ಬರಗಾಲದ ಈ ವೇಳೆ ಕುಡಿಯುವ ನೀರಿನ ಜತೆಗೆ ಒಂದೇ ಒಂದು ಬಾರಿ ರೈತರು ಹೊಲಗಳಿಗೆ ನೀರು ಹರಿಸಲು ಕಾಲುವೆಗಳ ಮೂಲಕ ನೀರು ಹರಿಸಬೇಕಿದೆ. ಬಂದು ಬಾರಿ ನೀರು ಹಾಯಿಸಿದರೆ ಹವಾಮಾನದ ಮೇಲೆ ಹಿಂಗಾರು ಬೆಳೆಗಳು ಬರಲಿವೆ.
ಧಾರವಾಡ:
ಮಲಪ್ರಭಾ ನದಿಯಿಂದ ರೈತರ ಬೆಳೆಗಳಿಗೆ ನೀರು ಹಾಗೂ ನೂತನ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ 20 ಎಕರೆ ಜಾಗ ನೀಡುವ ಕುರಿತು ಇಲ್ಲಿಯ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಹತ್ವದ ಠರಾವ್ ಮಾಡಲಾಯಿತು.ಬರಗಾಲದ ಈ ವೇಳೆ ಕುಡಿಯುವ ನೀರಿನ ಜತೆಗೆ ಒಂದೇ ಒಂದು ಬಾರಿ ರೈತರು ಹೊಲಗಳಿಗೆ ನೀರು ಹರಿಸಲು ಕಾಲುವೆಗಳ ಮೂಲಕ ನೀರು ಹರಿಸಬೇಕಿದೆ. ಬಂದು ಬಾರಿ ನೀರು ಹಾಯಿಸಿದರೆ ಹವಾಮಾನದ ಮೇಲೆ ಹಿಂಗಾರು ಬೆಳೆಗಳು ಬರಲಿವೆ. ಅದಕ್ಕಾಗಿ ಈ ಕುರಿತು ಠರಾವ್ ಪಾಸ್ ಮಾಡಿ ಪ್ರಾದೇಶಿಕ ಆಯುಕ್ತರಿಗೆ ಕಳುಹಿಸಿ ಎಂದು ಶಾಸಕ ವಿನಯ ಕುಲಕರ್ಣಿ ಸಭೆಗೆ ಮನವಿ ಮಾಡಿದರು. ಇದರೊಂದಿಗೆ ಜಿಲ್ಲಾಸ್ಪತ್ರೆಯು ನಗರದ ಮಧ್ಯೆದಲ್ಲಿದೆ. ಜತೆಗೆ ಐತಿಹಾಸಿಕ ಮಹತ್ವವುಳ್ಳ ಕೋಟೆ ಬಳಿ ಇರುವುದರಿಂದ ಜಿಲ್ಲಾಸ್ಪತ್ರೆ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಉತ್ತಮ ಸೌಲಭ್ಯಗಳನ್ನು ನೀಡಲಾಗುತ್ತಿಲ್ಲ. ಆದ್ದರಿಂದ ಬೆಳಗಾವಿ ರಸ್ತೆಯಲ್ಲಿಯ ಕೃಷಿ ವಿವಿಯ 20 ಎಕರೆ ಜಾಗವಿದ್ದು, ಅದನ್ನು ಜಿಲ್ಲಾಸ್ಪತ್ರೆಗೆ ನೀಡಿದರೆ ಜನರಿಗೆ ಅನುಕೂಲವಾಗಲಿದೆ. ಜತೆಗೆ ಮಹಾನಗರ ಪಾಲಿಕೆ ಒಡೆತನದ ಹೆರಿಗೆ ಆಸ್ಪತ್ರೆ ಇದ್ದು, ಅದನ್ನೂ ಜಿಲ್ಲಾಸ್ಪತ್ರೆಗೆ ನೀಡುವಂತೆ ಠರಾವ್ ಪಾಸ್ ಮಾಡುವಂತೆ ಸೂಚಿಸಿದರು. ಸಭೆಯಲ್ಲಿ ಸರ್ವಾನುಮತದಿಂದ ಈ ಎರಡು ಪ್ರಸ್ತಾವನಕ್ಕೆ ಒಪ್ಪಿ ಠರಾವ್ ಮಾಡಲಾಯಿತು.
