ಸಾರಾಂಶ
ಉಡುಪಿ ಶ್ರೀ ಪೇಜಾವರ ಮಠ ಮತ್ತು ಕಡಿಯಾಳಿಯ ಆಸರೆ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ದಾನಿಗಳ ಸಹಕಾರದೊಂದಿಗೆ ಪೇಜಾವರ ಶ್ರೀಗಳ ರಾಮರಾಜ್ಯ ಪರಿಕಲ್ಪನೆಯಡಿ ಸೂರಿಲ್ಲದವರಿಗೆ ಸೂರು ಸಂಕಲ್ಪದಂತೆ ನಿರ್ಮಿಸಲಾದ ಎರಡು ಮನೆಗಳನ್ನು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಶುಕ್ರವಾರ ಫಲಾನುಭವಿಗಳಿಗೆ ಹಸ್ತಾಂತರಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಶ್ರೀ ಪೇಜಾವರ ಮಠ ಮತ್ತು ಕಡಿಯಾಳಿಯ ಆಸರೆ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ದಾನಿಗಳ ಸಹಕಾರದೊಂದಿಗೆ ಪೇಜಾವರ ಶ್ರೀಗಳ ರಾಮರಾಜ್ಯ ಪರಿಕಲ್ಪನೆಯಡಿ ಸೂರಿಲ್ಲದವರಿಗೆ ಸೂರು ಸಂಕಲ್ಪದಂತೆ ನಿರ್ಮಿಸಲಾದ ಎರಡು ಮನೆಗಳನ್ನು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಶುಕ್ರವಾರ ಫಲಾನುಭವಿಗಳಿಗೆ ಹಸ್ತಾಂತರಿಸಿದರು.ಪಾಡಿಗಾರು ಮತ್ತು ಕುಂಜಿಬೆಟ್ಟಿನಲ್ಲಿ ನಿರ್ಮಿಸಲಾಗಿರುವ ಈ ಎರಡೂ ಮನೆಗಳಲ್ಲಿ ದೀಪ ಬೆಳಗಿ ದೇವರಿಗೆ ಮಂಗಳಾರತಿ ಮಾಡಿ ಫಲಾನುಭವಿಗಳಾದ ಮಾಲಾಶ್ರೀ ಭಟ್ ಮತ್ತು ಪ್ರತಿಮಾ ಪೂಜಾರ್ತಿಯವರ ಕುಟುಂಬಗಳಿಗೆ ಮನೆಗಳನ್ನು ಹಸ್ತಾಂತರಿಸಿದರು.ಈಗಾಗಲೇ ಶ್ರೀಮಠವು ಆಸರೆಯಂಥಹ ಟ್ರಸ್ಟ್‌ಗಳು ಹಾಗೂ ದಾನಿಗಳ ನೆರವಿನಿಂದ ಅನೇಕ ಮನೆಗಳನ್ನು ನಿರ್ಮಿಸಿಕೊಟ್ಟಿದ್ದು, ಈ ಎರಡು ಹೊಸ ಮನೆಗಳು ಆ ಸಾಲಿಗೆ ಸೇರುತ್ತಿರುವುದು ಮತ್ತು ಈ ಮುಖೇನ ಸಮಾಜದ ಅನೇಕರಿಗೆ ಸೂರು ನಿರ್ಮಿಸಿಕೊಟ್ಟು ಅವರ ಬಾಳಿನಲ್ಲಿ ನೆಮ್ಮದಿ ತರಬಲ್ಲ ಸಾರ್ಥಕ ಪ್ರಯತ್ನಗಳಿಂದ ಅತೀವ ಸಂತಸವಾಗಿದೆ. ಇಂಥಹ ಒಳ್ಳೆಯ ಕೆಲಸಗಳಿಗೆ ಸಮಾಜದ ಆರ್ಥಿಕ ಸಶಕ್ತರು ಕೈಜೋಡಿಸಿದಲ್ಲಿ ರಾಮರಾಜ್ಯ ನಿರ್ಮಾಣದ ಆಶಯಗಳಿಗೆ ಬಲ ಬರುತ್ತದೆ ಎಂದು ಶ್ರೀಗಳು ಆಶಯ ವ್ಯಕ್ತಪಡಿಸಿದರು.ನಂತರ ಮನೆಗಳ ದಾನಿಗಳಾದ ಉದ್ಯಮಿ ರಾಜಗೋಪಾಲ ಆಚಾರ್ಯ ದಂಪತಿಯನ್ನು ಹಾಗೂ ಎಂಜಿನಿಯರ್ ರಾಕೇಶ್ ಜೋಗಿ ಅವರನ್ನು ಶ್ರೀಗಳು ಸನ್ಮಾನಿಸಿದರು.ಆಸರೆ ಟ್ರಸ್ಟ್ ಅಧ್ಯಕ್ಷ ಪಿ. ವಸಂತ ಭಟ್, ಸದಸ್ಯರಾದ ಎಂ.ವಲ್ಲಭ ಭಟ್, ಟ್ರಸ್ಟ್ ಕಾರ್ಯಗಳ ಬಗ್ಗೆ ವಿವರಿಸಿದರು. ನಗರಸಭಾ ಸದಸ್ಯ ಗಿರೀಶ್ ಅಂಚನ್, ಲಯನ್ಸ್ ಕ್ಲಬ್ ಉಡುಪಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಾಸುದೇವ ಭಟ್ ಪೆರಂಪಳ್ಳಿ, ಸತೀಶ್ ಕುಲಾಲ್ ಕಾರ್ಯಕ್ರಮ ಸಂಯೋಜಿಸಿ ವಂದಿಸಿದರು.