ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಹೊಸದುರ್ಗದ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶಾಖಾ ಮಠದಲ್ಲಿ 53 ಅಡಿ ಎತ್ತರದ ಏಕಶಿಲಾ ಕನಕಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ದೇಣಿಗೆ ಸಂಗ್ರಹಕ್ಕಾಗಿ ದಾವಣಗೆರೆ ಜಿಲ್ಲೆಯಲ್ಲಿ ನೂರು ದಿನ ಸಾವಿರ ಹಳ್ಳಿ ಒಂದು ಗುರಿ ಪ್ರವಾಸವನ್ನು ಜ.19ರಿಂದ 26ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕುರುಬ ಸಮಾಜದ ಮುಖಂಡ ಅಣಬೇರು ಶಿವಮೂರ್ತಿ ತಿಳಿಸಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.19ರ ಬೆಲಿಗ್ಗೆ 8.30ಕ್ಕೆ ತಾಲೂಕಿನ ಆಲೂರು ಗ್ರಾಮದಿಂದ ದೇಣಿಗೆ ಸಂಗ್ರಹ ಕಾರ್ಯಕ್ಕೆ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಚಾಲನೆ ನೀಡಲಿದ್ದು, ಗ್ರಾಮದ ತಾಯಂದಿರು ಪೂರ್ಣಕುಂಭ ಸ್ವಾಗತ ಕೋರಲಿದ್ದು, ನಂತರ ವಿವಿಧ ಗ್ರಾಮಗಳಿಗೆ ದೇಣಿಗೆ ಸಂಗ್ರಹ ತಂಡ ಸಾಗಲಿದೆ ಎಂದರು.
ಬೆಂಗಳೂರು ವಿಭಾಗೀಯ ಮಟ್ಟದಲ್ಲಿ ಎಲ್ಲಾ ಜಿಲ್ಲೆಗಳ ತಾಲೂಕುಗಳನ್ನು ಒಳಗೊಂಡಂತೆ ಒಂದು ಸಾವಿರ ಹಳ್ಳಿಗಳಿಗೆ ಭೇಟಿ ನೀಡುವ ಐತಿಹಾಸಿಕ ಕಾರ್ಯವನ್ನು ಶ್ರೀಗಳು ಕೈಗೊಂಡಿದ್ದಾರೆ. ಸಮಾಜ ಬಾಂಧವರು ಇರುವಂತ ಗ್ರಾಮಗಳಿಗೆ ಭೇಟಿ ನೀಡುವ ಮೂಲಕ ಶ್ರೀಮಠ ಹಾಗೂ ಸಮಾಜದ ಅಭಿವೃದ್ಧಿ ಕುರಿತಂತೆ ಮುಖಂಡರೊಂದಿಗೆ ಚರ್ಚೆ, ಸಂವಾದ, ಸಲಹೆ, ಸಹಕಾರ, ಪ್ರಗತಿ ಬಗ್ಗೆ ಮಾತನಾಡುವರು ಎಂದು ಅವರು ಹೇಳಿದರು.ಕನಕ ಪೀಠ ಶಾಖಾ ಮಠವಾದ ಹೊಸದುರ್ಗದ ಕನಕ ಧಾಮದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಮಾಲೋಚನೆ, ಆರ್ಥಿಕ ಸಂಪನ್ಮೂಲ ಕ್ರೋಢೀ ಕರಣ ಇತ್ಯಾದಿ ವಿಚಾರದ ಬಗ್ಗೆ ಸಮಾಜದ ಮುಖಂಡರು, ಸಮಾಜ ಬಾಂಧವರೊಂದಿಗೆ ಚರ್ಚಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಶ್ರೀಮಠವು ಈಗಾಗಲೇ 60 ಎಕರೆ ಜಮೀನು ಹೊಂದಿದ್ದು, 30 ಎಕರೆ ಪ್ರದೇಶದಲ್ಲಿ ವಿಶ್ವದಲ್ಲೇ ಅತೀ ಎತ್ತರವಾದ ಏಕಶಿಲಾ ಕನಕ ಪುತ್ಥಳಿ ಪ್ರತಿಷ್ಠಾಪಿಸಲು ಸಿದ್ಥತೆ ನಡೆಸ ಲಾಗಿದೆ ಎಂದು ಅವರು ತಿಳಿಸಿದರು.
ನೂತನವಾಗಿ ಶ್ರೀಮಠದ ಕಟ್ಟಡ, ಕಾಂಪೌಂಡ್ ನಿರ್ಮಾಣ, ಮೂರು ಮಹಾದ್ವಾರಗಳು, ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿ ನಿಲಯಗಳು, ಸುಮಾರು 4 ಸಾವಿರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣ ಕಾರ್ಯ ಸಾಗುತ್ತಿದೆ. ಈ ಎಲ್ಲಾ ಕಾರ್ಯಗಳು ಹಂತ ಹಂತವಾಗಿ ಆಗಬೇಕಿದೆ. ಪ್ರತಿ ಗ್ರಾಮದಿಂದ ಸಮಾಜ ಬಂಧುಗಳು ಮನೆಯೊಂದಕ್ಕೆ ಕನಿಷ್ಟ 1 ಸಾವಿರ ರು. ಕಾಣಿಗೆ ನೀಡುವ ಮೂಲಕ ಸಹಕರಿಸಬೇಕು. ಆಯಾ ಗ್ರಾಮದಲ್ಲಿ ಮುಖಂಡರು, ಬಂಧುಗಳಿಂದ ಕಾಣಿಕೆ ಸ್ವೀಕರಿಸಿ, ಪೂಜ್ಯರು ತಮ್ಮ ಗ್ರಾಮಕ್ಕೆ ಬಂದಾಗ ಗ್ರಾಮಸ್ಥರ ಸಮ್ಮುಖದಲ್ಲಿ ನೀಡಬೇಕು. ಲೆಕ್ಕಪತ್ರವನ್ನು ಗ್ರಾಮದಲ್ಲೇ ನೀಡಬೇಕು ಎಂದು ಅವರು ಮನವಿ ಮಾಡಿದರು.ಕುರುಬ ಸಮಾಜದ ಮುಖಂಡರಾದ ಬಿ.ಎಂ.ಸತೀಶ ಕೊಳೇನಹಳ್ಳಿ, ಮಾಯಕೊಂಡ ಎಸ್.ವೆಂಕಟೇಶ, ಬಿ.ಟಿ.ಹನುಮಂತಪ್ಪ, ಎನ್.ಜೆ.ನಿಂಗಪ್ಪ, ಎಸ್.ಎಸ್.ಗಿರೀಶ, ಕೆ.ಪರಶುರಾಮ, ಮುದಹದಡಿ ದಿಳ್ಯಪ್ಪ, ಎಚ್.ಜಿ.ಸಂಗಪ್ಪ ಪೈಲ್ವಾನ್, ಟಿ.ಬಿ.ಮಹಾಂತೇಶ ಇತರರು ಇದ್ದರು.
.