ಹಳೇ ಪಿಂಚಣಿಗಾಗಿ ಜನವರಿಯಲ್ಲಿ ರಾಜ್ಯಾದ್ಯಂತ ಹೋರಾಟಕ್ಕೆ ನಿರ್ಣಯ

| Published : Oct 08 2024, 01:03 AM IST

ಹಳೇ ಪಿಂಚಣಿಗಾಗಿ ಜನವರಿಯಲ್ಲಿ ರಾಜ್ಯಾದ್ಯಂತ ಹೋರಾಟಕ್ಕೆ ನಿರ್ಣಯ
Share this Article
  • FB
  • TW
  • Linkdin
  • Email

ಸಾರಾಂಶ

ಹಳೇ ಪಿಂಚಣಿ ಯೋಜನೆ ಮರುಜಾರಿಗೆ ಒತ್ತಾಯಿಸಿ ಬರುವ ಜನವರಿಯಲ್ಲಿ ರಾಜ್ಯಾದ್ಯಂತ ಹೋರಾಟ ಆರಂಭಿಸುವುದು ಸೇರಿದಂತೆ 3 ಪ್ರಮುಖ ನಿರ್ಣಗಳನ್ನು ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ವಿಶೇಷ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಲಾಯಿತು.

- ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ ಸಭೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಹಳೇ ಪಿಂಚಣಿ ಯೋಜನೆ ಮರುಜಾರಿಗೆ ಒತ್ತಾಯಿಸಿ ಬರುವ ಜನವರಿಯಲ್ಲಿ ರಾಜ್ಯಾದ್ಯಂತ ಹೋರಾಟ ಆರಂಭಿಸುವುದು ಸೇರಿದಂತೆ 3 ಪ್ರಮುಖ ನಿರ್ಣಗಳನ್ನು ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ವಿಶೇಷ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಲಾಯಿತು.

ನಗರದ ವಿದ್ಯಾನಗರದಲ್ಲಿರುವ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ, ಬೆಂಗಳೂರು ಮತ್ತು ದಾವಣಗೆರೆ ಜಿಲ್ಲಾ ಘಟಕದ ಸಹಯೋಗದಲ್ಲಿ ಆಯೋಜಿಸಿದ ಸಂಘದ ವಿಶೇಷ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ 500ಕ್ಕೂ ಹೆಚ್ಚು ಪದಾಧಿಕಾರಿಗಳೊಂದಿಗೆ ನಡೆಸಿದ ಚರ್ಚೆ, ಸಲಹೆ ಮತ್ತು ಅಭಿಪ್ರಾಯ ಆಲಿಸಿದ ನಂತರ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ್ ತೇಜ್ ಅವರು ಮಂಡಿಸಿದ ನಿರ್ಣಯಗಳನ್ನು ಸಭೆ ಸರ್ವಾನುಮತದಿಂದ ಅಂಗೀಕರಿಸಿತು.