ಆರ್‌ಟಿಐ ಹಾವಳಿ ತಪ್ಪಿಸಿ:ಜಿಲ್ಲೆಯಲ್ಲಿ ಆರ್‌ಟಿಐ ಕಾರ್ಯಕರ್ತರ ಹಾವಳಿ ಎಗ್ಗಿಲ್ಲದೇ ನಡೆದಿದೆ. ಇದರಿಂದ ನಿತ್ಯ ಅಧಿಕಾರಿಗಳಿಗೆ ತೊಂದರೆ ಆಗುತ್ತಿದೆ. ಯಾವುದೇ ಒಂದು ಸಂದರ್ಭದಲ್ಲಿ ಜನಪ್ರತಿನಿಧಿಗಳು ಒತ್ತಡ ತಂದು ಜನರ ಸಮಸ್ಯೆ ಪರಿಹರಿಸುವಂತೆ ಸೂಚಿಸಿರುತ್ತಾರೆ. ಆದರೆ, ಇದನ್ನೇ ದಾಳವಾಗಿ ಬಳಸಿಕೊಳ್ಳುವ ಆರ್‌ಟಿಐ ಕಾರ್ಯಕರ್ತರು ಅಧಿಕಾರಿಗಳಿಂದ ಹಣ ವಸೂಲಿ ದಂಧೆ ನಡೆಸಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಇನ್ನು ಮುಂದೆ ಯಾರೇ ಹಣ ವಸೂಲಿಗೆ ಬಂದರೂ ಅವರ ವಿಡಿಯೋ ಮಾಡಿಕೊಂಡು ಪೊಲೀಸರಿಗೆ ನೀಡಿ. ಧೈರ್ಯದಿಂದ ಕೆಲಸ ಮಾಡಿ ನಿಮ್ಮ ಬೆನ್ನಿಗೆ ನಾವಿದ್ದೇವೆ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದಾಗ ಅಧಿಕಾರಿಗಳಿಂದ ಚಪ್ಪಾಳೆ ತೂರಿ ಬಂದವು.
ಕ್ರಿಮಿನಲ್ ಕೇಸ್:ಹು-ಧಾ ಮಹಾನಗರ ಸೇರಿ ಜಿಲ್ಲಾದ್ಯಂತ ಕುಡಿಯುವ ನೀರಿನ ಅವ್ಯವಸ್ಥೆ ಕುರಿತು ಮಾತನಾಡಿದ ಸಚಿವ ಸಂತೋಷ ಲಾಡ್, ಗುತ್ತಿಗೆ ಪಡೆದಿರುವ ಎಲ್ ಆ್ಯಂಡ್ ಟಿ ಕಂಪನಿಯಿಂದ ಜನರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಈ ಕುರಿತು ದೀಪಾವಳಿ ಮುಗಿದ ಬಳಕ ಬೆಂಗಳೂರಿನಲ್ಲಿ ಕಂಪನಿಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲು ನೋಟಿಸ್ ನೀಡಬೇಕು. ಅಲ್ಲಿಯೂ ಸಮಸ್ಯೆ ಪರಿಹಾರವಾಗದಿದ್ದರೆ ಕಂಪನಿ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು ಸಿದ್ಧತೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.
ಸಭೆಯಲ್ಲಿದ್ದ ಸರ್ವ ಪಕ್ಷದ ಶಾಸಕರು ಬೆಂಬಲ ವ್ಯಕ್ತಪಡಿಸಿ, ಪದೇ ಪದೇ ಅಧಿಕಾರಿಗಳು ಬದಲಾಗುತ್ತಿದ್ದು, ಯಾವ ಸಮಸ್ಯೆಗೆ ಪರಿಹಾರ ದೊರೆಯುತ್ತಿಲ್ಲ. ಜತೆಗೆ ನಳ ಸಂಪರ್ಕ ನೀಡಲು ರಸ್ತೆ ಅಗದು ಮರಳಿ ಸರಿಪಡಿಸುವ ಕಾರ್ಯವಾಗುತ್ತಿಲ್ಲ. ಅವರ ಮೇಲೆ ಶಿಸ್ತು ಕ್ರಮ ಆಗಲೇಬೇಕು ಎಂದು ಸಚಿವರ ಸೂಚನೆಗೆ ಧ್ವನಿಗೂಡಿಸಿದರು.ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಇತ್ತೀಚೆಗೆ ನಗರಾಭಿವೃದ್ಧಿ ಸಚಿವರೊಂದಿಗೆ ಮಾತುಕತೆ ನಡೆಸಿದಾಗ ಗೃಹ ಬಳಕೆ ನೀರಿನ ಮೇಲಿನ ಬಡ್ಡಿ ಮನ್ನಾ ಮಾಡುವ ಕುರಿತು ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಅದು ಕೇವಲ ಬಿಪಿಎಲ್ ಕಾರ್ಡ್ ಇರುವವರದ್ದೋ ಅಥವಾ ಎಲ್ಲರದ್ದೋ ಎನ್ನುವುದು ಸ್ಪಷ್ಟವಾಗಬೇಕಿದೆ. ಅದಕ್ಕಾಗಿ ಮಹಾನಗರ ಪಾಲಿಕೆಯಿಂದ ಎಲ್ಲ ದಾಖಲೆ ಸಿದ್ಧತೆ ಮಾಡಿಕೊಳ್ಳಲು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.
