ಸಾರಾಂಶ
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಕುರಿತಾಗಿ ಕಾಂಗ್ರೆಸ್ ಮುಖಂಡರೊಬ್ಬರು ನೀಡಿರುವ ಹೇಳಿಕೆಯನ್ನು ಚಿತ್ರಾಪುರ ಮಠದಲ್ಲಿ ನಡೆದ ಕೋಟಿ ಗಾಯತ್ರೀ ಜಪಯಜ್ಞದ ಧರ್ಮಸಭೆಯಲ್ಲಿ ಖಂಡಿಸಿ ನಿರ್ಣಯ ಕೈಗೊಂಡು ಪ್ರತಿಭಟಿಸಲು ನಿರ್ಧರಿಸಲಾಯಿತು.
ಮೂಲ್ಕಿ : ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಕುರಿತಾಗಿ ಕಾಂಗ್ರೆಸ್ ಮುಖಂಡರೊಬ್ಬರು ನೀಡಿರುವ ಹೇಳಿಕೆಯನ್ನು ಚಿತ್ರಾಪುರ ಮಠದಲ್ಲಿ ನಡೆದ ಕೋಟಿ ಗಾಯತ್ರೀ ಜಪಯಜ್ಞದ ಧರ್ಮಸಭೆಯಲ್ಲಿ ಖಂಡಿಸಿ ನಿರ್ಣಯ ಕೈಗೊಂಡು ಪ್ರತಿಭಟಿಸಲು ನಿರ್ಧರಿಸಲಾಯಿತು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ ಹಾರನಹಳ್ಳಿ ನಿರ್ಣಯ ಮಂಡಿಸಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಸಮಿತಿ ಹಾಗೂ ಮಹಾಸಭಾದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಜಂಟಿ ಆಶ್ರಯದಲ್ಲಿ ಕೂಳೂರಿನ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಚಿತ್ರಾಪುರ ಮಠದ ಸಹಕಾರದೊಂದಿಗೆ ಚಿತ್ರಾಪುರದಲ್ಲಿ ಎರಡು ದಿನಗಳ ಕಾಲ ನಡೆದ ಗಾಯತ್ರಿ ಸಂಗಮ ಸಾಂಘಿಕ ಕೋಟಿ ಗಾಯತ್ರಿ ಜಪಯಜ್ಞದ ಧರ್ಮಸಭೆ ಭಾನುವಾರ ನಡೆಯಿತು.
ಆಶೀರ್ವಚನ ನೀಡಿ ಮಾತನಾಡಿದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಬ್ರಾಹ್ಮಣರು ಅನುಸರಿಸಬೇಕಾದ ಹಲವು ಅನುಷ್ಠಾನಗಳಿದ್ದು ಕನಿಷ್ಠ ಗಾಯತ್ರಿ ಮಂತ್ರ ಅನುಷ್ಠಾನವನ್ನಾದರೂ ಮಾಡದೇ ಹೋದಲ್ಲಿ ನಾವು ಬ್ರಾಹ್ಮಣರು ಎನಿಸಿಕೊಳ್ಳಲು ಯಾವುದೇ ಅರ್ಹತೆ ಉಳಿಯಲಾರದು. ಋಷಿಗಳಿಂದ, ಸಾಧಕ ಹಿರಿಯರಿಂದ ಬಂದ ಅನುಷ್ಠಾನವನ್ನು ನಾವು ಮಾಡುತ್ತಾ ಬಂದಿದ್ದೇವೆ. ಇದು ಮುಂದಿನ ಪೀಳಿಗೆಗೂ ಮುಂದುವರಿಯಬೇಕು ಎಂದರು.
ರಾಷ್ಟ್ರವನ್ನು ಒಂದು ಗೂಡಿಸಲು ರಾಷ್ಟ್ರಗೀತೆ ಇರುವಂತೆ ಬ್ರಾಹ್ಮಣ ಸಮುದಾಯಕ್ಕೆ ಗಾಯತ್ರಿ ಮಂತ್ರವೇ ಒಂದು ಗೀತೆ. ವಿಪ್ರ ಸಮಾಜವಿಡೀ ಗಾಯತ್ರಿ ಮಂತ್ರದ ಅನುಷ್ಠಾನದಲ್ಲಿ ಒಂದಾಗಬೇಕು. ದಿಯೋ ಯೋನಾ ಪ್ರಚೋದಯಾತ್ ಎನ್ನುವಂತೆ ಸ್ವಾರ್ಥವಿಲ್ಲದೆ ಎಲ್ಲರಿಗೂ ಸದ್ಬುದ್ಧಿ, ಸತ್ ಚಿಂತನೆ ಕೊಡು ಎಂದು ಪ್ರಾರ್ಥಿಸಬೇಕು ಎಂದು ಪೇಜಾವರ ಶ್ರೀಗಳು ಹೇಳಿದರು.
