ಹವಾಮಾನ ಆಧಾರಿತ ಬೆಳೆ ವಿಮಾ ಪರಿಹಾರ ನೀಡುವಲ್ಲಿ ರೈತರಿಗೆ ಮೋಸ ಮಾಡಿರುವ ವಿಮಾ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸುವ ಜತೆಗೆ ಮುಂದಿನ ಬಾರಿ ಇಂತಹ ಕಂಪನಿಗಳಿಗೆ ಗುತ್ತಿಗೆ ನೀಡದಂತೆ ಮಂಗಳವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಕನ್ನಡಪ್ರಭ ವಾರ್ತೆ ಸಾಗರ
ಹವಾಮಾನ ಆಧಾರಿತ ಬೆಳೆ ವಿಮಾ ಪರಿಹಾರ ನೀಡುವಲ್ಲಿ ರೈತರಿಗೆ ಮೋಸ ಮಾಡಿರುವ ವಿಮಾ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸುವ ಜತೆಗೆ ಮುಂದಿನ ಬಾರಿ ಇಂತಹ ಕಂಪನಿಗಳಿಗೆ ಗುತ್ತಿಗೆ ನೀಡದಂತೆ ಮಂಗಳವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತೋಟಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ವಿಮಾ ಪರಿಹಾರ ನೀಡುವಲ್ಲಿ ವಿಮಾ ಕಂಪನಿ ನಮ್ಮ ತಾಲೂಕಿನ ರೈತರಿಗೆ ಮೋಸ ಮಾಡಿದೆ. ಕಳೆದ ವರ್ಷ ಮಳೆಮಾಪನ ಕೇಂದ್ರಗಳ ಮಳೆ ಪ್ರಮಾಣ ಆಧರಿಸಿ ಸರಿಯಾಗಿ ಪರಿಹಾರ ನೀಡಿದೆ. ಆದರೆ ಈ ವರ್ಷ ಅತಿಹೆಚ್ಚು ಮಳೆಯಾಗಿದ್ದರೂ ಅತ್ಯಲ್ಪ ಪರಿಹಾರ ನೀಡಿ ಮೋಸ ಮಾಡಿದೆ. ಅಂತಹ ವಿಮಾ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದರು.
ಶಿಕಾರಿಪುರ ಹಾಗೂ ಸೊರಬ ತಾಲೂಕುಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರೂ ಸರಿಯಾಗಿ ವಿಮಾ ಪರಿಹಾರ ನೀಡಲಾಗಿದೆ. ಆದರೆ ನಮ್ಮ ತಾಲೂಕಿಗೆ ತಾರತಮ್ಯ ಮಾಡಲಾಗಿದೆ. ದರಿದ್ರ ಇನ್ಸೂರೆನ್ಸ್ ಕಂಪನಿಯಿಂದ ಸಾಗರ ಮತ್ತು ತೀರ್ಥಹಳ್ಳಿ ಭಾಗದ ರೈತರಿಗೆ ಮೋಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ರೈತರಿಗೆ ವಿಮಾ ಪರಿಹಾರ ಕೊಡುತ್ತೇವೆ ಎಂದು ಹಣ ಕಟ್ಟಿಸಿಕೊಂಡ ಕಂಪನಿ ನಡೆಯೇ ನಿಗೂಢವಾಗಿದೆ. ಸುಮಾರು ೧೪ ಬಹುರಾಷ್ಟ್ರೀಯ ಕಂಪನಿಗಳು ಇಂತಹ ವಿಮಾ ವಹಿವಾಟು ನಡೆಸುತ್ತಿದ್ದು, ರೈತರಿಗೆ ದೊಡ್ಡ ಮಟ್ಟದಲ್ಲಿ ವಂಚನೆ ಮಾಡಲಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆ ಅಧಿಕಾರಿ, ಮಳೆಮಾಪಕ ಕೇಂದ್ರದಿಂದ ಪಡೆದುಕೊಂಡ ಮಳೆ ಪ್ರಮಾಣದ ದಾಖಲೆಯನ್ನು ಪುನಃ ಪರಿಶೀಲಿಸಲು ಕ್ರಮ ಕೈಗೊಳ್ಳಲಾಗಿದೆ. ಮಳೆ ಪ್ರಮಾಣವನ್ನು ಮತ್ತೊಮ್ಮೆ ಅಂದಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ. ವರದಿ ಬಂದ ನಂತರ ವಿಮಾ ಪರಿಹಾರ ನಿಗದಿ ಮಾಡುತ್ತೇವೆ ಎಂದು ಸ್ಪಷ್ಟೀಕರಣ ನೀಡಿದರು.ಕೆಎಫ್‌ಡಿ ನಿರ್ಲಕ್ಷಿಸಿದರೆ ಸಹಿಸಲ್ಲ: ಮಾರಕವಾದ ಮಂಗನಕಾಯಿಲೆ ಬಗ್ಗೆ ಆರೋಗ್ಯ ಹಾಗೂ ಅರಣ್ಯ ಇಲಾಖೆಯವರು ಜಂಟಿಯಾಗಿ ಕಾರ್ಯನಿರ್ವಹಿಸಬೇಕು. ೨೦೧೯ರಲ್ಲಿ ತಾಲೂಕಿನ ಅರಳಗೋಡು ಭಾಗದಲ್ಲಿ ಈ ಕಾಯಿಲೆಯಿಂದ ೨೦ಕ್ಕೂ ಹೆಚ್ಚು ಜೀವಹಾನಿಯಾಗಿರುವುದನ್ನು ಮರೆಯಬಾರದು. ಮಂಗನಕಾಯಿಲೆ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದರೆ ಸಹಿಸುವುದಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕರು ಎಚ್ಚರಿಕೆ ನೀಡಿದರು.
