮ್ಮ ಸರ್ಕಾರದ ಯೋಜನೆಗಳನ್ನು ನಿಲ್ಲಿಸಬೇಕೆಂಬುದೇ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮುಖ್ಯ ಉದ್ದೇಶ. ಬಿಜೆಪಿ-ಜೆಡಿಎಸ್‌ಗೆ ಮುಡಾ ಪ್ರಕರಣ ಒಂದು ನೆಪ ಅಷ್ಟೇ. ಮುಡಾ ಪ್ರಕರಣವನ್ನು ಸೃಷ್ಟಿಸಿ, ಅದರ ಮೂಲಕ ಸುಳ್ಳು ಆರೋಪ ಮಾಡಿ ನನ್ನ ರಾಜೀನಾಮೆ ಕೇಳುತ್ತಿರುವ ಇದೇ ನಾಯಕರು ಬಡವರ ಪರ ಯೋಜನೆಗಳನ್ನು ವಿರೋಧಿಸಿದ್ದರು ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ನಾನು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಅನ್ನಭಾಗ್ಯ, ಕ್ಷೀರ ಭಾಗ್ಯ, ಕ್ಷೀರ ಧಾರೆ, ವಿದ್ಯಾಸಿರಿ, ಕೃಷಿಭಾಗ್ಯ, ಪಶುಭಾಗ್ಯ, ಇಂದಿರಾ ಕ್ಯಾಂಟೀನ್ ಯೋಜನೆಗಳನ್ನು ವಿರೋಧಿಸಿದ್ದರು. ಎಸ್ಸಿಪಿ/ಟಿಎಸ್‌ಪಿ ಕಾಯ್ದೆ ವಿರೋಧಿಸಿದ್ದರು. ಇದೀಗ ಗ್ಯಾರಂಟಿಗಳನ್ನು ನಿಲ್ಲಿಸಲು ಸರ್ಕಾರ ಅಸ್ಥಿರಕ್ಕೆ ಮುಂದಾಗಿದ್ದಾರೆ. ರಾಜ್ಯದ ಜನತೆ ಈ ನಾಯಕರ ಮುಖವನ್ನು ನೆನಪಿಟ್ಟುಕೊಳ್ಳಬೇಕು ಎಂದು ಕರೆ ನೀಡಿದರು.------