ರಾಜಕಾರಣಿಗಳಿಗೆ ಸದ್ಬುದ್ಧಿಯನ್ನು ನೀಡಲಿ- ಪೇಜಾವರ ಶ್ರೀ
ಕಾಂಗ್ರೆಸ್ ಮುಖಂಡರೊಬ್ಬರು ತಮ್ಮ ಕುರಿತಾಗಿ ನೀಡಿದ್ದ ಹೇಳಿಕೆಯನ್ನು ಪ್ರಸ್ತಾವಿಸಿದ ಪೇಜಾವರ ಶ್ರೀಗಳು, ಲೋಕದಲ್ಲಿ ನಡೆಯುವ ಅನಿಷ್ಟಗಳಿಗೆ ಬ್ರಾಹ್ಮಣ ಸಮಾಜ ಕಾರಣ ಎಂದು ದೂಷಣೆ ಮಾಡುವ ಪ್ರವೃತ್ತಿ ಬೆಳೆದು ಬರುತ್ತಿದೆ. ಪ್ರತಿಯೊಂದಕ್ಕೂ ಜಾತಿಯನ್ನು ಮುಂದಿಟ್ಟು ಜಾತಿ ಲೆಕ್ಕಾಚಾರ ಮಾಡಲೂ ಮುಂದಾಗಿದ್ದಾರೆ. ಇದರ ಬಗ್ಗೆ ಪ್ರಜಾಪ್ರಭುತ್ವದಡಿ ಪ್ರಶ್ನಿಸಿದರೆ ನಿಂದಿಸಲಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಮಾತನಾಡುವ ಹಕ್ಕು ಇರುವುದು ರಾಜಕಾರಣಿಗಳಿಗೆ ಮಾತ್ರವೇ?. ಗಾಯತ್ರಿ ಜಪ ಯಜ್ಞದ ಮೂಲಕ ರಾಜಕಾರಣಿಗಳಿಗೆ ಸದ್ಬುದ್ಧಿಯನ್ನು ನೀಡಲಿ. ಸಾಮಾನ್ಯ ವ್ಯಕ್ತಿಗೆ ಕೂಡ ತನ್ನ ಅಭಿಪ್ರಾಯವನ್ನು ಹೇಳುವ, ಪ್ರಶ್ನಿಸುವ ಹಕ್ಕು ಇದೆ ಎಂದರು.ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಮಾತನಾಡಿ, ಬ್ರಾಹ್ಮಣ ಸಮುದಾಯವು ಉದ್ಧಾರವನ್ನು ಸ್ವತಃ ಮಾಡಿಕೊಳ್ಳುವ ಮೂಲಕ ಮಕ್ಕಳಲ್ಲಿಯೂ ಈ ಸಂಸ್ಕಾರವನ್ನು ಬಿತ್ತಬೇಕು. ನಿತ್ಯವೂ ೧೦೮ ಗಾಯತ್ರಿ ಮಂತ್ರವನ್ನು ಅನುಷ್ಠಾನಿಸಿ ಬ್ರಾಹ್ಮಣತ್ವದ ಶಕ್ತಿ ವೃದ್ಧಿಸಿಕೊಳ್ಳಬೇಕು. ನಮ್ಮನ್ನು ಅನುಸರಿಸುವವರಿಗೆ ನಾವು ಮಾರ್ಗದರ್ಶಕರಾಗಬೇಕು ಎಂದರು.
ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ಮಾತನಾಡಿ, ಬ್ರಾಹ್ಮಣ ಸಮುದಾಯದ ಎಲ್ಲರ ಸಹಕಾರದಲ್ಲಿ ಸಮಿತಿ ಹಮ್ಮಿಕೊಂಡ ಕಾರ್ಯಕ್ರಮ ಯಶಸ್ವಿಯಾಗಿದ್ದು ಸಮಾಜದ ಏಳಿಗೆಗಾಗಿ ಇಂತಹ ವಿಪ್ರ ಸಂಗಮ ನಿರಂತರವಾಗಿ ಮುಂದುವರಿಯುವ ಮೂಲಕ ನಮ್ಮ ಗೌರವ, ಸ್ಥಾನಮಾನವನ್ನು ಉಳಿಸಿಕೊಳ್ಳಬೇಕಿದೆ ಎಂದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ ಹಾರನಹಳ್ಳಿ ಮಾತನಾಡಿ, ಎಲ್ಲ ಸಮುದಾಯದಲ್ಲೂ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವವರ ಆಧ್ಯಯನ ನಡೆಸಿ ಅವರಿಗೆ ಬೇಕಾದ ಸೌಲಭ್ಯ ಒದಗಿಸಬೇಕಿದೆಯೇ ಹೊರತು ಜಾತಿ ಗಣತಿ, ಜನಗಣತಿಯಲ್ಲ. ಇದರಿಂದ ಯಾವುದೇ ಪ್ರಯೋಜನವೂ ಇಲ್ಲ. ಸನಾತನ ಧರ್ಮದವರನ್ನು ಒಡೆದು ಒಂದಿಷ್ಟು ಮತ ಪಡೆಯಬಹುದು ಎಂಬ ಲೆಕ್ಕಾಚಾರ ಮಾತ್ರ ಇದರ ಹಿಂದೆ ಅಡಗಿದೆ ಎಂದರು.