ರಾಜ್ಯಾಧ್ಯಕ್ಷ ಶಾಂತಾರಾಮ್ ತೇಜ್ ಮಾತನಾಡಿ, ಸರ್ಕಾರಿ ನೌಕರರ ಸಂಘದಲ್ಲಿ ಸಂಘಟನೆ ಅಧ್ಯಕ್ಷರು, ಮತ್ತು ಪದಾಧಿಕಾರಿಗಳನ್ನು ಸದಸ್ಯತ್ವ ಹಾಗೂ ಮತದಾರರ ಪಟ್ಟಿಯಿಂದ ತೆಗೆದಿರುವುದನ್ನು, ರಾಜ್ಯಾದ್ಯಂತ ಸಂಘದ ಪದಾಧಿಕಾರಿಗಳನ್ನು ಕೈಬಿಡಲು ಉದ್ದೇಶಿಸಿರುವುದು, ಆ ಮೂಲಕ ಎನ್‌ಪಿಎಸ್ ರದ್ದತಿ ಹೋರಾಟ ಹತ್ತಿಕ್ಕುವ ಹಾಗೂ ಸಂಘಟನೆಯ ಆತ್ಮಬಲ ಕುಗ್ಗಿಸುವ ಕ್ರಮ ವಿರೋಧಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರವು ಎನ್‌ಪಿಎಸ್ ಬದಲಿಗೆ ಒಪಿಎಸ್ ಜಾರಿ ಸಾಧ್ಯತೆಗಳ ಕುರಿತು ಪರಿಶೀಲಿಸಲು ರಚಿಸಿರುವ ಸಮಿತಿಯನ್ನು ವಿರೋಧಿಸುವುದು. ಎನ್‌ಪಿಎಸ್ ಯೋಜನೆಯನ್ನು ರದ್ದುಪಡಿಸಿ, ಒಪಿಎಸ್ ಮರುಜಾರಿಗೆ ಸರ್ಕಾರವನ್ನು ಒತ್ತಾಯಿಸಲಾಗುವುದು. ಸರ್ಕಾರಕ್ಕೆ ಸಂಘಟನೆಯಿಂದ ಕಾಲಾವಧಿ ನೀಡಲಾಗುವುದು. ಇದಕ್ಕೆ ಸ್ಪಂದಿಸದಿದ್ದರೆ ಬರುವ ಜನವರಿ 15ರಂದು ರಾಜ್ಯಾದ್ಯಂತ ಹೋರಾಟ ಪ್ರಾರಂಭಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಸಂಗಣ್ಣನವರ್ ಮಾತನಾಡಿ, ಅಧಿಕಾರಕ್ಕೆ ಬಂದ ಕಾಂಗ್ರೆಸ್ ಚುನಾವಣೆಗೂ ಮುನ್ನ 6 ಗ್ಯಾರಂಟಿಯಾಗಿ ಎನ್‌ಪಿಎಸ್ ರದ್ದು ಮಾಡಿ, ಒಪಿಎಸ್ ಜಾರಿ ಮಾಡುವ ಭರವಸೆ ನೀಡಿತ್ತು. ಆದರೆ, ಇದೀಗ ಒಪಿಎಸ್ ಜಾರಿ ಸಾಧ್ಯತೆಗಳ ಬಗ್ಗೆ ಸಮಿತಿ ರಚಿಸುವ ಮೂಲಕ ಕೊಟ್ಟ ಮಾತಿಗೆ ತಪ್ಪಿದೆ ಎಂದರು.

ಕೆಲವರು ರಾಜ್ಯ ಸಕಾರಿ ನೌಕರರ ಸಂಘದ ಹೋರಾಟವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ನಮ್ಮ ಹೋರಾಟದ ಗುರಿ ಎಂದಿಗೂ ನೇರವಾಗಿದೆ. ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಎನ್‌ಪಿಎಸ್, ಯುಪಿಎಸ್ ಸೇರಿದಂತೆ ಯಾವುದೇ ಪಿಂಚಣಿ ಪದ್ಧತಿ ಜಾರಿಯಾದರೂ ಸರಿಯೇ, ನಮ್ಮ ಹೋರಾಟ ಮಾತ್ರ ಹಳೆ ಪಿಂಚಣಿ ಪದ್ಧತಿ ಮರುಜಾರಿ ಆಗುವವರೆಗೂ ನಿಲ್ಲುವುದಿಲ್ಲ ಎಂದು ಹೇಳಿದರು.

ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ಚಂದ್ರಕಾಂತ ತಳವಾರ, ದಯಾನಂದ, ಖಜಾಂಚಿ ವಿಜಯ, ಜಿಲ್ಲಾಧ್ಯಕ್ಷ ಜಿ.ಬಿ.ಶಿವಕುಮಾರ, ರಾಜ್ಯ ಮಾಧ್ಯಮ ಪ್ರತಿನಿಧಿ ಎಚ್.ಜಿ.ಎಂ.ಬಸವರಾಜ, ಎಂ.ರಮೇಶ. ಸಂತೋಷ, ಪ್ರಕಾಶ ನಾಯ್ಕ, ದೇವರಾಜ, ಸದಾಶಿವ ಕಂಬಾಳೆ, ಮಾದೇಶ ಶರ್ಮ ಹಾಗೂ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಭಾಗವಹಿಸಿದ್ದರು.

- - - -7ಕೆಡಿವಿಜಿ34ಃ

ದಾವಣಗೆರೆಯಲ್ಲಿ ಬೆಂಗಳೂರಿನ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ, ದಾವಣಗೆರೆ ಜಿಲ್ಲಾ ಘಟಕದ ಸಹಯೋಗದಲ್ಲಿ ವಿಶೇಷ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಿತು.