ಸಾರಾಂಶ
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಶಾಶ್ವತವಾಗಿ ಮುಂದುವರೆಯಬೇಕು. ಗಾಂಧಿಪ್ರತಿಮೆ ಬಳಿ ದಾಖಲೆ ಸಮೇತ ಚರ್ಚಿಸಲು ಸಿದ್ಧ ಎಂದು ಶನಿವಾರ ನಡೆದ ದುಂಡುಮೇಜಿನ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಸಂಯುಕ್ತಾಶ್ರಯದಲ್ಲಿ ನಡೆದ ದುಂಡುಮೇಜಿನ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ಈ ನಿರ್ಣಯ ಮಂಡಿಸಿದರು.
ಸಿದ್ದರಾಮಯ್ಯ ಅವರನ್ನು ಎಲ್ಲರೂ ಭ್ರಷ್ಟಾಚಾರತೀತ ನಾಯಕ ಎಂದು ಬಿಂಬಿಸುತ್ತಿದ್ದಾರೆ. ಆದರೆ ಸಿಎಂ ಆಗಿ ಅವರು ಶಾಶ್ವತವಾಗಿ ಮುಂದುವರೆಯಬೇಕು. ಮಹಾತ್ಮಗಾಂಧಿ ಪ್ರತಿಮೆ ಬಳಿ ದಾಖಲೆ ಸಮೇತ ಮುಕ್ತವಾಗಿ ಚರ್ಚಿಸಲು ನಾವು ಸಿದ್ಧರಿದ್ದೇವೆ. ರಾಜ್ಯ ಸರ್ಕಾರವು 1973 ರಿಂದ ಈವರೆಗೂ ಯಾರ್ಯಾರು ಎಷ್ಟೆಷ್ಟು ಆಸ್ತಿ ಮಾಡಿದ್ದಾರೆ ಎಂಬ ದಾಖಲೆ ಕುರಿತು ಶ್ವೇತಪತ್ರ ಹೊರಡಿಸಬೇಕು.
ಆ. 15ರಂದು ಪ್ರಗತಿಪರರೆಲ್ಲರೂ ಅಂಬೇಡ್ಕರ್ ಪ್ರತಿಮೆ ಬಳಿ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ಮೌನ ಸತ್ಯಾಗ್ರಹ ನಡೆಸುವುದು. ಎಂಡಿಎ ಆಡಳಿತ ಬದಲಿಸಿ, ಕಾಯ್ದೆಗೆ ತಿದ್ದುಪಡಿ ತಂದು, ಹಳೇಯ ಪದ್ಧತಿ ತೆಗೆದುಹಾಕುವುದು. ನಗರಾಭಿವೃದ್ಧಿ ಪ್ರಾಧಿಕಾರ ಬದಲಾಯಿಸಬೇಕು. ಎಂಡಿಎ ಎಂಜಿನಿಯರ್, ಆಡಳಿತ ಸಿಬ್ಬಂದಿಯನ್ನು ಶೇ. 90ರಷ್ಟು ಬದಲಿಸಬೇಕು. 50:50 ಅನುಪಾತ ರದ್ದುಪಡಿಸುವುದು ಎಂಬ ನಿರ್ಣಯ ಕೈಗೊಂಡರು.
ಎಲ್ಲಾ ಪ್ರಗತಿಪರರು, ದಲಿತರು ಕ್ಲೀನ್ ಎಂಡಿಎ ಆಪ್ ಎಂದು ಎಂಡಿಎ ಎದುರು ಚಳವಳಿ ನಡೆಸಲು ತೀರ್ಮಾನಿಸಲಾಯಿತು.
ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್. ಭಗವಾನ್ ಮಾತನಾಡಿ, ಸಿದ್ದರಾಮಯ್ಯ ಆಡಳಿತದಲ್ಲಿ ಅತ್ಯಂತ ಪರಿಶುದ್ಧವಾಗಿ ನಡೆದುಕೊಂಡಿದ್ದಾರೆ. ಆದರೆ ಬಿಜೆಪಿಗೆ ಅಪಾದನೆ ಮಾಡುವುದೇ ಕೆಲಸವಾಗಿದೆ. ಎಂಡಿಎ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳುಹಿಸುವ ಯತ್ನ ಮಾಡಲಾಗುತ್ತಿದೆ. ಬಿಜೆಪಿಯವರಿಗೆ ಆಪಾದಿಸುವುದೇ ಕೆಲಸ. ಅದಕ್ಕೆ ಯಾವುದೇ ಆಧಾರವಿಲ್ಲ. ಸಿದ್ದರಾಮಯ್ಯ ಅವರು ಆಡಳಿತದಲ್ಲಿ ಅತ್ಯಂತ ಪರಿಶುದ್ಧವಾಗಿ ನಡೆದುಕೊಂಡಿದ್ದಾರೆ ಎಂದರು.
ಇದನ್ನು ಸಹಿಸಲಾರದ ಜನ ಇವರನ್ನು ಕೆಳಗಿಳಿಸಬೇಕು ಎಂದು ಬರಿ ಹೊಟ್ಟೆ ಕಿಚ್ಚು ಪಡುತ್ತಿದ್ದಾರೆ. ಅವರು ಕೊಟ್ಟ ಗ್ಯಾರಂಟಿ ಯೋಜನೆಗಳು ಅವರ ಕೈಹಿಡಿದಿವೆ. ಬಡವರು, ರೈತರು, ದಲಿತರ ಸರ್ಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಅಲ್ಪಸಂಖ್ಯಾತರು ಬೇರೆ ದೇಶದಿಂದ ಬಂದಿಲ್ಲ, ಅವರು ಇಲ್ಲೇ ಹುಟ್ಟಿ ಬೆಳೆದವರು. ರಾಹುಲ್ ಗಾಂಧಿ ಮಾತನಾಡುತ್ತಾ ಜೈ ಸಂವಿಧಾನ ಎಂದಿದ್ದಾರೆ. ಜೈ ಎಂಬುದರಲ್ಲಿ ಸಹೋದರ ಭಾವನೆ ಇದೆ. ನಮ್ಮಲಲಿ ಆ ಭಾವನೆ ಬರಬೇಕು ಎಂದರು.
ಸಂವಿಧಾನದಲ್ಲಿ ಅಂಬೇಡ್ಕರ್ಅವರು ಎಲ್ಲರೂ ಸಮಾನರು ಎಂದು ಹೇಳಿದ್ದಾರೆ. ಆದರೆ ಯಾರೂ ಸಮಾನತೆಯಿಂದ ಕಾಣುತ್ತಿಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಎಲ್ಲರನ್ನೂ ಪ್ರೀತಿಯಿಂದ ಕಂಡು ಅಪ್ಪಿಕೊಳ್ಳುತ್ತಾರೆ. ಇತ್ತ ಸಿದ್ದರಾಮಯ್ಯ ಅವರು ಅಹಿಂದದ ಪರವಾಗಿದ್ದಾರೆ ಎಂದರು.
ಸಭೆಯಲ್ಲಿ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮ್, ಯೋಗೇಶ್ ಉಪ್ಪಾರ್, ಎಂ.ಎಫ್. ಕಲೀಂ, ದೇವನೂರು ಪುಟ್ಟನಂಜಯ್ಯ, ಚುಂಚನಹಳ್ಳಿ ಮಲ್ಲೇಶ್, ಬಸವಣ್ಣ, ಹರೀಶ್ ಮೊದಲಾದವರು ಇದ್ದರು.