ಕಟ್ಟುನಿಟ್ಟಾಗಿ ಕರ ವಸೂಲಿ ಮಾಡಲು ಪುರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ

| Published : Jul 27 2025, 01:49 AM IST

ಕಟ್ಟುನಿಟ್ಟಾಗಿ ಕರ ವಸೂಲಿ ಮಾಡಲು ಪುರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಆರ್. ನಗರ: ಪುರಸಭೆ ವ್ಯಾಪ್ತಿಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಸಮರ್ಪಕವಾಗಿ ತೆರಿಗೆ ವಸೂಲಿಯಾಗದೆ ಆದಾಯಕ್ಕೆ ಕತ್ತರಿ ಬಿದ್ದು ಅಭಿವೃದ್ದಿ ಕಾರ್ಯಗಳಿಗೆ ಹಿನ್ನಡೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಾಗಿ ಕರ ವಸೂಲಿ ಮಾಡಲು ಪುರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಕೆ.ಆರ್. ನಗರ: ಪುರಸಭೆ ವ್ಯಾಪ್ತಿಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಸಮರ್ಪಕವಾಗಿ ತೆರಿಗೆ ವಸೂಲಿಯಾಗದೆ ಆದಾಯಕ್ಕೆ ಕತ್ತರಿ ಬಿದ್ದು ಅಭಿವೃದ್ದಿ ಕಾರ್ಯಗಳಿಗೆ ಹಿನ್ನಡೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಾಗಿ ಕರ ವಸೂಲಿ ಮಾಡಲು ಪುರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಪಟ್ಟಣದ ಪುರಸಭೆಯ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಡಿ. ಶಿವುನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೊದಲಿಗೆ ವಿಷಯ ಪ್ರಸ್ತಾಪಿಸಿದ ಸದಸ್ಯರಾದ ಉಮೇಶ್ ಮತ್ತು ಪ್ರಕಾಶ್ ಅವರು ಕಂದಾಯ ವಿಭಾಗದ ಅಧಿಕಾರಿಗಳು ವಾಣಿಜ್ಯ ಮಳಿಗೆಗಳು ಮತ್ತು ಬಾಡಿಗೆ ನೀಡುವ ಸಲುವಾಗಿ ನಿರ್ಮಾಣ ಮಾಡಿರುವ ಮನೆಗಳ ಮಾಲೀಕರಿಂದ ನಿಯಮಾನುಸಾರ ಕಂದಾಯ ವಸೂಲಿ ಮಾಡದೆ ಭ್ರಷ್ಟಚಾರದಲ್ಲಿ ತೊಡಗಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಒತ್ತಾಯಿಸಿದರು.

ಲಕ್ಷಾಂತರ ರು. ತೆರಿಗೆ ವಿದಿಸುವ ಬದಲು ಪುರಸಭೆಯ ಕೆಲವು ಸಿಬ್ಬಂದಿ ಲಂಚ ಪಡೆದು ಕಡಿಮೆ ಕಂದಾಯ ನಿಗದಿ ಮಾಡುತ್ತಿರುವುದರಿಂದ ವಾರ್ಷಿಕ 5 ಕೋಟಿ ಸಂಗ್ರಹವಾಗಬೇಕಿದ್ದ ತೆರಿಗೆ ಈಗ 2.5 ಕೋಟಿ ವಸೂಲಿಯಾಗುತ್ತಿದ್ದು, ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ ಸದಸ್ಯರುಗಳು ಇಂತಹ ಕೆಲಸಗಳು ಅಭಿವೃದ್ದಿಗೆ ಮಾರಕವಾಗಿದ್ದು, ಈ ವಿಚಾರವನ್ನು ಸಭೆಯು ಗಂಭೀರವಾಗಿ ಪರಿಗಣಿಸಬೇಕೆಂದು ಹಕ್ಕೊತ್ತಾಯ ಮಂಡಿಸಿದರು.

ಅಧ್ಯಕ್ಷ ಶಿವುನಾಯಕ್‌ ಮಾತನಾಡಿ, ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಹೇಳಿದರಲ್ಲದೆ, ನಾಳೆಯಿಂದಲೇ ಕಂದಾಯ ವಿಭಾಗದವರು ಸರ್ಕಾರ ನಿಗದಿಪಡಿಸಿದ ತೆರಿಗೆ ವಸೂಲಿ ಮಾಡುವುದರ ಜತೆಗೆ ಆ ಸಂಬಂದ ನನಗೆ ವರದಿ ಮತ್ತು ದಾಖಲೆ ನೀಡುವುದರರೊಂದಿಗೆ ಕಡಿಮೆ ಕಂದಾಯ ಪಡೆದಿರುವವದರಿಂದ ಸರ್ಕಾರದ ನಿಯಮಾನುಸಾರ ವಸೂಲಿ ಮಾಡಬೇಕೆಂದು ಸೂಚಿಸಿದರು.

ಪಟ್ಟಣದ 23 ವಾರ್ಡುಗಳಿಗೆ ನಿತ್ಯ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡುತ್ತಿಲ್ಲ, ಇದರಿಂದ ನಾಗರೀಕರಿಗೆ ತೊಂದರೆಯಾಗಿದ್ದು, ಇಂತಹ ವೈಫಲ್ಯದಿಂದ ಸಾರ್ವಜನಿಕರು ಪುರಸಭೆ ಆಡಳಿತ ವಿಫಲಗೊಂಡಿದೆ ಎಂದು ದೂರುತ್ತಿದ್ದು, ಈ ಬಗ್ಗೆ ಗಮನ ಹರಿಸಬೇಕೆಂದು ಸದಸ್ಯರುಗಳು ಒಕ್ಕೊರಲಿನಿಂದ ಆಗ್ರಹ ಮಾಡಿದರು.

ಅಮೃತ್-02 ಯೋಜನೆ ಕಾಮಗಾರಿ ನಡೆಯುತ್ತಿರುವುದರಿಂದ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರಲ್ಲದೆ ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಆನಂತರ ಕುಡಿಯುವ ನೀರಿನ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗಲಿದೆ ಎಂದು ಮಾಹಿತಿ ನೀಡಿದರು.

ಸದಸ್ಯರಾದ ಉಮೇಶ್, ಕೆ.ಬಿ. ವೀಣಾ, ಕೆ.ಜಿ. ಸುಬ್ರಹ್ಮಣ್ಯ, ಬಿ.ಎಸ್. ತೋಂಟದಾರ್ಯ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಈ ಕಾಮಗಾರಿಯನ್ನು ತನಿಖೆಗೊಳಪಡಿಸಿ ಆನಂತರ ಬಿಲ್ ನೀಡಬೇಕೆಂದು ಹೇಳಿದರಲ್ಲದೆ, ತಪ್ಪೆಸಗಿರುವ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಬೇಕೆಂದು ನುಡಿದರು.

ಇತ್ತೀಚೆಗೆ ನಿಧನರಾದ 20 ನೇ ವಾರ್ಡಿನ ಸದಸ್ಯೆ ಅಪ್ರೋಜ್ ಉನ್ನೀಸಾ ಮತ್ತು ಬಹು ಭಾಷಾ ನಟಿ ಬಿ. ಸರೋಜಾದೇವಿ ಅವರಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.

ಸದಸ್ಯರಾದ ಸೈಯದ್‌ ಸಿದ್ದಿಕ್, ಕೆ.ಎಲ್.ಜಗದೀಶ್, ಶಂಕರ್‌ಸ್ವಾಮಿ, ಕೆ.ಜಿ. ಸುಬ್ರಹ್ಮಣ್ಯ, ನಟರಾಜು, ಬಿ.ಎಸ್. ತೋಂಟದಾರ್ಯ, ವಸಂತಮ್ಮ, ಅಶ್ವಿನಿಪುಟ್ಟರಾಜು, ಸರೋಜಮಹದೇವ್, ಶಂಕರ್, ಜಾವೀದ್‌ ಪಾಷಾ, ಕೆ.ಪಿ. ಪ್ರಭುಶಂಕರ್, ವಹೀದಾಬಾನು, ಸೌಮ್ಯ ಲೋಕೇಶ್, ಕೆ.ಬಿ. ವೀಣಾ ಮತ್ತು ಪುರಸಭೆ ಸಿಬ್ಬಂದಿಗಳು ಸಭೆಯಲ್ಲಿ ಇದ್ದರು.

ಶಾರದ ನಾಗೇಶ್‌ ಅವಿರೋದ ಆಯ್ಕೆ

ಪುರಸಭೆಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ 9ನೇ ವಾರ್ಡಿನ ಸದಸ್ಯೆ ಶಾರದ ನಾಗೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಇವರೊಂದಿಗೆ ಸದಸ್ಯರಾಗಿ ಅಶ್ವಿನಿ ಪುಟ್ಟರಾಜು, ಸರೋಜ ಮಹದೇವ್, ಕೆ.ಎಸ್. ಶಂಕರ್, ಸೌಮ್ಯ ಲೋಕೇಶ್ ಅವರು ನೇಮಕಗೊಂಡರು.

ಅಧ್ಯಕ್ಷ ಶಿವುನಾಯಕ್, ಉಪಾಧ್ಯಕ್ಷೆ ಪಲ್ಲವಿಆನಂದ್, ಮುಖ್ಯಾಧಿಕಾರಿ ಬಿ.ವಿ. ವೆಂಕಟೇಶ್ ಮತ್ತು ಸದಸ್ಯರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.