ಬ್ರಾಹ್ಮಣ ಸಮಾಜ ಒಗ್ಗಟ್ಟಿನಿಂದ ಇರಲು ಜನವರಿಯಲ್ಲಿ ಬೆಂಗಳೂರಿನಲ್ಲಿ ೨೪ ಕೋಟಿ ಗಾಯತ್ರಿ ಜಪಯಜ್ಞ ಮಾಡಲು ನಿರ್ಧರಿಸಲಾಗಿದೆ. ದ.ಕ. ಸಮಿತಿಯಿಂದ ಯಶಸ್ವಿಯಾದ ಈ ಕಾರ್ಯಕ್ರಮ ಮುಂದೆ ಪ್ರೇರಕವಾಗಿ ಕೆಲಸ ಮಾಡಲು ಸಹಾಯಕವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಟೀಲು ಕ್ಷೇತ್ರದ ಹಿರಿಯ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಹಾಗೂ ದಾನಿ, ವಸಂತ ಪಾಠ ಶಿಬಿರದ ರೂವಾರಿ ಸುರೇಶ್ ರಾವ್ ಕಟೀಲು ಅವರನ್ನು ಗೌರವಿಸಲಾಯಿತು.
ಬ್ರಾಹ್ಮಣ ಅಭಿವೃದ್ಧಿ ಸಮಿತಿಯ ಮಾಜಿ ನಿರ್ದೇಶಕ ಡಾ.ಬಿ.ಎಸ್. ರಾಘವೇಂದ್ರ ಭಟ್, ವೇದಮೂರ್ತಿ ಸೂರ್ಯನಾರಾಯಣ ಭಟ್ ಕಶೆಕೋಡಿ, ಕಟೀಲು ಕ್ಷೇತ್ರದ ಹರಿನಾರಾಯಣ ದಾಸ ಆಸ್ರಣ್ಣ, ಸಂಚಾಲಕ ಸುರೇಶ್ ರಾವ್ ಚಿತ್ರಾಪುರ, ಕೃಷ್ಣ ಭಟ್ ಕದ್ರಿ, ಎಂ.ಟಿ. ಭಟ್, ಸುಬ್ರಹ್ಮಣ್ಯ, ಸಮಿತಿಯ ಪದಾದಿಕಾರಿಗಳು, ಬ್ರಾಹ್ಮಣ ಸಮಾಜದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಮಹಿಳಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಗಾಯತ್ರಿ ಸಂಗಮ ಅಧ್ಯಕ್ಷ ಮಹೇಶ್ ಕಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಡಿ. ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಸಂಚಾಲಕ ಶ್ರೀಧರ ಹೊಳ್ಳ ವಂದಿಸಿದರು. ಕೋಟಿ ಗಾಯತ್ರೀ ಜಪಯಜ್ಞ ಸಂಪನ್ನ
ಜಪಯಜ್ಞದ ಸಂಚಾಲಕ ಕಟೀಲು ಕ್ಷೇತ್ರದ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಅವರ ಮುಂದಾಳತ್ವದಲ್ಲಿ ಕುಡುಪು ಕೃಷ್ಣರಾಜ ತಂತ್ರಿಗಳ ಪೌರೋಹಿತ್ಯದಲ್ಲಿ ಜಪಯಜ್ಞವು ಭಾನುವಾರ ಬೆಳಗ್ಗೆ ೬.೩೦ ಆರಂಭಗೊಂಡು ೧೦.೩೦ಕ್ಕೆ ಮಹಾಪೂಜೆಯೊಂದಿಗೆ ಸಂಪನ್ನಗೊಂಡಿತು.
ಉಡುಪಿ, ದ.ಕ. ಜಿಲ್ಲೆಯಿಂದ ಸಾವಿರಾರು ಮಂದಿ ವಿವಿಧ ಉಪ ಪಂಗಡಗಳಿಗೆ ಸೇರಿದ ಬ್ರಾಹ್ಮಣ ಸಮುದಾಯವು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಸಮಿತಿಯ ಒಂದೇ ಸೂರಿನಡಿ ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸಿದರು. ಆಗಮಿಸಿದ ಸರ್ವರಿಗೂ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ಪ್ರಸಾದ ವಿತರಿಸಿ ಆಶೀರ್ವದಿಸಿದರು.