ಸಭಾಪತಿ ಸ್ಥಾನಕ್ಕೆ ಆ.14ರಂದು ರಾಜೀನಾಮೆ ನೀಡುವುದಾಗಿ ಹೇಳಿದ್ದೆ. ಈ ಕುರಿತು ಒಪ್ಪಂದವೂ ಆಗಿತ್ತು. ಆ.7ರಂದೇ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಸಾಕಷ್ಟು ಒತ್ತಡ ಹೇರಿದ್ದರಿಂದ ಅನಿವಾರ್ಯವಾಗಿ ರಾಜೀನಾಮೆ ನೀಡಬೇಕಾಯಿತು.
ಹುಬ್ಬಳ್ಳಿ:
ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದರೂ ಮುಖ್ಯಮಂತ್ರಿ ಒತ್ತಡ ಹೇರಿ ಒತ್ತಾಯ ಪೂರ್ವಕವಾಗಿ ರಾಜೀನಾಮೆ ಕೊಡುವಂತೆ ಮಾಡಿದರು. ರಾಜೀನಾಮೆ ಪತ್ರವನ್ನೂ ಟೈಪ್ ಮಾಡಿಸಿಕೊಂಡು ಬಂದು ಸಹಿ ಮಾಡುವಂತೆ ಒತ್ತಡ ಹಾಕಿದರು ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಆರೋಪಿಸಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭಾಪತಿ ಸ್ಥಾನಕ್ಕೆ ಆ.14ರಂದು ರಾಜೀನಾಮೆ ನೀಡುವುದಾಗಿ ಹೇಳಿದ್ದೆ. ಈ ಕುರಿತು ಒಪ್ಪಂದವೂ ಆಗಿತ್ತು. ಆ.7ರಂದೇ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಸಾಕಷ್ಟು ಒತ್ತಡ ಹೇರಿದ್ದರಿಂದ ಅನಿವಾರ್ಯವಾಗಿ ರಾಜೀನಾಮೆ ನೀಡಬೇಕಾಯಿತು ಎಂದರು. ನಾನು ಆಸ್ಪತ್ರೆಯಲ್ಲಿದ್ದಾಗಲೂ ದೂರವಾಣಿ ಮೂಲಕ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು. ನನ್ನ ಮುಂದೆಯೇ ರಾಜೀನಾಮೆ ಪತ್ರವನ್ನು ಟೈಪ್ ಮಾಡಿಕೊಂಡು ಬಂದು ಅದಕ್ಕೆ ಸಹಿ ಮಾಡುವಂತೆ ಒತ್ತಾಯಿಸಿದರು. ಪರಿಸ್ಥಿತಿಯ ಕಾರಣದಿಂದಾಗಿ ರಾಜೀನಾಮೆ ನೀಡಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ನಡೆ ತಮ್ಮ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಇನ್ನು ಮುಂದೆ ಸಾಮಾನ್ಯ ಸದಸ್ಯನಾಗಿ ಸದನದಲ್ಲಿ ಭಾಗವಹಿಸುತ್ತೇನೆ ಎಂದರು.ಒತ್ತಾಯಪೂರ್ವಕ ರಾಜೀನಾಮೆ ಸರಿಯಲ್ಲ: ಅಲ್ಕೋಡ
ಹುಬ್ಬಳ್ಳಿಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ ಅವರ ರಾಜೀನಾಮೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಒತ್ತಾಯ ಪೂರ್ವಕವಾಗಿ ಪಡೆದಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನ ಪರಿಷತ್ ಹಿರಿಯರ ಮನೆ, ಇದು ತನ್ನದೇ ಆದ ಗೌರವ, ಘನತೆ ಹೊಂದಿದೆ. ಪಕ್ಷಭೇದ ಮರೆತು ಎಲ್ಲರೂ ಇಲ್ಲಿ ನಾಡಿನ ಒಳಿತಿಗಾಗಿ ಚರ್ಚೆ ಮಾಡುವ ವೇದಿಕೆಯಾಗಿದೆ. ಯಾವುದೇ ಪಕ್ಷಪಾತ ಮಾಡದೇ ಸದನ ನಡೆಸುತ್ತಿದ್ದ ಹೊರಟ್ಟಿ ಅವರ ಅಧಿಕಾರಾವಧಿ ಪೂರ್ಣವಾಗುವ ವರೆಗೂ ತಡೆಯಬೇಕಿತ್ತು. ಅಲ್ಲದೇ ಪಕ್ಷದ ಲೆಟರ್ ಹೆಡ್‌ನಲ್ಲಿ ಸಭಾಪತಿ ಆಗುವವರ ಹೆಸರು ಬರೆದು ಕಳುಹಿಸಿರುವುದು ಹಿಂದಿನ ಸತ್ಸಂಪ್ರದಾಯಕ್ಕೆ ಮಾಡಿದ ಅಪಚಾರ ಎಂದರು.ಮೇಲ್ಮನೆ ಕಲಾಪ ವಿಚಾರದಲ್ಲಿ ಕರ್ನಾಟಕ ಇತರ ರಾಜ್ಯಗಳಿಗೆ ಮಾದರಿಯಾಗಿದೆ. ಇಂತಹ ಮನೆಯ ಮುಖ್ಯಸ್ಥರಾದ ಬಸವರಾಜ ಹೊರಟ್ಟಿ ಅವರ ಮೇಲೆ ಒತ್ತಡ ಹೇರಿರುವುದು ಸಂವಿಧಾನಕ್ಕೆ ಮಾಡಿದ ಅಗೌರವ. ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮತ್ತೊಮ್ಮೆ ಪರಿಶೀಲಿಸಬೇಕು. ಹೊರಟ್ಟಿ ಅವರ ಮನವೊಲಿಸಿ ಆ ಸ್ಥಾನದಲ್ಲಿ ಕುಳಿತುಕೊಳ್ಳಲು ಮನವಿ ಮಾಡಿ ಪರಿಷತ್ ಸ್ಥಾನ ಗೌರವ ಉಳಿಸಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಮೇಶ, ಸಾಧಿಕ್, ನವೀನಕುಮಾರ ಮಡಿವಾಳರ, ಮಂಜುನಾಥ ಸೇರಿದಂತೆ ಹಲವರಿದ್ದರು.