ತಾಲೂಕಿನಲ್ಲಿ ಈವರೆಗೆ ಹಲವು ಮಂಗಗಳು ಸಾವನ್ನಪ್ಪಿರುವ ಘಟನೆ ನಡೆದಿದೆಯೇ ಹೊರತು ಮಂಗನಕಾಯಿಲೆ ಪ್ರಕರಣ ದಾಖಲಾಗಿಲ್ಲ. ಅಧಿಕಾರಿಗಳು ತಕ್ಷಣ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ ಶಾಸಕರು, ಕೆಎಫ್ಡಿ ಕುರಿತು ಸಣ್ಣ ಪ್ರಮಾಣದ ನಿರ್ಲಕ್ಷ್ಯ ಸಹ ಸಹಿಸಿಕೊಳ್ಳುವುದಿಲ್ಲ. ಗ್ರಾಮೀಣ ಮತ್ತು ನಗರ ಭಾಗದಲ್ಲಿ ಮಂಗ ಸತ್ತ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಮಂಗನ ಕಾಯಿಲೆ ಉಲ್ಬಣಗೊಂಡರೆ ಮಣಿಪಾಲ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಕೆಎಫ್ಡಿ ನಿಯಂತ್ರಣಕ್ಕೆ ವೈದ್ಯಾಧಿಕಾರಿಗಳು ಮತ್ತು ಅಧಿಕಾರಿಗಳ ತಂಡ ಮಾಡಿಕೊಂಡು ಸೋಂಕು ಇರುವ ಸ್ಥಳಗಳಿಗೆ ಭೇಟಿ ಕೊಟ್ಟು ಜನರಿಗೆ ಅರಿವು ಮೂಡಿಸುವಂತೆ ಸಲಹೆ ನೀಡಿದರು.ಸಾರ್ವಜನಿಕರು ಸಣ್ಣ ಪ್ರಮಾಣದ ಜ್ವರ ಕಾಣಿಸಿಕೊಂಡರೂ ನಿರ್ಲಕ್ಷ್ಯ ಮಾಡಬೇಡಿ. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ನಗರ ಪ್ರದೇಶದಲ್ಲಿ ಉಪವಿಭಾಗೀಯ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಂಡು ಔಷಧ ತೆಗೆದುಕೊಳ್ಳಬೇಕು. ಈಗಾಗಲೇ ಮಂಗಗಳು ಸಾವನ್ನಪ್ಪಿರುವ ಪ್ರದೇಶದ ಜನರು ಜ್ವರ ಕಾಣಿಸಿಕೊಂಡರೆ ಕಡ್ಡಾಯವಾಗಿ ರಕ್ತ ಪರೀಕ್ಷೆ ಮಾಡಿಕೊಳ್ಳಬೇಕು. ಈ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕು. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ಜಾಗೃತಿ ಮೂಡಿಸುವ ಜೊತೆಗೆ ಕಾಯಿಲೆ ಬಾರದಂತೆ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಕೊಡಿಸಿ ಎಂದು ಸೂಚಿಸಿದರು.
ತಹಸೀಲ್ದಾರ್ ರಶ್ಮಿ ಜೆ.ಎಚ್., ಕಾರ್ಯನಿರ್ವಹಣಾಧಿಕಾರಿ ಶಿವಪ್ರಕಾಶ್ ಬಿ.ಎಲ್., ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಟರಾಜ್, ಇಲಾಖೆಯ ಉಪನಿರ್ದೇಶಕ ಡಾ.ನಾಗರಾಜ್, ತಾ. ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್, ಕೆಡಿಪಿ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.