ಕೆರೆ ಒತ್ತುವರಿ ತಡೆಯಿರಿ:ವಿಧಾನ ಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ ಮಾತನಾಡಿ, ಹು-ಧಾ ಅವಳಿ ನಗರದಲ್ಲಿಯ ಬಹುತೇಕ ಕೆರೆಗಳು ಒತ್ತುವರೆ ಆಗಿ ಕಟ್ಟಡಗಳು ನಿರ್ಮಾಣವಾಗಿವೆ. ಅಲ್ಲದೇ ಹುಬ್ಬಳ್ಳಿಯಲ್ಲಿಯ ಹೊಟೇಲ್‌ವೊಂದಕ್ಕೆ 114 ಎಕರೆ ಕೆರೆ ಜಾಗೆಯನ್ನು ಗಾಲ್ಫ್ ಕ್ಲಬ್ ಮಾಡಲು ನೀಡಲಾಗಿದೆ. ಜಿಲ್ಲಾಧಿಕಾರಿಗಳೇ ಇದಕ್ಕೆ ಅಧ್ಯಕ್ಷರಿದ್ದರೂ ಅವರ ಅನುಮತಿ ಇಲ್ಲದೇ ಹೇಗೆ ನೀಡಲಾಗಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ ಸ್ನೇಹಲ್ ಆರ್. 1993 ರಲ್ಲಿಯೇ ಹೋಟೆಲ್‌ಗೆ ಸರ್ಕಾರದ ಮಟ್ಟದಲ್ಲಿ ಜಾಗ ನೀಡಲಾಗಿದೆ. ಹೀಗಾಗಿ ಈ ಸಮಸ್ಯೆಗೆ ಪರಿಹಾರ ಸರ್ಕಾರದ ಹಂತದಲ್ಲಿಯೇ ಆಗಬೇಕೆಂದರು.
ಶಾಸಕರಾದ ಎನ್.ಎಚ್. ಕೋನರಡ್ಡಿ, ಎಂ.ಆರ್. ಪಾಟೀಲ, ಲಿಂಗರಾಜ ಪಾಟೀಲ, ಜಿಪಂ ಸಿಇಒ ಭುವನೇಶ ಪಾಟೀಲ, ಪೊಲೀಸ್ ಆಯುಕ್ತ ಭೂಷಣ ಬೋರಸೆ, ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.ಲಂಚ ಸ್ವೀಕರಿಸಿದರೆ ಎಚ್ಚರ...!
ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು ನಡೆಸುತ್ತಿರುವ ಭ್ರಷ್ಟಾಚಾರದ ಕುರಿತು ಸಚಿವ, ಶಾಸಕರು ತೀವ್ರ ಆಕ್ರೋಶವ್ಯಕ್ತಪಡಿಸಿದರು. ಅದರಲ್ಲೂ ಶಾಸಕ ವಿನಯ ಕುಲಕರ್ಣಿ, ತಹಸೀಲ್ದಾರ್‌ರು ₹ 50 ಲಕ್ಷ ಹಾಗೂ ಹೆಸ್ಕಾಂ ಅಧಿಕಾರಿ ₹ 25 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದಿದ್ದು ಜಿಲ್ಲೆಗೆ ಕೆಟ್ಟ ಹೆಸರು. ಇದೀಗ ಅದೇ ಹಾದಿಯಲ್ಲಿ ಕೆಲವು ಅಧಿಕಾರಿಗಳು ಸಾಗುತ್ತಿದ್ದಾರೆ. ಇನ್ಮುಂದೆ ಯಾವೊಬ್ಬ ಅಧಿಕಾರಿಯೂ ರೈತರು ಹಾಗೂ ಜನರಿಂದ ಲಂಚಕ್ಕೆ ಬೇಡಿಕೆ ಇಡುವಂತಿಲ್ಲ. ಈ ಬಗ್ಗೆ ಮಾಹಿತಿ ಬಂದರೆ ಅವರನ್ನು ಕೂಡಲೇ ಅಮಾನತು ಮಾಡಲಾಗುವುದು. ಪ್ರತಿ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ದೂರುಗಳು ಬಂದಿವೆ. ಈಗಲೇ ಇದಕ್ಕೆ ಇತಿಶ್ರೀ ಹಾಡಿ, ಇಲ್ಲದಿದ್ದರೆ ಅಮಾನತಿನೊಂದಿಗೆ ವರ್ಗಾವಣೆ ಮಾಡಬೇಕಾಗುತ್ತದೆ ಎಂದು ವಿನಯ ಕುಲಕರ್ಣಿ ಖಡಕ್ ಎಚ್ಚರಿಕೆ ನೀಡಿದರು. ಮುಂದಿನ ದಿನಗಳಲ್ಲಿ ಬರಗಾಲದ ಪರಿಸ್ಥಿತಿ ಹೇಗಿರಲಿದೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಆದ್ದರಿಂದ ಸಾರ್ವಜನಿಕರು ನೀರಿನ ಬಳಕೆಯಲ್ಲಿ ಎಚ್ಚರಿಕೆ ವಹಿಸಬೇಕು. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ದೊಡ್ಡ ಪ್ರಮಾಣದಲ್ಲಿ ಎದುರಾಗುವ ಸಾಧ್ಯತೆ ಇದೆ. ಸರ್ಕಾರ ಮುಂಜಾಗ್ರತಾ ಕ್ರಮಕೈಗೊಳ್ಳಲಿದ್ದು, ಸಾರ್ವಜನಿಕರು ಸಹಕರಿಸಬೇಕು.ಸಂತೋಷ ಲಾಡ್, ಉಸ್ತುವಾರಿ ಸಚಿವರು